Advertisement

ಕೊಡಗು: ಭಾರೀ ಮಳೆ; ಹಲವೆಡೆ ಹಾನಿ

02:28 PM Jul 11, 2018 | Harsha Rao |

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆ ಬಿರುಸಿನಿಂದ ಸುರಿಯುತ್ತಿದ್ದು, ಹಲವೆಡೆ ಅನಾಹುತ ಸಂಭವಿಸಿದೆ.
ಜೋಡುಪಾಲ- ಕೊಯನಾಡು ರಸ್ತೆಯಲ್ಲಿ ಭಾರೀ ಗಾಳಿ, ಮಳೆಗೆ ಕಂಟೈನರ್‌ ಮೇಲೆ ಬಿದ್ದ ಬೃಹತ್‌ ಗಾತ್ರ ಮರವನ್ನು ತೆರವುಗೊಳಿಸುವ ಸಂದರ್ಭ ವಿದ್ಯುತ್‌ ಕಂಬವೊಂದು ಕೆಎಸ್‌ಆರ್‌ಟಿಸಿ ಬಸ್‌ ಮೇಲೆ ಬಿದ್ದಿದೆ. ತತ್‌ಕ್ಷಣ ಕಾರ್ಯ ಪ್ರವೃತ್ತವಾದ ಪ್ರಕೃತಿ ವಿಕೋಪ ತಂಡ ವಿದ್ಯುತ್‌ ಕಂಬ ಹಾಗೂ ಮರಗಳನ್ನು ತೆರವು ಗೊಳಿಸಿತು.

Advertisement

ಅದೃಷ್ಟವಶಾತ್‌ ಯಾರಿಗೂ ಅಪಾಯ ಸಂಭವಿಸಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ನಾಲ್ಕು ತಾಸು ಕಾರ್ಯಾಚರಣೆಯ ಬಳಿಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಭಾಗಮಂಡಲದಲ್ಲಿ  ಪ್ರವಾಹ
ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಸಂಪರ್ಕ ರಸ್ತೆಗಳು ಜಲಾವೃತ ಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳ ಹಾಗೂ ರ್ಯಾಫ್ಟಿಂಗ್‌ ಸಿಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಸುತ್ತಮುತ್ತಲ ಗದ್ದೆಗಳಲ್ಲಿ ನೀರು ತುಂಬಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್‌ ಭೇಟಿ ನೀಡಿ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಡಿಕೇರಿಯಲ್ಲಿ  ಮಂಜು, ಚಳಿ
ಮಡಿಕೇರಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಬರೆ, ಮರಗಳು ಬಿದ್ದಿವೆ. ನಗರದಲ್ಲಿ ಕೂಡ ಎಡೆಬಿಡದೆ ಮಳೆಯಾಗುತ್ತಿದ್ದು, ದಟ್ಟ ಮಂಜು, ಗಾಳಿ, ಚಳಿಯ ವಾತಾವರಣ ಮುಂದುವರಿದಿದೆ. ಮಲ್ಲಿಕಾರ್ಜುನ ನಗರ ಸಹಿತ ವಿವಿಧ ಬಡಾವಣೆಗಳಲ್ಲಿ ಮನೆಯ ಗೋಡೆ ಹಾಗೂ ತಡೆಗೋಡೆಗಳು ಕುಸಿದು ಬಿದ್ದಿವೆ. ನಗರಸಭೆ ವತಿಯಿಂದ ತಾತ್ಕಾಲಿಕ ರಕ್ಷಣೆಗಾಗಿ ಪ್ಲಾಸ್ಟಿಕ್‌ ಶೀಟ್‌ಗಳನ್ನು ವಿತರಿಸಲಾಗಿದೆ.

ಎಸ್‌ಡಿಪಿಐ ನಗರಾಧ್ಯಕ್ಷ ಖಲೀಲ್‌ ನೇತೃತ್ವದಲ್ಲಿ ಕಾರ್ಯಕರ್ತರು ಶ್ರಮದಾನದ ಮೂಲಕ ಮನೆ ಹಾನಿಗೊಳ ಗಾದವರಿಗೆ ಸಹಾಯಹಸ್ತ ಚಾಚಿದರು.ಕೋಟೆ ಆವರಣ ಜಲಾವೃತ ಗೊಂಡಿದ್ದು, ಶ್ರೀ ಓಂಕಾರೇಶ್ವರ ದೇವಾಲಯದ ಆವರಣದ ಕೆರೆಯಲ್ಲಿ ನೀರಿನ ಮಟ್ಟ ಏರುತ್ತಿದೆ. ದೇವಾಲಯವನ್ನು ಪ್ರವೇಶಿಸಲು ಭಕ್ತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ರಸ್ತೆಗಳು ಸಂಪೂರ್ಣವಾಗಿ ಹದ ಗೆಟ್ಟಿದ್ದು, ನೀರು ತುಂಬಿರುವ ರಸ್ತೆಗಳಲ್ಲಿ ವಾಹನ ಸಂಚಾರ ದುಸ್ತರವಾಗಿದೆ.

Advertisement

ಸೋಮವಾರಪೇಟೆ ತಾಲೂಕಿನಲ್ಲಿ ಮಳೆ ತೀವ್ರವಾಗಿದ್ದು, ಹಾನಿ ಸಂಭವಿಸಿಲ್ಲ. ವಿರಾಜಪೇಟೆ ತಾಲೂಕಿನಲ್ಲಿ ಬೆಳಗ್ಗೆ ಮಳೆ ಬಿಡುವು ನೀಡಿತ್ತಾದರೂ ಸಂಜೆ ವೇಳೆ ಭಾರೀ ಮಳೆಯಾಗಿದೆ. ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಪೂರ್ತಿ ಸುರಿದ ಮಳೆ ಇಂದು ಬೆಳಗ್ಗೆ ಕೂಡ ತೀವ್ರತೆಯನ್ನು ಪಡೆದುಕೊಂಡಿತ್ತು. ಶಾಲಾ ವಿದ್ಯಾರ್ಥಿಗಳು ಬಹಳ ಕಷ್ಟ ಪಟ್ಟುಕೊಂಡೇ ಶಾಲೆಗಳಿಗೆ ತೆರಳಿದ್ದು, ಜಿಲ್ಲಾಡಳಿತ ರಜೆ ನೀಡಬೇಕಾಗಿತ್ತು ಎನ್ನುವ ಅಭಿಪ್ರಾಯ ಪೋಷಕರಿಂದ ಕೇಳಿಬಂತು. ಸುಂಟಿಕೊಪ್ಪದಲ್ಲಿ ಶಾಲೆಯ ತಡೆಗೋಡೆ ಕುಸಿದು ಬಿದ್ದು, ಅಪಾಯದ ಸ್ಥಿತಿ ಎದುರಾದ ಘಟನೆಯೂ ನಡೆದಿದೆ.

24 ಗಂಟೆ ಕಟ್ಟೆಚ್ಚರ
ಜಿಲ್ಲಾಡಳಿತ ಮಳೆಯ ತೀವ್ರತೆಯ ಮೇಲೆ ನಿಗಾ ಇಟ್ಟಿದ್ದು, ಮೂರೂ ತಾಲೂಕಿನ ಕಂಟ್ರೋಲ್‌ ರೂಮ್‌ ಅಧಿಕಾರಿಗಳ ಉಪಸ್ಥಿತಿಯಲ್ಲಿ ದಿನದ 24 ಗಂಟೆಯೂ ಕಟ್ಟೆಚ್ಚರದಲ್ಲಿದೆ.

ಇಂದು ರಜೆ
ಭಾರೀ ಮಳೆಯ ಕಾರಣ ಜು. 11ರಂದು ಕೊಡಗು ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next