ಮಡಿಕೇರಿ: ಮಳೆಯ ನಡುವೆ ಕೊಡಗಿನ ವಿವಿಧೆಡೆ ಕಾಡಾನೆ ಉಪಟಳ ಮಿತಿ ಮೀರಿದೆ. ಹಿಂಡು ಹಿಂಡು ಆನೆಗಳು ತೋಟಗಳಿಗೆ ಹಾನಿ ಮಾಡುತ್ತಿವೆ ಮತ್ತು ವಾಹನಗಳನ್ನು ಜಖಂಗೊಳಿಸುತ್ತಿವೆ.
ನಿರಂತರ ಮಳೆಯಿಂದಾಗಿ ಕಾಫಿ ತೋಟಗಳು ಹಸುರಾಗಿವೆ, ಹಲಸಿನ ಹಣ್ಣು ಸುವಾಸನೆ ಬೀರುತ್ತಿವೆ. ಹಣ್ಣು ಪ್ರಿಯ ಕಾಡಾನೆಗಳು ತೋಟದಿಂದ ತೋಟಕ್ಕೆ ಸಂಚರಿಸುತ್ತ ಫಸಲನ್ನು ತಿಂದು ತೇಗುತ್ತಿವೆ. ಮುಖ್ಯ ರಸ್ತೆಗಳಲ್ಲಿ ದಿಢೀರ್ ಆಗಿ ಕಾಣಿಸಿಕೊಳ್ಳುವ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸುತ್ತಿವೆ.
ಮನೆಯ ಸಮೀಪ ನಿಲ್ಲಿಸಿದ್ದ ಆಟೋ ರಿಕ್ಷಾದ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಮಡಿಕೇರಿ ತಾಲೂಕಿನ ಕಕ್ಕಬ್ಬೆ ನಾಲಡಿ ಗ್ರಾಮದ ವಾಟೆಕಾಡುವಿನಲ್ಲಿ ಸಂಭವಿಸಿದೆ. ದೇವಯ್ಯ ಅವರು ಆಟೋ ರಿಕ್ಷಾ ನಿಲ್ಲಿಸಿ ಮನೆಗೆ ತೆರಳಿದ್ದರು. ರಾತ್ರಿಯ ವೇಳೆ ಕಾಡಾನೆ ಆಟೋ ರಿಕ್ಷಾದ ಮೇಲೆ ದಾಳಿ ಮಾಡಿ ಜಖಂಗೊಳಿಸಿದೆ.ಚೆಯ್ಯಂಡಾಣೆ ಗ್ರಾಮ ವ್ಯಾಪ್ತಿಯಲ್ಲಿ ಬೊವ್ವೆàರಿಯಂಡ ಹರೀಶ್ ಹಾಗೂ ಸಜನ್ ಅವರ ತೋಟಕ್ಕೆ ಹಾನಿಯಾಗಿದೆ.
ಸುಂಟಿಕೊಪ್ಪದ ಅತ್ತೂರು ನಲ್ಲೂರುಗ್ರಾಮದ ಕಡ್ಲೆಮನೆ ರಘು ಕುಮಾರ ಅವರ ಮನೆಯ ಸಮೀಪದ ತೋಟದಫಸಲನ್ನು ತಿಂದು ಧ್ವಂಸಗೊಳಿಸಿದೆ. ಬಾಳೆಗಿಡಗಳನ್ನು ಸಂಪೂರ್ಣ ತಿಂದು ಹಾಕಿದೆ. ಅರಣ್ಯ ಇಲಾಖೆ ಎಷ್ಟೇ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳ ಹಿಂಡು ತೋಟಗಳಲ್ಲಿಯೇ ಆಶ್ರಯ ಪಡೆದುಕೊಳ್ಳುತ್ತಿವೆ. ಈ ಭಾಗದ ಬಹುತೇಕ ತೋಟಗಳಿಗೆ ದಾಳಿ ಮಾಡಿರುವ ಕಾಡಾನೆಗಳು ಬಾಳೆಯೊಂದಿಗೆ ಕಾಫಿ ಗಿಡಗಳನ್ನು ಕೂಡ ನಾಶಗೊಳಿಸಿವೆ.
ಕಾರ್ಯಾಚರಣೆ ನಡೆಸಿದ ದಿನ ಮರೆಯಾಗುವ ಕಾಡಾನೆಗಳು ಮತ್ತೆ ಮಾರನೇಯ ದಿನ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಹಾಡಹಗಲೇ ಮುಖ್ಯ ರಸ್ತೆಯಲ್ಲೂ ಆನೆಗಳು ಸಂಚರಿ ಸುತ್ತಿವೆ. ಸುಂಟಿಕೊಪ್ಪ, ಆನೆಕಾಡು, ಕುಶಾಲನಗರ ಹೆದ್ದಾರಿಯಲ್ಲಿ ನಿತ್ಯ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ವಾಹನ ಸವಾರರು ಆತಂಕದಲ್ಲೇ ತೆರಳಬೇಕಾಗಿದೆ.
ವೀರಾಜಪೇಟೆ ತಾಲೂಕಿನ ಬಿಟ್ಟಂ ಗಾಲ ಗ್ರಾ.ಪಂ. ವ್ಯಾಪ್ತಿಯ ಒಂದನೇ ರುದ್ರಗುಪ್ಪೆ ಭಾಗದ ತೋಟಗಳ ಮೇಲೂ ಕಾಡಾನೆಗಳ ದಾಳಿಯಾಗಿದೆ. ಸ್ಥಳೀಯ ಬೆಳೆಗಾರಾದ ಎ.ಎಚ್. ಸರಸ್ವತಿ ಹಾಗೂ ಟೋಮಿ ಅವರ ತೋಟಗಳಿಗೆ ನುಗ್ಗಿರುವ ಆನೆಗಳು ಕಾಫಿ, ಅಡಿಕೆ, ತೆಂಗು ಮತ್ತು ಬಾಳೆ ಕೃಷಿಯನ್ನು ನಾಶಗೊಳಿಸಿವೆ. ವಿದ್ಯುತ್ ಸಂಪರ್ಕದ ತಂತಿ ಮತ್ತು ಪರಿಕರಗಳಿಗೂ ಹಾನಿ ಮಾಡಿದ್ದು, ವಿದ್ಯುತ್ ವ್ಯತ್ಯಯವಾಗಿದೆ. ಕಾರ್ಮಿಕರು ತೋಟಕ್ಕೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.