Advertisement

ಹಮ್ಮಿಯಾಲದಲ್ಲಿ ಸಂಭ್ರಮದಿಂದ ಜರುಗಿದ ಕಳಿನಮ್ಮೆ

09:35 AM Mar 31, 2018 | Team Udayavani |

ಮಡಿಕೇರಿ: ಕೊಡವ ಸಾಹಿತ್ಯ ಅಕಡಾಮಿ ವತಿಯಿಂದ ಹಮ್ಮಿಯಾಲ ಗ್ರಾಮದಲ್ಲಿ ಕಳಿನಮ್ಮೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.ಹಮ್ಮಿಯಾಲ, ಹಚ್ಚಿನಾಡು, ಮುಟ್ಲು ಗ್ರಾಮಸ್ಥರಿಗಾಗಿ ನಡೆದ ಕಳಿನಮ್ಮೆಗೆ ಮೀನಿಗೆ ಅಕ್ಕಿ ಹಾಕುವ ಸಂಪ್ರದಾಯದಂತೆ ಅತಿಥಿಗಳು ಚಾಲನೆ ನೀಡಿದರು.

Advertisement

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಮೂಲ ಸಂಸ್ಕೃತಿ ಉಳಿದಿರುವುದೇ ಗ್ರಾಮೀಣ ಪ್ರದೇಶದಲ್ಲಿ ಎಂದು ಅಭಿಪ್ರಾಯಪಟ್ಟರು. ಕಳಿನಮ್ಮೆ ಕಾರ್ಯಕ್ರಮ ಹಮ್ಮಿಯಾಲ, ಮುಟ್ಲು, ಹಚ್ಚಿನಾಡು ಗ್ರಾಮದವರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದು, ಗ್ರಾಮೀಣರು ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕೆಂದು ಕರೆ ನೀಡಿದರು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪೆಮ್ಮಂಡ ಪೊನ್ನಪ್ಪ ಮಾತನಾಡಿ ಕಳಿನಮ್ಮೆಯಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ನಡೆಯಬೇಕೆಂದರು. ಮೂಲ ಸಂಸ್ಕೃತಿಯ ಮೂಲಕ ಗ್ರಾಮೀಣ ಸೊಗಡು ಗಟ್ಟಿಯಾಗಬೇಕು ಮತ್ತು ಈ ರೀತಿಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುಭಾಷ್‌ ಸೋಮಯ್ಯ, ಗ್ರಾಮೀಣರ ಕ್ರೀಡಾ ಉತ್ಸಾಹವನ್ನು ಹೆಚ್ಚಿಸಲು ಕಳಿನಮ್ಮೆ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಿದೆ ಎಂದರು. ಕೊಡವ ಸಾಹಿತ್ಯ ಅಕಾಡೆಮಿಯ ಪ್ರಯತ್ನಗಳು ಶ್ಲಾಘನೀಯವಾಗಿದ್ದು, ಗ್ರಾಮಸ್ಥರ ಸಹಕಾರ ಅಗತ್ಯವೆಂದರು.

ಜಿ.ಪಂ ಅಧ್ಯಕ್ಷ  ಬಿ.ಎ.ಹರೀಶ್‌ ಮಾತನಾಡಿ ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚು ಹೆಚ್ಚು ನಡೆಯ ಬೇಕೆಂದರು.
 ಸ್ಥಳೀಯ ನಿವಾಸಿ ನಾಟಿ ಔಷಧಿ ಚಿಕಿತ್ಸಕರಾದ ಪಿ.ರವಿ, ಹೆರಿಗೆ ತಜ್ಞರಾದ ಕೆ.ಗಂಗವ್ವ ಹಾಗೂ ಶತಾಯುಷಿ ಮೊಣ್ಣಂಡ ಸೋಮಯ್ಯ ಅವರನ್ನು ಗಣ್ಯರು ಇದೇ ಸಂದರ್ಭ ಸನ್ಮಾನಿಸಿದರು.

ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, ಕುಕ್ಕೆ ನೇಯುವುದು ಸೇರಿದಂತೆ ಅನೇಕ ಗ್ರಾಮೀಣ ಕ್ರೀಡೆಗಳಲ್ಲಿ ಗ್ರಾಮಸ್ಥರು ಸಂಭ್ರಮದಿಂದ ಪಾಲ್ಗೊಂಡರು. ಕಾರ್ಯಕ್ರಮದ ಕೊನೆಯಲ್ಲಿ ವಾಲಗ ತಾಟ್‌ ಸ್ಪರ್ಧೆ ನಡೆಯಿತು.

Advertisement

ಸಮಾರಂಭದಲ್ಲಿ ಕೊಡವ ಸಾಹಿತ್ಯ ಅಕಾಡಮಿಯ ಸದಸ್ಯರಾದ ಐತಿಚಂಡ ರಮೇಶ್‌ ಉತ್ತಪ್ಪ, ಕುಡಿಯರ ಶಾರದ ಗಣಪತಿ, ಟಾಟು ಮೊಣ್ಣಪ್ಪ, ಚಂಗುಲಂಡ ಸೂರಜ್‌, ಗಾಳಿಬೀಡು ಗ್ರಾ.ಪಂ ಸದಸ್ಯ ರಮೇಶ್‌ ಹಾಜರಿದ್ದರು. ಬೊಳ್ಳಜ್ಜಿರ ಅಯ್ಯಪ್ಪ ಸ್ವಾಗತಿಸಿ, ಉಮೇಶ್‌ ಕೇಚಮ್ಮಯ್ಯ ನಿರೂಪಿಸಿದರು, ಸುಳ್ಳಿಮಾಡ ಭವಾನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next