ಕೋವಿಡ್ ಆತಂಕ ದೂರವಾಗಿ ಎಲ್ಲವೂ ಸಹಜಸ್ಥಿತಿಗೆ ಬಂದಿರುವುದರಿಂದ, “ಕೊಡೆ ಮುರುಗ’ ಸಿನಿಮಾವನ್ನು ಮತ್ತೆ ಮರು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಈಗಾಗಲೇ “ಕೊಡೆ ಮುರುಗ’ನ ರೀ-ರಿಲೀಸ್‌ಗೆ ತಯಾರಿ ಮಾಡಿಕೊಳ್ಳುತ್ತಿರುವ ಚಿತ್ರತಂಡ, ಇದೇ ಮಾರ್ಚ್ 10ರಂದು ಸಿನಿಮಾವನ್ನು ಮತ್ತೆ ಥಿಯೇಟರ್‌ಗೆ ತರುತ್ತಿದೆ.
ಈ ಬಗ್ಗೆ ಮಾತನಾಡುವ “ಕೊಡೆ ಮುರುಗ’ ನಿರ್ದೇಶಕ ಸುಬ್ರಮಣ್ಯ ಪ್ರಸಾದ್, “ಆರಂಭದಲ್ಲಿ ಸಿನಿಮಾ ಬಿಡುಗಡೆಯಾದಾಗ ನೋಡಿದವರು ಸಿನಿಮಾದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಕೋವಿಡ್‌ನಿಂದಾಗಿ ಸಿನಿಮಾ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಲಿಲ್ಲ. ಒಂದೊಳ್ಳೆ ಸಿನಿಮಾವನ್ನು ಮತ್ತೆ ಪ್ರೇಕ್ಷಕರಿಗೆ ತಲುಪಿಸಬೇಕೆಂಬ ಕಾರಣದಿಂದ “ಕೊಡೆ ಮುರುಗ’ನನ್ನು ಮತ್ತೆ ರೀ-ರಿಲೀಸ್ ಮಾಡುತ್ತಿದ್ದೇವೆ’ ಎನ್ನುತ್ತಾರೆ.
ಇನ್ನು ಸಿನಿಮಾದ ನಿರ್ಮಾಪಕ ಕೆ. ರವಿಕುಮಾರ್ ಮತ್ತು ಅಶೋಕ್ ಶಿರಾಲಿ ಅವರಿಗೂ “ಕೊಡೆ ಮುರುಗ’ ಮರು ಬಿಡುಗಡೆಯ ಬಗ್ಗೆ ಸಾಕಷ್ಟು ವಿಶ್ವಾಸವಿದೆ. “ಒಂದು ಒಳ್ಳೆಯ ಸಿನಿಮಾ, ಸರಿಯಾದ ಸಮಯದಲ್ಲಿ ತೆರೆ ಕಾಣಲಿಲ್ಲ. ಹಾಗಾಗಿ ಸಿನಿಮಾ ಪ್ರೇಕ್ಷಕರಿಗೆ ತಲುಪಲಿಲ್ಲ. ಈಗ ಪ್ರೇಕ್ಷಕರು ಮತ್ತೆ ಮೊದಲಿನಂತೆ ಥಿಯೇಟರ್‌ಗೆ ಬಂದು ಹೊಸಪ್ರಯತ್ನದ ಸಿನಿಮಾಗಳನ್ನು ಗೆಲ್ಲಿಸುತ್ತಿದ್ದಾರೆ. ಹಾಗಾಗಿ “ಕೊಡೆ ಮುರುಗ’ನನ್ನು ಮತ್ತೆ ರಾಜ್ಯಾದ್ಯಂತ ಸುಮಾರು 50ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
ಮುನಿಕೃಷ್ಣ, ಸುಬ್ರಮಣ್ಯ ಪ್ರಸಾದ್, ಪಲ್ಲವಿ ಗೌಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಕೊಡೆ ಮುರುಗ’ ಸಿನಿಮಾದಲ್ಲಿ ನಟ ಲೂಸ್‌ಮಾದ ಯೋಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.