ಮಡಿಕೇರಿ: ಕೊಡಗಿನ ವೈಶಿಷ್ಟ್ಯಪೂರ್ಣ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಕುರಿತು ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ಕೊಡವ ಯುವ ಮೇಳವು ಜಬ್ಬೂಮಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ, ಅತ್ಯಾಕರ್ಷಕ ಮೆರವಣಿಗೆ, ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು.
ಶನಿವಾರ ಬೆಳಗ್ಗೆ ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಬಳಿ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೊಡವ ಜನಾಂಗದ ಸಾಧಕರ ಭಾವಚಿತ್ರಗಳೊಂದಿಗೆ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿದ ಯುವಕರು, ಯುವತಿಯರು, ಕೊಡವ ಪರಂಪರೆಯ ಸಂಕೇತವಾದ ಕೋವಿಯನ್ನು ಹಿಡಿದು ಮೆರವಣಿಗೆಯಲ್ಲಿ ಗತ್ತಿನಿಂದ ಹೆಜ್ಜೆ ಹಾಕಿದರು.
ಮೆರವಣಿಗೆಯಲ್ಲಿ ಹಲವಾರು ಮಂದಿ ಬೈಕ್ ಜಾಥಾ ನಡೆಸಿ ಕುತೂಹಲ ಮೂಡಿಸಿದರೆ, ದುಡಿಕೊಟ್ಟ್ ಪಾಟ್, ಕೊಂಬು ಕೊಟ್ಟ್ ವಾಲಗಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಹಲವರು ಮೆರವಣಿಗೆಯ ಕಳೆ ಹೆಚ್ಚಿಸಿದರೆ, ಸಾಂಪ್ರದಾಯಿಕ ಒಡಿಕತ್ತಿ ಹಿಡಿದು ಶಿಸ್ತಿನಿಂದ ಹೆಜ್ಜೆ ಹಾಕಿ ಕೊಡವ ಸಂಸ್ಕೃತಿಯ ಶ್ರೀಮಂತಿಕೆ ಪಸರಿಸಿದರು.
ತೆರೆದ ವಾಹನದಲ್ಲಿ ಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಸಾಧಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯುದ್ದಕ್ಕೂ ಕೊಡವ ವಾಲಗಕ್ಕೆ ಯುವ ಸಮುದಾಯ ಕುಣಿದು ಕುಪ್ಪಳಿಸಿತು. ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಅಲ್ಲದೇ ಬೆಂಗಳೂರು, ಮೈಸೂರು, ಮಂಗಳೂರು ಮತ್ತಿತರರ ಕಡೆಗಳಿಂದಲೂ ಕೊಡವ ಜನಾಂಗದವರು ಪಾಲ್ಗೊಂಡದ್ದು ವಿಶೇಷ. ಮೆರವಣಿಗೆ ಸಂದರ್ಭ ಸ್ವಾಡ್ರನ್‌ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆ, ಮಂಗೇರಿರ ಮತ್ತಣ್ಣ ಪ್ರತಿಮೆ, ಜನರಲ್ ತಿಮ್ಮಯ್ಯ ಪ್ರತಿಮೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಕೊಡವ ಸಂಸ್ಕೃತಿಯ ಮರೆಯದಿರಿ
ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಜಬ್ಬೂಮಿ ಚಾರಿಟೆಬಲ್ ಟ್ರಸ್ಟ್‌ನ ಸಂಚಾಲಕ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಅವರು ಮಾತನಾಡಿ, ಕೊಡಗಿನ ಸಂಸ್ಕೃತಿ, ಪರಂಪರೆಗಳನ್ನು ಯುವ ಸಮೂಹ ಎಂದಿಗೂ ಮರೆಯಕೂಡದು. ಅದೇ ಕೊಡವ ಸಮುದಾಯದ ತಾಯಿಬೇರು ಎಂದು ಈ ನೆಲದ ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು.