ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿನ ಒಂಭತ್ತನೇ ಕೊಡ್ಯಮ್ಮೆ ವಾರ್ಡಿನ ಕೊಡ್ಯಮ್ಮೆ ಶಾಲೆ ನಾಯ್ಕಪು ರಸ್ತೆಯ ಮೋರಿಸಂಕ ಕುಸಿದು ಸಂಚಾರಕ್ಕೆ ತಡೆಯಾಗಿದೆ.ಆರಿಕ್ಕಾಡಿ ಬಂಬ್ರಾಣ ಕಟ್ಟತ್ತಡ್ಕ ರಸ್ತೆಯಿಂದ ಕವಲೊಡೆದು ಸಾಗುವ ಒಂದು ಕೀ.ಮಿ.ರಸ್ತೆಯ ಮಧ್ಯೆ ಕೊಡ್ಯಮ್ಮೆ ಮಸೀದಿ ಬಳಿಯಲ್ಲಿ ಹಳೆಯದಾದ ಮೋರಿಸಂಕ ಕಳೆದ ಜು.19 ರಂದು ಮುಂಜಾನೆ ಕುಸಿದು ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕಡಿತಗೊಂಡಿದೆ.ಮೋರಿಯ ಸಂಕರ್ಪ ರಸ್ತೆಯೂ ಸುಮಾರು 10 ಮೀಟರ್ ರಸ್ತೆ
ಕುಸಿದು ಇಕ್ಕೆಡೆಗಳಲ್ಲಿ ಬಿರುಕು ಬಿಟ್ಟಿದೆ.ಇದರಿಂದ ಕೊಡ್ಯಮ್ಮೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸುತ್ತು ಬಳಸಿ ಶಾಲೆ ಸೇರಬೇಕಾಗಿದೆ. ಗ್ರಾಮಸ್ಥರು ಸಂಕಷ್ಟ ಅನುಭವಿಸಬೇಕಾಗಿದೆ.
ಕಳೆದ 2015-16 ನೇ ವರ್ಷದಲ್ಲಿ 4.5 ಲಕ್ಷ ಯೋಜನೆಯಲ್ಲಿ ಈ ರಸ್ತೆಗೆ ಡಾಮರು ಕಾಮಗಾರಿ ಕೈಗೊಳ್ಳಲಾಗಿತ್ತು.ಆದರೆ ಸುಮಾರು 40 ವರ್ಷದ ಹಿಂದೆ ರಸ್ತೆಯ ತೋಡಿನ ಬದಿಗೆ ಕಗ್ಗಲ್ಲು ಕಟ್ಟಿ ಇದರ ಮೇಲೆ ನಿರ್ಮಿಸಿದ ಶಿಥಿಲ ಮೋರಿ ಸಂಕ ಸಂಕದ ಮೇಲೆಯೇ ಡಾಮರು ಕಾಮಗಾರಿ ನಡೆಸಿದ ಕಾರಣ ಸಂಕ ಕುಸಿಯಲು ಕಾರಣವಾಗಿದೆ.ಪ್ರಕೃತ ರಸ್ತೆ ಸಂಪರ್ಕಕಕ್ಕೆ ಕುಸಿದ ಸಂಕದ ಮೇಲೆ ಕಂಗಿನ ತಾತ್ಕಾಲಿಕ ಸಂಕವನ್ನು ನಿರ್ಮಿಸಲಾಗಿದೆ.ಇದರಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಜೀವ ಕೈಯ್ಯಲ್ಲಿ ಹಿಡಿದು ಸರ್ಕಸ್ ಪ್ರಯಾಣದ ಮೂಲಕ ಸಾಗಬೇಕಾಗಿದೆ.ಆಯ ತಪ್ಪಿ ಕೆಳಗಿನ ತೋಡಿಗೆ ಬಿದ್ದಲ್ಲಿ ಭಾರೀ ದುರಂತ ಸಂಭವಿಸಲಿದೆ.
ರಸ್ತೆಯ ಅಭಿವೃದ್ಧಿಗೆ ಪ್ರಭಾಕರನ್ ಆಯೋಗದ ಕಾಸರಗೋಡು ಅಭಿವೃದ್ಧಿ ಅಡಿಯಲ್ಲಿ ಕಳೆದ ವರ್ಷ 77 ಲಕ್ಷ ರೂ. ಗಳ ಯೋಜನೆಯನ್ನು ಸಿದ್ಧ ಪಡಿಸಿ ಟೆಂಡರ್ ಕರೆಯಲಾಗಿತ್ತು.ಆದರೆ ಕಾಮಗಾರಿಗೆ ಬಳಸುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಕಾಮಗಾರಿ ನಿರ್ವಹಿಸಲು ಅಸಾಧ್ಯವೆಂಬುದಾಗಿ ರಸ್ತೆ ಗುತ್ತಿಗೆ ವಹಿಸಲು ಗುತ್ತಿಗೆದಾರರರು ಹಿಂದೇಟು ಹಾಕಿದ ಕಾರಣ ಟೆಂಡರ್ ಮೊಟಕುಗೊಂಡಿತ್ತು.ಬಳಿಕ ಜಿಲ್ಲಾಧಿಕಾರಿಯವರ ಆದೇಶದಂತೆ ಕುಂಬಳೆ ಗ್ರಾಮ ಪಂಚಾಯತ್ ವತಿಯಿಂದ 23 ಲಕ್ಷ ರೂ. ಹೆಚ್ಚಿನ ನಿಧಿ ಪಾವತಿಸಲಾಗಿದೆ.ಒಟ್ಟು ಒಂದು ಕೋಟಿ ರೂ. ಯೋಜನೆಯ ಕಾಮಗಾರಿಗೆ ಗ್ರಾ ಪಂ. ಆಡಳಿತ ಅನುಮತಿ ನೀಡಿ ತಾಂತ್ರಿಕ ಅನುಮತಿಗಾಗಿ ಮೇಲಾಧಿಕಾರಿಗಳಿಗೆ ಕಳುಹಿಸಲಾಗಿದೆ.ಈ ಯೋಜನೆ ಸಾಕಾರಗೊಂಡಲ್ಲಿ ಸಂಚಾರ ಸುಗಮಗೊಳ್ಳಲಿದೆ.ಆದಷ್ಟು ಶೀಘ್ರದಲ್ಲಿ ಕಾಮಗಾರಿ ನಡೆಸಿ ರಸ್ತೆ ಸಂಚಾರ ಸುಗಮಗೋಲಿಸಬೇಕೆಂಬ ಬೇಡಿಕೆ ರಸ್ತೆ ಫಲಾನುಭವಿಗಳದು.
ಶೀಘ್ರದಲ್ಲಿ ಸಂಚಾರ ಯೋಗ್ಯ
ತಾನು ಪ್ರತಿನಿಧೀಕರಿಸುವ ಗ್ರಾಮೀಣ ಪ್ರದೇಶದ ವಾರ್ಡಿನ ರಸ್ತೆಯಾಗಿದ್ದು ಕಾಸರಗೋಡು ಅಭಿವೃದ್ಧಿ ಯೋಜನೆಯಲ್ಲಿ ಒಳಪಡಿಸಿದ ಈ ರಸ್ತೆಯನ್ನು 1ಕೋಟಿ ವೆಚ್ಚದ ಮೂಲಕ ಶೀಘ್ರದಲ್ಲಿ ಸಂಚಾರ ಯೋಗ್ಯಗೊಳಿಸಲಾಗುವುದು.ಪ್ರಯಾಣಿಕರ ಸಂಚಾರಕ್ಕೆ ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ ಕುಸಿದ ಸೇತುವೆಯ ಪಕ್ಕದಲ್ಲಿ ಕಬ್ಬಿಣದ ಕಾಲು ಸಂಕವನ್ನು ತುರ್ತಾಗಿ ನಿರ್ಮಿಸಲಾಗುವುದು.
-ಪುಂಡರೀಕಾಕ್ಷ ಕೆ.ಎಲ್.
ಅಧ್ಯಕ್ಷರು ಕುಂಬಳೆ ಗ್ರಾಮ ಪಂಚಾಯತ್
ಸಂಭಾವ್ಯ ದುರಂತ ತಪ್ಪಿದೆ
ಹಳೆಯದಾದ ಮೋರಿ ಸಂಕ ಕುಸಿಯುವ ಕೆಲವೇ ಹೊತ್ತಿಗೆ ಮುನ್ನ ಮುಂಜಾನೆ ಮರಳು ಹೇರಿದ ಲಾರಿಯೊಂದು ರಸ್ತೆಯಲ್ಲಿ ಸಾಗಿತ್ತು.ಅಕ್ರಮ ಮರಳು ಸಾಗಾಟಕ್ಕೆ ಈ ರಸ್ತೆ ರಹದಾರಿಯಾಗಿದ್ದು ಭಾರ ತುಂಬಿದ ಲಾರಿಗಳು ಸಾಗುತ್ತಿರುವುದು ರಸ್ತೆ ಕೆಡಲು ಮತ್ತು ಸಂಕ ಕುಸಿಯಲು ಕಾರಣವಾಗಿದೆ.ಪುಣ್ಯಕ್ಕೆ ಮುಂಜಾನೆ ಸಂಕ ಕುಸಿದ ಕಾರಣ ಸಂಭಾವ್ಯ ದುರಂತ ತಪ್ಪಿದಂತಾಗಿದೆ.
–ಅಬೂಬಕ್ಕರ್ ಕೊಡ್ಯಮ್ಮೆ
ಸ್ಥಳೀಯ ನಿವಾಸಿ