Advertisement

ಕೋಡಿ: ಮೀನುಗಾರರಿಗೆ ದೊರೆಯದ ಹಕ್ಕುಪತ್ರ

12:28 AM Jan 24, 2020 | Sriram |

ಹತ್ತಿಪ್ಪತ್ತು ವರ್ಷಗಳ ಹಿಂದೆ ಮಾಡಿದ ಸರ್ವೆ ಜಾಗ ಎಂದೋ ಸಮುದ್ರ ಪಾಲಾಗಿದೆ. ತಮ್ಮ ಜಾಗವನ್ನು ಉಳಿಸುವ ಬಗ್ಗೆ ಇಲ್ಲಿನ ಮೀನುಗಾರರು ಹಕ್ಕುಪತ್ರಕ್ಕಾಗಿ ಮನವಿ ಸಲ್ಲಿಸಿದ್ದರೂ ಇಲಾಖೆ ಪುರಸ್ಕರಿಸಿಲ್ಲ.

Advertisement

ಕುಂದಾಪುರ: ಕೋಡಿ ಸಮುದ್ರತೀರದಲ್ಲಿ ಅನೇಕ ವರ್ಷಗಳಿಂದ ವಾಸವಿರುವ 118 ಮೀನುಗಾರ ಕುಟುಂಬಗಳಿಗೆ ಸಿಆರ್‌ಝಡ್‌ ಪ್ರದೇಶ ಎಂದು 94ಸಿಸಿ ಹಕ್ಕುಪತ್ರ ನಿರಾಕರಿಸಲಾಗಿದೆ. ತಿದ್ದುಪಡಿಯಾದ ನಿಯಮಗಳ ಪ್ರಕಾರ ಇವರಿಗೆ ಹಕ್ಕುಪತ್ರ ಪಡೆಯುವ ಅರ್ಹತೆಯಿದ್ದರೂ ತಾಲೂಕು ಆಡಳಿತದ ನಿಧಾನಗತಿಯ ಧೋರಣೆಯಿಂದ ಇಲ್ಲಿನ ನಿವಾಸಿಗಳಿಗೆ ಅನ್ಯಾಯವಾಗುತ್ತಿದೆ. ಸಿಆರ್‌ಝೆಡ್‌ ಇಲಾಖೆ ಕೂಡಾ ನಿರಾಕ್ಷೇಪಣಾ ಪತ್ರ ನೀಡಲು ಮಂದಗತಿ ಮಾಡುತ್ತಿದೆ. ಕಳೆದ ಒಂದೂವರೆ ವರ್ಷದಿಂದ 94ಸಿಸಿಗಾಗಿ ಇವರ ಅಲೆದಾಟ ನಿಂತಿಲ್ಲ.

ಭೂಮಿ ಇದ್ದರೂ ದಾಖಲೆ ಇಲ್ಲ
ತಲೆತಲಾಂತರಗಳಿಂದ ಈ ಭಾಗದಲ್ಲಿ ಮೀನುಗಾರ ಕುಟುಂಬಗಳು ನೆಲೆಸಿದ್ದರೂ ಇನ್ನೂ ಸ್ವಂತ ನಿವೇಶನ ಹೊಂದಿಲ್ಲ. ಸಣ್ಣಪುಟ್ಟ ಮನೆಗಳಲ್ಲಿ ವಾಸಿಸುತ್ತಿದ್ದರೂ ಅದಕ್ಕೆ ದಾಖಲೆಗಳಿಲ್ಲ. ಹಾಗಾಗಿ ಇವರಿಗೆ ಸರಕಾರದ ವಸತಿ ಯೋಜನೆಗಳ ಪ್ರಯೋಜನ ಲಗಾವು ಆಗುವುದಿಲ್ಲ. ಬ್ಯಾಂಕಿನಿಂದ ಸಾಲ ತೆಗೆಯಲಾಗುವುದಿಲ್ಲ. ತಮ್ಮದೇ ಭೂಮಿ ಎಂದು ಹೇಳಿಕೊಳ್ಳುವಂತಿಲ್ಲ. ಹೇಳಿದರೂ ನೀಡಲು ದಾಖಲೆ ಏನೂ ಇಲ್ಲ.

118 ಅರ್ಜಿ ವಜಾ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯ ಸರಕಾರ ಅಕ್ರಮ ಸಕ್ರಮ ಯೋಜನೆಯಲ್ಲಿ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿಗೆ ನಿವೇಶನ ಅಥವಾ ಮನೆಯಡಿ ಜಾಗ ಮಂಜೂರು ಮಾಡುವ ಬಗ್ಗೆ ಗ್ರಾಮಾಂತರದಲ್ಲಿ 94ಸಿ, ನಗರ ಪ್ರದೇಶದಲ್ಲಿ 94ಸಿಸಿ ಯೋಜನೆ ಜಾರಿಮಾಡಿತು. ಪುರಸಭೆ ವ್ಯಾಪ್ತಿಯ ಕೋಡಿ ಪ್ರದೇಶದ 118 ಮಂದಿ ಅರ್ಜಿ ಸಲ್ಲಿಸಿದರು. ಆದರೆ ಅಷ್ಟೂ ಮಂದಿಯ ಅರ್ಜಿ ತಿರಸ್ಕರಿಸಲಾಗಿದೆ. ಇದಕ್ಕೆ ತಾಲೂಕು ಆಡಳಿತ ನೀಡಿದ ಕಾರಣ ಸಿಆರ್‌ಝಡ್‌ ವ್ಯಾಪ್ತಿ ಎಂದು.

ನಿರಾಕರಣೆ
ಸಿಆರ್‌ಝಡ್‌ ಕಾನೂನಿನ ಅಧ್ಯಯನ ಮಾಡದೇ ಇವರಿಗೆ ನಿವೇಶನ ಕೊಡುವುದನ್ನು ನಿರಾಕರಿಸಲಾಯಿತೇ, ಬಡವರಿಗೆ ಮೀಸಲಾದ ಭೂಮಿ ಕೊಡಲು ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯವೇ ಗೊತ್ತಿಲ್ಲ. ಒಟ್ಟಿನಲ್ಲಿ ಸಾರಾಸಗಟಾಗಿ ಅಷ್ಟೂ ಮಂದಿಯ ಅರ್ಜಿಯನ್ನು ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿದೆ ಎಂಬ ಏಕಕಾರಣದಿಂದ ತಿರಸ್ಕರಿಸಲಾಗಿದೆ.

Advertisement

ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕುಳಿತವರಿಗೆ ನಿವೇಶನ ಅಥವಾ ಮನೆಯಡಿ ಜಾಗ ಮಂಜೂರು ಮಾಡುವ ಬಗ್ಗೆ ಗ್ರಾಮಾಂತರದಲ್ಲಿ 94ಸಿ, ನಗರ ಪ್ರದೇಶದಲ್ಲಿ 94ಸಿಸಿ ಯೋಜನೆ ಜಾರಿಯಾಗಿತ್ತು. ಕೋಡಿ ಪ್ರದೇಶದ 118 ಮಂದಿ ಮೀನುಗಾರರೂ ಅರ್ಜಿ ಸಲ್ಲಿಸಿದರು. ಆದರೆ ಯಾರ ಅರ್ಜಿಯೂ ಪುರಸ್ಕೃತವಾಗಿಲ್ಲ.

ಕಾನೂನು ಏನು ಹೇಳುತ್ತದೆ?
ಸಿಆರ್‌ಝಡ್‌ ಕಾನೂನಿನ 1992ರಲ್ಲಿ ಜಾರಿಯಾದ ನಿಯಮದ ಪ್ರಕಾರ ಈ ಭಾಗದ ಜನರಿಗೆ ಮನೆ ಸ್ಥಳ ಮಂಜೂರು ಮಾಡಲು ಕಾನೂನಿನ ಅಡ್ಡಿಯಿಲ್ಲ. ಕೋಡಿ ಪ್ರದೇಶ ಸಿಆರ್‌ಝೆಡ್‌ 2 ವ್ಯಾಪ್ತಿಯಲ್ಲಿದ್ದು ಅದರಂತೆ 1992ಕ್ಕಿಂತ ಮೊದಲು ರಸ್ತೆಯಿದ್ದು ರಸ್ತೆಯ ಒಂದು ಭಾಗ ಸಮುದ್ರವಾದರೆ ಇನ್ನೊಂದು ಭಾಗದಲ್ಲಿ ಸಿಆರ್‌ಝೆಡ್‌ ನಿಯಮ ಅನ್ವಯವಾಗುವುದಿಲ್ಲ. ಸಿಆರ್‌ಝೆಡ್‌ 2 ವ್ಯಾಪ್ತಿಗೆ ಕುಂದಾಪುರ ಪುರಸಭೆಯನ್ನು ಮಾತ್ರ ಸೇರಿಸಲಾಗಿದೆ. ಹಾಗಾಗಿ ಗೋಪಾಡಿ, ಬೀಜಾಡಿ ಕಡೆಯವವರಿಗೆ ಈ ನಿಯಮದಂತೆ ಮನೆ ನಿವೇಶನ ದೊರೆಯುವುದಿಲ್ಲ. ಉಡುಪಿಯಲ್ಲಿರುವ ಸಿಆರ್‌ಝೆಡ್‌ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ತಂದಲ್ಲಿ ಹಕ್ಕುಪತ್ರ ದೊರೆಯಲಿದೆ.

ಮಾಹಿತಿ ನೀಡಲಾಗಿದೆ
ಪುರಸಭೆ ವತಿಯಿಂದ ಮಾಹಿತಿಗಳನ್ನು ನೀಡಲಾಗಿದ್ದು ಸಿಆರ್‌ಝೆಡ್‌ ಆದೇಶದ ಪ್ರತಿಗಳನ್ನು ಕೂಡಾ ಕೊಡಲಾಗಿದೆ. ಅದರಂತೆ ಕೋಡಿ ನಿವಾಸಿಗಳು ಹಕ್ಕುಪತ್ರಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.
-ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ

ವಾರದಲ್ಲಿ ಕ್ರಮ
ಕೆಲವು ದಿನಗಳ ಹಿಂದೆ ಸಿಆರ್‌ಝೆಡ್‌ ಇಲಾಖೆಯಿಂದ ಪತ್ರ ಬಂದಿದ್ದು ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದವರು ವಾಸ್ತವ್ಯಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಖುದ್ದಾಗಿ ನೀಡಬೇಕೆಂದು ಸೂಚಿಸಲಾಗಿದೆ. ಪಡಿತರ ಚೀಟಿ, ಆಧಾರ್‌, ವಾಸ್ತವ್ಯ ದೃಢಪತ್ರಿಕೆ ಸೇರಿದಂತೆ ಕೆಲವು ಮಾಹಿತಿಗಳನ್ನು ಕೇಳಿದ್ದು ಇವುಗಳನ್ನು ಖುದ್ದಾಗಿ ಒದಗಿಸಿದವರಿಗೆ ಅಲ್ಲಿಂದ ನಿರಾಕ್ಷೇಪಣಾ ಪತ್ರ ದೊರೆಯಲಿದೆ. ಈ ಕುರಿತು ಗ್ರಾಮಕರಣಿಕರ ಮೂಲಕ ಈ ವಾರದಲ್ಲೇ ಅಲ್ಲಿನ ನಿವಾಸಿಗಳಿಗೆ ಮಾಹಿತಿ ನೀಡುತ್ತೇವೆ.
– ತಿಪ್ಪೇಸ್ವಾಮಿ, ತಹಶೀಲ್ದಾರರು, ಕುಂದಾಪುರ

ಗುರುತಿಸಿಲ್ಲ
ಸಿಆರ್‌ಝೆಡ್‌ ಇಲಾಖೆ ಈವರೆಗೂ ತನ್ನ ವ್ಯಾಪ್ತಿ ಯಾವುದು, ಎಷ್ಟಿದೆ, ಎಲ್ಲಿದೆ ಎಂದು ಭೂಗಡಿ ಗುರುತು ಮಾಡಿಲ್ಲ. ಕೇವಲ ನಕ್ಷೆಯಲ್ಲಿ, ಉಪಗ್ರಹ ಸರ್ವೆಯಲ್ಲಿ ಸಿಆರ್‌ಝೆಡ್‌ ವ್ಯಾಪ್ತಿ ಇದೆ, ಸರ್ವೆ ನಂಬರ್‌ನಲ್ಲಿದೆ ಬಿಟ್ಟರೆ ಆ ಭಾಗ ಎಲ್ಲಿದೆ ಎಂದು ತಿಳಿದಂತಿಲ್ಲ. ಹತ್ತಿಪ್ಪತ್ತು ವರ್ಷಗಳ ಹಿಂದೆ ಮಾಡಿದ ಸರ್ವೆ ನಂಬರ್‌ನ ಜಾಗ ಎಂದೋ ಸಮುದ್ರಪಾಲಾಗಿದೆ. ಹಾಗಾಗಿ ಗಡಿ ಗುರುತು ಮಾಡಿ ಇಲಾಖೆ ಜಾಗ ರಕ್ಷಿಸಿಕೊಳ್ಳಬೇಕಿದೆ ಎನ್ನುತ್ತಾರೆ ಈ ಭಾಗದ ಜನತೆ. ಇಲ್ಲದಿದ್ದರೆ ಇಲ್ಲಿನ ನಿವಾಸಿಗಳ ಜಾಗವನ್ನೇ ತಮ್ಮದು ಎಂದು ಇಲಾಖೆ ಹೇಳಬಹುದೆಂಬ ಆತಂಕವೂ ಇದೆ.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next