Advertisement

ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ವಿಜಯೋತ್ಸವ

11:43 PM May 24, 2019 | sudhir |

ಮಡಿಕೇರಿ: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸುವುದರೊಂದಿಗೆ ಮೈಸೂರು, ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಜಯಭೇರಿ ಬಾರಿಸಿದ ಹಿನ್ನೆಲೆ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿತು.

Advertisement

ನಗರದ ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ವಿಧಾನ ಪರಿಷತ್‌ ಸದಸ್ಯ ಸುನೀಲ್‌ ಸುಬ್ರಮಣಿ ಹಾಗೂ ಬಿಜೆಪಿ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿದರಲ್ಲದೇ, ಈಡುಗಾಯಿ ಒಡೆಯುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಜೈಕಾರ ಕೂಗಿದ ಕಾರ್ಯಕರ್ತರು ಬಿಜೆಪಿ ಹಾಗೂ ಪ್ರತಾಪ್‌ ಸಿಂಹ ಗೆಲುವಿಗೆ ಹರ್ಷ ವ್ಯಕ್ತ ಪಡಿಸಿದರು.

ನಂತರ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಸುನೀಲ್‌ ಸುಬ್ರಮಣಿ, ಪ್ರಧಾನಿ ನರೇಂದ್ರ ಮೋದಿ ಅವರ ಸೇವೆಯನ್ನು ಪರಿಗಣಿಸಿ ದೇಶದ ಜನ ಪ್ರಚಂಡ ಬಹುಮತವನ್ನು ನೀಡಿದ್ದು, ಇದನ್ನು ನಾವು ನಿರೀಕ್ಷೆ ಮಾಡಿದ್ದೆವು ಎಂದು ತಿಳಿಸಿದರು.

ದೇಶಭಕ್ತನಾಗಿ, ದೈವಭಕ್ತನಾಗಿ ದೇಶದ ಜನರ ಪ್ರಧಾನ ಸೇವಕರಾಗಿ ಜನಸೇವೆ ಮಾಡಿದ್ದನ್ನು ಜನತೆ ಗಮನಿಸಿದ್ದು ಇದುವೇ ಬಹುಮತಕ್ಕೆ ಕಾರಣವಾಯಿತು. ಸಂಸದ ಪ್ರತಾಪ್‌ ಸಿಂಹ ಅವರು ಕೂಡ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಲು ಸಾಧ್ಯವಾಗಿದ್ದು, ಜನರ ನಿರೀಕ್ಷೆಯಂತೆ ಸಂಸದರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸುನೀಲ್‌ ಸುಬ್ರಮಣಿ ಹೇಳಿದರು.

ಬಿಜೆಪಿ ಪ್ರಮುಖರಾದ ಕೆ.ಎಸ್‌.ರಮೇಶ್‌, ಪಿ.ಡಿ.ಪೊನ್ನಪ್ಪ, ಉಣ್ಣಿಕೃಷ್ಣ, ಶಜೀಲ್‌ ಕೃಷ್ಣ, ಟಿ.ಎಸ್‌.ಪ್ರಕಾಶ್‌, ಸವಿತಾ ರಾಕೇಶ್‌, ಅನಿತಾ ಪೂವಯ್ಯ, ಕನ್ನಿಕೆ, ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು

Advertisement

ಅಧಿಕಾರದ ಆಸೆಯಿಂದ ಹೊಂದಾಣಿಕೆ
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಪರಸ್ಪರ ಕಚ್ಚಾಡುತ್ತಿದ್ದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗ‌ಳು ಅಧಿಕಾರದ ಆಸೆಯಿಂದ ಹೊಂದಾಣಿಕೆ ಮಾಡಿಕೊಂಡು ರಾಜ್ಯದ ಜನತೆಗೆ ಮೋಸ ಮಾಡಿದ್ದರು ಎಂದು ವಿದಾನ ಪರಿಷತ್‌ ಸದಸ್ಯ ಸುನೀಲ್‌ ಸುಬ್ರಮಣಿ ಅವರು ಮೈತ್ರಿ ಪಕ್ಷಗಳ ವಿರುದ್ಧ ಆರೋಪಿಸಿದರು.

104 ಸ್ಥಾನ ಪಡೆದ ಬಿಜೆಪಿಗೆ ಅಧಿಕಾರ ನೀಡದೇ ವಂಚಿಸಿದ್ದರು. ಇದನ್ನು ಗಮನಿಸಿದ ಮತದಾರರು ಈ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಸುನೀಲ್‌ ಸುಬ್ರಮಣಿ ಅವರು ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next