Advertisement

ಕೊಡಗು ಪ್ರಾಕೃತಿಕ ವಿಕೋಪ ಪುನರ್ವಸತಿ: 463 ಮನೆಗಳು ಮಾಸಾಂತ್ಯದಲ್ಲಿ ಹಸ್ತಾಂತರ

03:30 AM May 16, 2020 | Sriram |

ಸುಳ್ಯ: ಎರಡು ವರ್ಷಗಳ ಹಿಂದೆ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡಿದ್ದ ಕೊಡಗಿನ 463 ಕುಟುಂಬಗಳಿಗೆ ಸೂರು ಸಿದ್ಧವಾಗಿದೆ. ದ.ಕ. ಜಿಲ್ಲೆಯ ಗಡಿಭಾಗದ ಸನಿಹ ದಲ್ಲಿರುವ ಮದೆಯಲ್ಲಿ 80 ಮತ್ತು ಜಂಬೂರು ಗ್ರಾಮದಲ್ಲಿ 383 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಮಾಸಾಂತ್ಯಕ್ಕೆ ಫ‌ಲಾನುಭವಿಗಳಿಗೆ ಹಸ್ತಾಂತರ ನಡೆಯಲಿದೆ.

Advertisement

2018ರಲ್ಲಿ ಭೀಕರ ಪಾಕೃತಿಕ ವಿಕೋಪದ ಪರಿಣಾಮ ಕೊಡಗಿನ 48 ಗ್ರಾಮ ಗಳಲ್ಲಿ ಅಪಾರ ಹಾನಿ ಸಂಭವಿಸಿತ್ತು. 850ಕ್ಕೂ ಅಧಿಕ ಕುಟುಂಬಗಳು ಮನೆ ಕಳೆದುಕೊಂಡಿದ್ದವು. 20 ಜನರು ಬಲಿಯಾಗಿ 3,500ಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದರು. 10 ಸಾವಿರ ಕೋ.ರೂ. ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು.ತನ್ನ ಅನುದಾನ ಮತ್ತು ದಾನಿಗಳ ಸಹಕಾರದೊಂದಿಗೆ ಮನೆಗಳ ನಿರ್ಮಾಣಕ್ಕೆ ಮುಂದಾದ ಸರಕಾರವು ಫಲಾನುಭವಿ ಬಯಸುವಲ್ಲಿ ಆತನಿಗೆ ಒಪ್ಪಿಗೆ ಆಗುವ ಮಾದರಿಯ ಮನೆಯ ನಿರ್ಮಾಣ ಮಾಡುವುದಾಗಿ ತಿಳಿಸಿತು. ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಂಬೂರು ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಕೊಡಗಿನ ಕರ್ಣಂಗೇರಿ, ಮದೆ, ಗಾಳಿಬೀಡು, ಜಂಬೂರು, ನಿಡುಗಣಿ ಗ್ರಾಮಗಳಲ್ಲಿ ಸ್ಥಳ ಗುರುತಿಸಲಾಗಿತ್ತು. ಕರ್ಣಂಗೇರಿ ಗ್ರಾಮದ 35 ಮಂದಿ ಸಂತ್ರಸ್ತರಿಗಷ್ಟೇ ಜಿಲ್ಲಾಡಳಿತವು ಕಳೆದ ವರ್ಷ ಮನೆ ಹಸ್ತಾಂತರಿಸಿತ್ತು.

9.85ಲಕ್ಷ ರೂ. ವೆಚ್ಚ
ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ 9.85 ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ನಿರ್ಮಿಸಲಾಗುತ್ತದೆ. ಎರಡು ಮಲಗುವ ಕೊಠಡಿ, ಅಡುಗೆ ಕೋಣೆ, ಶೌಚಾಲಯ, ಸ್ನಾನಗೃಹ, ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೂ ಅವಕಾಶ ಇದೆ.

ಆಯ್ಕೆಗೆ ಸರ್ವೇ
ಮದೆನಾಡು ಗ್ರಾಮಕರಣಿಕ ಕಚೇರಿ ವ್ಯಾಪ್ತಿಯ 140 ಮಂದಿ ಅರ್ಜಿ ಸಲ್ಲಿಸಿ ದ್ದಾರೆ. ನೋಡಲ್‌ ಅಧಿಕಾರಿಗಳ ತಂಡ ಅರ್ಹರನ್ನು ಗುರುತಿಸಿ ಅಂತಿಮ ಪಟ್ಟಿ ಸಲ್ಲಿಸಲಿದೆ. ಅಂತಿಮ ಪಟ್ಟಿಯಲ್ಲಿ ಇರುವವರಿಗೆ ಮನೆ ದೊರಕಲಿದೆ.

ಸಂಪಾಜೆಯ ಸ್ಥಳ ರದ್ದು
ಕೊಡಗು ಸಂಪಾಜೆಯ ಸಂತ್ರಸ್ತರಿಗೆ ಸಂಪಾಜೆ ಶಾಲೆ ಬಳಿ 1.50 ಎಕರೆ ಸ್ಥಳ ಗುರುತಿಸಲಾಗಿತ್ತು. ಆದರೆ ಸ್ಥಳ ಸರ್ಮಪಕವಾಗಿಲ್ಲ ಎಂಬ ಕಾರಣ ದಿಂದ ಜಿಲ್ಲಾಡಳಿತ ಅಲ್ಲಿ ಮನೆ ನಿರ್ಮಾಣ ಪ್ರಸ್ತಾವನೆ ಕೈ ಬಿಟ್ಟಿದೆ. ಅರೆಕಲ್ಲು ಪ್ರದೇಶದ ಮೂವರು ಫಲಾನುಭವಿಗಳಿಗೆ ಅವರು ಬೇಡಿಕೆ ಇರಿಸಿದ ಪುನರ್ವಸತಿ ಸ್ಥಳದಲ್ಲಿ ಮನೆ ಮಂಜೂರಾತಿ ನೀಡಲಾಗಿದೆ.

Advertisement

ನಾಲ್ಕು ಜೀವ ಹಾನಿ ಸಂಭವಿಸಿದ್ದ ಮದೆ ವ್ಯಾಪ್ತಿಯ ಜೋಡುಪಾಲ, ಮೊಣ್ಣಂಗೇರಿ ಹಾಗೂ ಇತರ ಭಾಗದ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣ ಪೂರ್ಣಗೊಂಡಿದ್ದು, ಅರ್ಹರನ್ನು ಗುರುತಿಸಿ ಈ ಮಾಸಾಂತ್ಯದಲ್ಲಿ ಹಸ್ತಾಂತರ ಮಾಡಲಾಗುವುದು.
– ರಶೀದಾ,
ಗ್ರಾಮಕರಣಿಕರು, ಮದೆನಾಡು

Advertisement

Udayavani is now on Telegram. Click here to join our channel and stay updated with the latest news.

Next