Advertisement

Kodagu Floods; ಮುಂದುವರಿದ ಆತಂಕ: ರೆಡ್ ಅಲರ್ಟ್, ಶಾಲಾ- ಕಾಲೇಜುಗಳಿಗೆ ರಜೆ

10:29 PM Jul 19, 2024 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳನ್ನು ಹೋಲಿಸಿದರೆ ಶುಕ್ರವಾರ ಮಳೆ ಕೊಂಚ ಶಾಂತವಾಗಿದೆ. ಆದರೆ ಪ್ರವಾಹ ಪರಿಸ್ಥಿತಿ ಹಾಗೇ ಮುಂದುವರೆದಿದ್ದು, ಆತಂಕದ ವಾತಾವರಣವಿದೆ. ಮನೆ, ರಸ್ತೆ, ಸೇತುವೆಗಳು ಜಲಾವೃತಗೊಂಡು ಹಾನಿಗೊಳಗಾಗಿದ್ದರೆ, ಭಾರೀ ಗಾಳಿಯಿಂದ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿವೆ. ಹಲವು ಕಡೆ ಬರೆ ಕುಸಿತದಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

Advertisement

ಜು.20 ರಂದು ಕೂಡ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ ಮತ್ತು ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ವರೆಗೆ ಜಿಲ್ಲಾವ್ಯಾಪಿ ಧಾರಾಕಾರ ಮಳೆ ಸುರಿದಿದ್ದು, ಬಹುತೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದವು. ಆದರೆ ಕ್ರಮೇಣ ಮಳೆ ಕ್ಷೀಣಗೊಳ್ಳುತ್ತಿದ್ದಂತೆ ಪ್ರವಾಹದ ಪರಿಸ್ಥಿತಿ ಕೂಡ ಶಾಂತವಾಗತೊಡಗಿತು. ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 10 ಇಂಚಿಗೂ ಅಧಿಕ ಮಳೆಯಾಗಿದೆ. ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳನ್ನು ಆವರಿಸಿದ್ದ ಪ್ರವಾಹದ ನೀರು ಹಗಲಿನ ವೇಳೆ ಮಳೆ ಕಡಿಮೆಯಾದ ಕಾರಣ ಇಳಿಮುಖಗೊಂಡಿತು.

ಭಾಗಮಂಡಲದಲ್ಲಿ 223 ಮಿ.ಮೀ, ಶಾಂತಳ್ಳಿ 183 ಮಿ.ಮೀ, ಅಮ್ಮತ್ತಿ 148.50, ಮಡಿಕೇರಿ 135.40, ನಾಪೋಕ್ಲು 150.20 ಮತ್ತು ಸಂಪಾಜೆಯಲ್ಲಿ 102.50 ಮಿ.ಮೀ ಮಳೆಯಾಗಿದ್ದು, ಇವುಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ದಾಖಲಾದ ಪ್ರದೇಶಗಳಾಗಿವೆ.

ಮಡಿಕೇರಿ ತಾಲ್ಲೂಕಿನಲ್ಲಿ ಗಾಳಿ, ಮಳೆಯ ಆತಂಕ ಮುಂದುವರೆದಿದೆ. ಉಳಿದಂತೆ ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಕಡಿಮೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ.

Advertisement

ಭಾರೀ ಗಾಳಿ ಮಳೆಗೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಮಾಲಂಬಿ ಗ್ರಾಮದ ಯಮುನಾ ರಾಮ್ ಶೆಟ್ಟಿ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕುಶಾಲನಗರ ಹೋಬಳಿಯ ದೊಡ್ಡತ್ತೂರು ಗ್ರಾಮದ ಲಕ್ಷ್ಮಣ ಕಾಳಯ್ಯ ಅವರ ಮನೆಯ ಗೋಡೆಗೆ ಹಾನಿಯಾಗಿದ್ದು, ಕಂದಾಯ ಪರಿವೀಕ್ಷಕರು ಭೇಟಿ ನೀಡಿ ಪರಿಶೀಲಿಸಿದರು.

ಸಾಯಿ ಬಡಾವಣೆಗೆ ನೀರು ನುಗ್ಗಿದ್ದು, ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಿರಂಗಾಲ ಗ್ರಾ.ಪಂ ವ್ಯಾಪ್ತಿಯ ನಲ್ಲೂರು ಗ್ರಾಮದ ಶಾರದಮ್ಮ ಹಾಗೂ ಬೆಟ್ಟಯ್ಯ ಎಂಬುವವರ ಮನೆೆಗೆ ಹಾನಿಯಾಗಿದೆ.

ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ತಾತ್ಕಾಲಿಕವಾಗಿ ವಾಸಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿದರು. ಚೆಟ್ಟಳ್ಳಿ  ಮಡಿಕೇರಿ ರಸ್ತೆಯ ಅಭ್ಯಾಲದಲ್ಲಿ ಮರ ಸಹಿತ ಬರೆ ಕುಸಿದು ರಸ್ತೆ ಬಂದ್ ಆಗಿತ್ತು. ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋ ಹಳ್ಳಿ ಬರೆ ಕುಸಿತಗೊಂಡಿದ್ದು, ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಲಾಯಿತು. ವಿರಾಜಪೇಟೆ ಕರಡ ರಸ್ತೆ ಬಿರುಕು ಬಿಟ್ಟಿದ್ದು, ನೀರು ನುಗ್ಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ವಿರಾಜಪೇಟೆಯ ಕೆದಮುಳ್ಳೂರು ಗ್ರಾಮದ ತೋರ ಬೆಟ್ಟದ ನಿವಾಸಿ ನಾಣಯ್ಯ ಎಂಬುವವರ ಮನೆ ಸಂಪೂರ್ಣ ಹಾನಿಗೀಡಾಗಿದೆ.

ಮಗ್ಗುಲ, ಐಮಂಗಲ, ಚಾಮಿಯಾಲ, ಚೆಂಬೆಬೆಳ್ಳೂರು ಮೊದಲಾದೆಡೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗಗಳು ಹಾನಿಗೀಡಾಗಿದ್ದು, ಚೆಸ್ಕಾಂ ಸಿಬ್ಬಂದಿಗಳು ಗಾಳಿ, ಮಳೆಗೆ ಅಂಜದೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಅರಣ್ಯ ಸಿಬ್ಬಂದಿಗಳು ಬಿದ್ದಿರುವ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಕುಶಾಲನಗರ ಹೋಬಳಿ ಗೊಂದಿಬಸವನಹಳ್ಳಿ ಗ್ರಾಮದ ರೊಂಡೆ ಕೆರೆಯ ಏರಿ ಒಡೆದು ಅಪಾರ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿದ್ದು, ಜಲಾವೃತಗೊಂಡಿದೆ. ಕೃಷಿಕ ವರ್ಗ ಸಾಕಷ್ಟು ನಷ್ಟ ಅನುಭವಿಸಿದೆ.

ಸೇತುವೆ ಮುಳುಗಡೆ
ಮಡಿಕೇರಿ ತಾಲ್ಲೂಕಿನ ಕಡಂಗ, ಎಡಪಾಲ, ಬಾವಲಿ, ಚೆಯ್ಯಂಡಾಣೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ಮೇಲೆ ಹೊಳೆ ತುಂಬಿ ಹರಿಯುತ್ತಿದ್ದು, ಈ ಗ್ರಾಮಗಳಿಗೆ ಹೋಗುವ ಸಂಪರ್ಕ ಕಡಿತಗೊಂಡಿದೆ.

ಹೆದ್ದಾರಿ ದುರಸ್ತಿ
ಅಧಿಕ ಮಳೆಯಿಂದ ಸಂಪೂರ್ಣ ಹಾನಿಗೀಡಾಗಿದ್ದ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟದ ಹೆದ್ದಾರಿಯನ್ನು ಮಳೆ ಬಿಡುವು ನೀಡಿದ್ದ ಹಗಲಿನ ವೇಳೆ ತಾತ್ಕಾಲಿಕವಾಗಿ ದುರಸ್ತಿ ಪಡಿಸಲಾಯಿತು.

‘ರೆಡ್ ಅಲರ್ಟ್’
ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಗಳ ಹಿನ್ನೆಲೆ ಹವಾಮಾನ ಇಲಾಖೆ ಜು.20 ರಂದು ‘ರೆಡ್ ಅಲರ್ಟ್’ ಘೋಷಿಸಿದೆ.

ಮಳೆ ವಿವರ
ಹಾರಂಗಿ ಜಲಾಶಯದಿಂದ 20000 ಕ್ಯುಸೆಕ್ ನೀರು ನದಿಗೆ ಹರಿಯ ಬಿಡಲಾಗುತ್ತಿದೆ. ಇಂದಿನ ನೀರಿನ ಒಳಹರಿವು 23,760 ಕ್ಯುಸೆಕ್ ಆಗಿದೆ. ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 105.71 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 29.68 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1348.51 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 637.16 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 152.57 ಮಿ.ಮೀ. ಕಳೆದ ವರ್ಷ ಇದೇ ದಿನ 35.53 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2196.76 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1201.60 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 130.75 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 18.40 ಮಿ.ಮೀ.

ಜನವರಿಯಿಂದ ಇಲ್ಲಿಯವರೆಗಿನ ಮಳೆ 1495.45 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 490.96 ಮಿ.ಮೀ. ಮಳೆಯಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 72.4 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 40.35 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1437.1 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 457.50 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 115.05 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 47.10 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1479.91 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 568.96 ಮಿ.ಮೀ. ಮಳೆಯಾಗಿತ್ತು. ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 57.8 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 7 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 996.1 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 466.75 ಮಿ.ಮೀ. ಮಳೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next