ಮಡಿಕೇರಿ: ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯೊಂದಿಗೆ ನದಿತೊರೆಗಳು ತುಂಬಿ ಹರಿದ ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಕಡಿಮೆಯಾಗಿದೆ. ಆದರೆ ನದಿಗಳಲ್ಲಿ ನೀರಿನ ಪ್ರವಾಹ ಕಡಿಮೆಯಾಗಿಲ್ಲ. ಕರ್ನಾಟಕ-ಕೇರಳ ಹೆದ್ದಾರಿ ಕುಸಿದಿದ್ದು, ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.
ಎರಡು ದಿನ ಸುರಿದ ಭಾರೀ ಗಾಳಿ, ಮಳೆ ಮುಂದುವರಿಯುವ ನಿರೀಕ್ಷೆ ಇತ್ತಾದರೂ ಗುರುವಾರ ಮಳೆ ಶಾಂತ ವಾಗಿ ತಿಳಿ ಬಿಸಿಲಿನ ವಾತಾವರಣ ಮೂಡಿತ್ತು. ಆದರೆ ದಕ್ಷಿಣ ಕೊಡಗಿನಲ್ಲಿ ಮಧ್ಯಾಹ್ನದ ವರೆಗೂ ಭಾರೀ ಮಳೆಯಾಗಿ ನದಿತೊರೆಗಳು ಪ್ರವಾಹದ ಭೀತಿಯಲ್ಲೇ ತುಂಬಿ ಹರಿದವು.
ಅತೀ ಹೆಚ್ಚು ಮಳೆಯಾಗುತ್ತಿದ್ದ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಕೂಡ ಮಳೆ ಕಡಿಮೆಯಾಗಿದೆ. ಆದರೆ ರಸ್ತೆಗಳನ್ನು ಆವರಿಸಿರುವ ನೀರಿನ ಮಟ್ಟ ಕಡಿಮೆಯಾಗಿಲ್ಲ. ಭಾರೀ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿಕೆಯಾಗಿಲ್ಲ. ಮಡಿಕೇರಿಯಲ್ಲಿ ಬೆಳಗ್ಗೆ ಮೋಡ ಕವಿದಿತ್ತಾದರೂ ಅನಂತರ ಬಿಸಿಲಿನ ವಾತಾವರಣ ಮೂಡಿತ್ತು.
ವಿರಾಜಪೇಟೆ ವ್ಯಾಪ್ತಿಯಲ್ಲಿ ಬುಧ ವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗಿನ ಜಾವ ಸುರಿದ ಧಾರಾಕಾರ ಮಳೆಗೆ ಕರ್ನಾಟಕ-ಕೇರಳ ಅಂತಾ ರಾಜ್ಯ ಹೆದ್ದಾರಿ ಪೆರಂಬಾಡಿಯಲ್ಲಿ ಕುಸಿತಗೊಂಡಿತು. ಪರಿಣಾಮ ಜಿಲ್ಲೆಗೆ ಕೇರಳ ದೊಂದಿಗಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ರಸ್ತೆಯ ಎಡಭಾಗದಲ್ಲಿರುವ ಕೆರೆಯಿಂದ ನೀರು ರಭಸ ವಾಗಿ ಹರಿಯುತ್ತಿರುವುದರಿಂದ ಇನ್ನಷ್ಟು ಮಣ್ಣು ಕುಸಿಯುವ ಸಂಭವವಿದೆ ಎಂದು ಸ್ಥಳ ಪರಿಶೀಲನೆ ನಡೆಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.