Advertisement
ಜೀವನದಿ ಕಾವೇರಿ ಮತ್ತೆ ಉಕ್ಕಿ ಹರಿಯಲಾರಂಭಿಸಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಏರ್ಪಟ್ಟಿದೆ. ಗಾಳಿ, ಮಳೆಯ ಆರ್ಭಟಕ್ಕೆ ರಸ್ತೆ ಸಂಪರ್ಕ ಕಡಿತವಾಗಿದೆ. ಹಲವೆಡೆ ಮರಗಳು ಧರೆಗುರುಳಿವೆ. ಮನೆಗಳು ಕುಸಿದು ಅಪಾರ ಹಾನಿ ಸಂಭವಿಸಿದೆ. ಭಾಗಮಂಡಲದ ಅಯ್ಯಂಗೇರಿ ರಸ್ತೆಯ ಮೇಲೆ ಪ್ರವಾಹದ ನೀರು ಹರಿಯುತ್ತಿದೆ. ಮಳೆಯ ಆರ್ಭಟ ಮುಂದುವರಿದಲ್ಲಿ ಮಡಿಕೇರಿ ರಸ್ತೆಯೂ ಮುಳುಗಡೆಯಾಗುವ ಸಾಧ್ಯತೆಗಳಿವೆ.
ಕಾವೇರಿ ನದಿ ಪಾತ್ರದ ನಾಪೋಕ್ಲು, ಮೂರ್ನಾಡು, ಸಿದ್ದಾಪುರ ವಿಭಾಗ ಗಳಲ್ಲಿಯೂ ಮಹಾಮಳೆ ಯಾಗುತ್ತಿದೆ. ನಾಪೋಕ್ಲು ಬಳಿಯ ಬೊಳಿಬಾಣೆಯಲ್ಲಿ ರಸ್ತೆಯ ಮೇಲೆ ಪ್ರವಾಹದ ನೀರು ಆವರಿಸಿದ್ದು, ಸಂಪರ್ಕ ಕಡಿತಗೊಂಡಿದೆ. ನಾಪೋಕ್ಲು-ಚೆರಿಯಪರಂಬು-ಕಲ್ಲುಮೊಟ್ಟೆ ರಸ್ತೆಯಲ್ಲೂ ವಾಹನ ಸಂಚಾರ ಅಸಾಧ್ಯವಾಗಿದೆ.
Related Articles
ಹೊದವಾಡ ಮತ್ತು ಕೊಟ್ಟಮುಡಿ ಮೂಲಕ ನಾಪೋಕ್ಲುವಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಾರ್ಶ್ವ ಕುಸಿದಿದೆ. ಲೋಕೋಪಯೋಗಿ ಇಲಾಖೆ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಿದ್ದು, ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಭಾರೀ ವಾಹನಗಳು ಪರ್ಯಾಯ ಮಾರ್ಗವಾಗಿ ಹೊದವಾಡ-ಬೊಳಿಬಾಣೆ ಮೂಲಕ ನಾಪೋಕ್ಲು ಹಾಗೂ ಮೂರ್ನಾಡು ಕಡೆಗಳಿಗೆ ಸಂಚರಿಸಬಹುದಾಗಿದೆ.
Advertisement
ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ, ತಹಶೀಲ್ದಾರ್ ಪಿ.ಎಸ್. ಮಹೇಶ್ ಹಾಗೂ ಲೋಕೋಪಯೋಗಿ ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲಿಸಿದರು.
ಕುಟುಂಬಗಳ ಸ್ಥಳಾಂತರವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ತೋರ ಗ್ರಾಮದ 15 ಕುಟುಂಬಗಳ 41 ಸದಸ್ಯರನ್ನು ತೋಮರ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 2019ರಲ್ಲಿ ತೋರ ಗ್ರಾಮದಲ್ಲಿ ಗುಡ್ಡ ಕುಸಿದು ಜೀವಹಾನಿ ಉಂಟಾಗಿತ್ತು. ಮನೆ ಕುಸಿತ
ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಚಂದಮಕ್ಕಿ ಗ್ರಾಮದ ಲಕ್ಷ್ಮಣ್ ಹಾಗೂ ಮಾಲಂಬಿ ಕೂಡು ರಸ್ತೆಯ ಲಕ್ಷ್ಮಮ್ಮ ಮುತ್ತಣ್ಣ ಅವರ ಮನೆ ಕುಸಿದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಮದೆ ಗ್ರಾ.ಪಂ. ವ್ಯಾಪ್ತಿಯಲ್ಲೂ ಮನೆಗಳಿಗೆ ಹಾನಿಯಾಗಿದೆ. ರೆಡ್ ಅಲರ್ಟ್
ಮಳೆಯ ಅಬ್ಬರ ಜು. 7ರಂದು ಕೂಡ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.