Advertisement

ಪ್ರತ್ಯೇಕ ತಾಲೂಕು, ಕಾವೇರಿ ನದಿ ಸಂರಕ್ಷಣೆಗೆ ಆದ್ಯತೆ

07:55 AM May 07, 2018 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ತನ್ನದೇ ಆದ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಯನ್ನು ಭಾರತೀಯ ಜನತಾ ಪಾರ್ಟಿ ಬಿಡುಗಡೆ ಮಾಡಿದೆ. ಪೊನ್ನಂಪೇಟೆ ಮತ್ತು ಕಾವೇರಿ ತಾಲೂಕು ರಚನೆ, ಜೀವನದಿ ಕಾವೇರಿಯ ಸಂರಕ್ಷಣೆಗೆ ಒತ್ತು, ರಸ್ತೆ ಅಭಿವೃದ್ಧಿಗೆ ಪ್ರತ್ಯೇಕವಾಗಿ ವಾರ್ಷಿಕ 200 ಕೋಟಿ ರೂ. ಅನುದಾನ, ಕೌಟುಂಬಿಕ ಕ್ರೀಡೆ ಸೇರಿದಂತೆ ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ಪ್ರತೀ ಬಜೆಟ್‌ನಲ್ಲಿ 10 ಕೋಟಿ ರೂ. ಮೀಸಲು ಸೇರಿದಂತೆ ಸುಮಾರು 19 ಅಂಶಗಳು ಪ್ರಣಾಳಿಕೆಯಲ್ಲಿವೆ.

Advertisement

ನಗರದ ಪತ್ರಿಕಾಭವನದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿಯ ಕೊಡಗು ಜಿಲ್ಲಾ ಚುನಾವಣಾ ಉಸ್ತುವಾರಿಯೂ ಆಗಿರುವ ಭಾರತ ಕ್ರೀಡಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಧರ್ಮನಾರಾಯಣ್‌ ಜೋಶಿ ಅವರು,  ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸುದೀರ್ಘ‌ವಾಗಿ ಈ ದೇಶವನ್ನು ಕಾಂಗ್ರೆಸ್‌ ಆಳಿದ್ದರೂ, ದೇಶದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲವೆಂದು ಆರೋಪಿಸಿದರು.

ವಿವಿಧ ಯೋಜನೆಗಳನ್ನು ಕುಟುಂಬ ಸದಸ್ಯರ ಹೆಸರಿನಲ್ಲೇ ಘೋಷಿಸುವ ಕಾಂಗ್ರೆಸ್‌ಗೆ ಫೀ|ಮಾ| ಕಾರ್ಯಪ್ಪ ಅವರಂತಹವರ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಟೀಕಿಸಿದರು.

ಕೊಡಗು ಜಿಲ್ಲೆಯನ್ನು ಪ್ರವಾಸೋ ದ್ಯಮದಲ್ಲಿ ಮುಖ್ಯ ಕೇಂದ್ರವನ್ನಾಗಿ ಮಾಡಬಹುದಾಗಿತ್ತಾದರೂ, ದೇಶ ಹಾಗೂ ರಾಜ್ಯವನ್ನು ಸುದೀರ್ಘ‌ವಾಗಿ ಆಳಿದ ಕಾಂಗ್ರೆಸ್ಸಿಗರಿಗೆ ಸಾಧ್ಯವಾಗಿಲ್ಲ ಎಂದು ದೂರಿದ ಅವರು, ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ನ್ನು ಜನತೆ ತಿರಸ್ಕರಿಸಿದ್ದು, ಈ ಬಾರಿ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಇದು ಕೊನೆಯ ಆಡಳಿತವಾಗಲಿದೆ ಎಂದು ಭವಿಷ್ಯ ನುಡಿದರು.

ಪ್ರಣಾಳಿಕೆ ಕುರಿತು ಮಾತನಾಡಿದ ಪ್ರಣಾಳಿಕೆ ಸಮಿತಿ ಸಂಚಾಲಕರಾದ ಬಿ.ಡಿ.ಮಂಜುನಾಥ್‌, ಜಿಲ್ಲೆಯ ವಿವಿಧ ವರ್ಗಗಳ, ವಿವಿಧ ಸಂಘಸಂಸ್ಥೆಗಳ ಪ್ರಮುಖರ ಸಲಹೆಗಳನ್ನು ಸ್ವೀಕರಿಸಿ ಪ್ರಣಾಳಿಕೆಯನ್ನು ರಚಿಸಲಾಗಿದ್ದು, ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಣಾಳಿಕೆಯನ್ನು ಇನ್ನು 2-3 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

Advertisement

ಹಬ್ಬಗಳಿಗೆ 2 ಕೋ.ರೂ.
ಕೊಡಗಿನ ಹಬ್ಬಗಳಾದ ದಸರಾ, ಕಾವೇರಿ ಸಂಕ್ರಮಣ, ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕನಿಷ್ಠ 2 ಕೋಟಿ ರೂ.ಗಳನ್ನು ಪ್ರತೀ ವರ್ಷ ಬಜೆಟ್‌ನಲ್ಲಿ ಕಾಯ್ದಿರಿಸುವುದರೊಂದಿಗೆ ಆ ಮೂಲಕ ಕೊಡಗಿಗೆ ಪ್ರವಾಸಿಗರನ್ನು ಆಕರ್ಷಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. ಜಿಲ್ಲೆಯಲ್ಲಿ ಆನೆ, ಹುಲಿ ಮುಂತಾದ ವನ್ಯಪ್ರಾಣಿಗಳಿಂದ ತೊಂದರೆಗೊಳಾದ ಬೆಳೆಗಾರರು ಹಾಗೂ ರೈತರಿಗೆ ಮತ್ತು ಜನಸಾಮಾನ್ಯರಿಗೆ  ಆಗುವ ತೊಂದರೆ ಮತ್ತು ನಷ್ಟವನ್ನು ಪರಿಶೀಲಿಸಿ ಸಂಬಂಧಿಸಿದವರಿಗೆ ಅತಿ ಹೆಚ್ಚಿನ ಪರಿಹಾರವನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಘೋಷಿಸಿದರು.

ಕಸ್ತೂರಿ ರಂಗನ್‌ ವರದಿಗೆ ಒಳಪಡುವ ಇತರ ರಾಜ್ಯಗಳು ಮಾಡಿರುವ ಸುಧಾರಿತ ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯದಲ್ಲೂ ಪಶ್ಚಿಮಘಟ್ಟಗಳ ಅಡಿಯಲ್ಲಿ ಬರುವ ಪ್ರದಶದ ಜನರಿಗೆ ಯಾವುದೇ ತೊಂದರೆಯಾಗದಂತೆ ಕೇಂದ್ರಕ್ಕೆ ವರದಿ ನೀಡುವುದು, ಕೇಂದ್ರ ಸರಕಾರದ ಯೋಜನೆಗಳಾದ ದೀನದಯಾಳ್‌ ಮತ್ತು ಸೌಭಾಗ್ಯ ವಿದ್ಯುತ್‌ ವಿತರಣೆ ಅಭಿವೃದ್ಧಿಗೆ ಕೇಂದ್ರ ಸರಕಾರದ ಅನುದಾನದ ಜೊತೆಗೆ ರಾಜ್ಯ ಸರಕಾರದಿಂದಲೂ ಅನುದಾನ ಬಿಡುಗಡೆ ಮಾಡಿ ಕೊಡಗಿನ ಎಲ್ಲಾ ಜನರಿಗೆ ವರ್ಷಪೂರ್ತಿ ನಿರಂತರ ವಿದ್ಯುತ್‌ ಸರಬರಾಜು ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಕೊಡಗಿನಲ್ಲಿ ಬೆಳೆಯುವ ಕರಿಮೆಣಸು, ಕಿತ್ತಳೆ, ಅಡಿಕೆ ಬೆಳೆಗಳನ್ನು ಎಪಿಎಂಸಿ ಕಾಯ್ದೆಯಿಂದ ಹೊರಗಿಡಲು ಕ್ರಮ ಮತ್ತು ಕರಿಮೆಣಸು ಸೇರಿದಂತೆ ಎಲ್ಲಾ ಕೃಷಿ ಉತ್ಪನ್ನಗಳನ್ನು ಕಲಬೆರಕೆ ಮಾಡುವವರಿಗೆ ಕಾನೂನಿನಡಿ ಉಗ್ರ ಶಿಕ್ಷೆ ವಿಧಿಸಲು ಕ್ರಮವಹಿಸಲಾಗುವುದು. ಕೊಡಗಿನ ಜಲಮೂಲಗಳಿಂದ (ಹಾರಂಗಿ ನೀರು ಸೇರಿದಂತೆ) ಸ್ಥಳೀಯ ಬೆಳೆಗಾರರು ತಮ್ಮ ಕೃಷಿ ಕಾರ್ಯಗಳಿಗೆ ಯಾವುದೇ ಶುಲ್ಕವಿಲ್ಲದೆ ನೀರನ್ನು ಉಪಯೋಗಿಸಲು ಕಾನೂನು ರಚನೆ, ಕೊಡಗಿನ ಪ್ರತಿ ಗ್ರಾಮ ಪಂಚಾಯಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ನಗರ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಕೊಡಗಿನ ಜಮ್ಮಾ ಬಾಣೆಗಳನ್ನು ಕಂದಾಯ ಭೂಮಿಗಳನ್ನಾಗಿ ಪರಿವರ್ತಿ ಸುವುದು ಹಾಗೂ ರೈತರು ಬೆಳೆದ ಬೆಳೆಗಳನ್ನು ಸುಸ್ಥಿತಿಯಲ್ಲಿಡಲು ಮೂರು ತಾಲೂಕುಗಳಲ್ಲೂ ಬೃಹತ್‌ ಶೀತಲೀಕರಣ ಘಟಕ ಹಾಗೂ ದಾಸ್ತಾನು ಮಳಿಗೆಗಳ ಸ್ಥಾಪನೆ, ಹೈನುಗಾರಿಕೆ ಅಭಿವೃದ್ಧಿಗಾಗಿ ಕೊಡಗಿನಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಡಿ. ಮಂಜುನಾಥ್‌ ತಿಳಿಸಿದರು.

ಬಿಎಸ್‌ಎಫ್ ಸೇರಿದಂತೆ ಮಾಜಿ ಸೈನಿಕರಿಗೆ ಮನೆ ಮತ್ತು ಮನೆ ಕಟ್ಟಲು ನಿವೇಶನ, ಭೂರಹಿತರಿಗೆ ವ್ಯವಸಾಯ ಮಾಡಲು ಜಮೀನು ನೀಡುವ ಬಗ್ಗೆ ಸರಕಾರದಿಂದ ಕ್ರಮ, ಮಡಿದ ಸೈನಿಕರ ಕುಟುಂಬಗಳಿಗೆ ಪ್ರಸಕ್ತ ದೊರೆಯುವ ಅನುದಾನವನ್ನು ದುಪ್ಟಟ್ಟುಗೊಳಿಸುವುದು, ಕೊಡಗಿನಲ್ಲಿ ಅನೇಕ ವರ್ಷಗಳಿಂದ ವಾಸವಾಗಿರು ವಸತಿಹೀನರಿಗೆ ಅಪಾರ್ಟ್‌ ಮೆಂಟ್‌ ಮಾದರಿಯಲ್ಲಿ ಸರಕಾರದಿಂದ ಮನೆ ನಿರ್ಮಾಣ, ಅನ್ನಭಾಗ್ಯದ ಪಡಿತರ ಕುಟುಂಬಗಳಿಗೆ ಆದ್ಯತೆ, ಸರಕಾರಿ ಜಮೀನಿನಲ್ಲಿ  ಅಕ್ರಮವಾಗಿ ವ್ಯವಸಾಯ ಮಾಡಿಕೊಂಡಿರುವವರಿಗೆ 5 ಎಕರೆವರೆಗೆ ಭೂಮಿ ಸಕ್ರಮಗೊಳಿಸಲು ಫಾರಂ 50-53 ಅಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವುದು ಬಿಜೆಪಿಯ ಗುರಿಯಾಗಿದೆ ಎಂದರು.

ಮೈಸೂರು-ಕುಶಾಲನಗರ ರೈಲ್ವೆ ಯೋಜನೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಹಾಗೂ ಕೊಡಗಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಬಿಜೆಪಿಯ ಆದ್ಯತೆಗಳಾಗಿವೆ ಎಂದು ಬಿ.ಡಿ. ಮಂಜುನಾಥ್‌ ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್‌ ಮಾತನಾಡಿದರು. ಗೋಣಿಕೊಪ್ಪಕ್ಕೆ ಯೋಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೇ 8ರಂದು ಗೋಣಿಕೊಪ್ಪಕ್ಕೆ ಭೇಟಿ ನೀಡಲಿದ್ದು, ಶಾಲಾ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಣಾಳಿಕೆ ಸಮಿತಿ ಸಹ ಸಂಚಾಲಕರಾದ ಗಿರೀಶ್‌ ಗಣಪತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next