ಕೊಡಗು: ಏಜೆಂಟ್ ಮೂಲಕ ಕುವೈಟ್ ಗೆ ಕೆಲಸಕ್ಕೆಂದು ಹೋದ ಕೊಡಗಿನ ಮಹಿಳೆಯೊಬ್ಬರು ವೀಸಾ ಅವಧಿ ಮುಗಿದ ಬಳಿಕ ಕುವೈಟ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು ಕೊಡಗು ಜಿಲ್ಲಾಡಳಿತದ ಸತತ ಪ್ರಯತ್ನದ ಮೂಲಕ ಸಂತ್ರಸ್ತ ಮಹಿಳೆಯನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಘಟನೆ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ನಿವಾಸಿಯಾದ ಪಾರ್ವತಿ ಎಂಬ ಮಹಿಳೆ ಕುವೈತ್ ದೇಶಕ್ಕೆ ಕೆಲಸಕ್ಕೆಂದು ಏಜೆಂಟ್ ಮುಖಾಂತರ ತೆರಳಿದ್ದರು. ಆದರೆ ಅಲ್ಲಿ ಮಹಿಳೆಯ ವೀಸಾ ಅವಧಿ ಮುಗಿದ ಬಳಿಕ ಏಜೆಂಟ್ ವೀಸಾ ನವೀಕರಿಸದೆ ಮಹಿಳೆಯನ್ನು ಊರಿಗೂ ಕಳುಹಿಸದೆ ಕೂಡಿ ಹಾಕಿದ್ದರು. ಈ ವಿಚಾರವನ್ನು ಮಹಿಳೆ ತನ್ನ ತಾಯಿಗೆ ದೂರವಾಣಿ ಮೂಲಕ ಹೇಳಿಕೊಂಡಿದ್ದಾರೆ, ಮಹಿಳೆಯ ತಾಯಿ ವಿಚಾರದ ಬಗ್ಗೆ ಕೊಡಗು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.
ದೂರು ಸ್ವೀಕೃತವಾದ ಕೂಡಲೇ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್ ಅವರಿಗೆ ಸಂತ್ರಸ್ತ ಮಹಿಳೆಯನ್ನು ಕ್ಷೇಮವಾಗಿ ಕರೆ ತರುವ ಜವಾಬ್ದಾರಿ ವಹಿಸಿದ್ದರು. ಬಳಿಕ ಜಿಲ್ಲಾಡಳಿತ ಸಂತ್ರಸ್ತ ಮಹಿಳೆಯೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಅವರಿದ್ದ ಸ್ಥಳವನ್ನು ಗುರುತಿಸಿ ಕುವೈತ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯದ ಸಂಪರ್ಕ ಸಾಧಿಸಿ ಸತತ ಪ್ರಯತ್ನದ ಮೂಲಕ ಭಾರತೀಯ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಕೊಡಗು ಜಿಲ್ಲಾಡಳಿತ ಸಂತ್ರಸ್ತ ಮಹಿಳೆಯನ್ನು ಕ್ಷೇಮವಾಗಿ ಭಾರತಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದೆ.
ಅದರಂತೆ ಇಂದು(ಮಂಗಳವಾರ) ಬೆಳಿಗ್ಗೆ ಸಂತ್ರಸ್ತ ಮಹಿಳೆ ೯;೧೦ ನಿಮಿಷಕ್ಕೆ ಚೆನ್ನೈ ಗೆ ತಲುಪಿದ್ದಾರೆ. ಅಲ್ಲಿಂದ ಕೊಡಗಿಗೆ ಬರುತ್ತಿರುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ