Advertisement

ಅಹಮದಾಬಾದ್ ನಲ್ಲಿ ಕೊಡಗಿನ ಯುವಕ ಆತ್ಮಹತ್ಯೆ : ಪೈಲೆಟ್ ಆಗಬೇಕೆನ್ನುವ ಕನಸು ನನಸಾಗಲೇ ಇಲ್ಲ

01:06 PM Jun 05, 2021 | Team Udayavani |

ಮಡಿಕೇರಿ: ಭವಿಷ್ಯದಲ್ಲಿ ಪೈಲೆಟ್ ಆಗಬೇಕೆನ್ನುವ ಕನಸಿನೊಂದಿಗೆ ತರಬೇತಿಯಲ್ಲಿ ತೊಡಗಿದ್ದ ಕೊಡಗಿನ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ.

Advertisement

ಸುಂಟಿಕೊಪ್ಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಾದಾಪುರದ ಜಂಬೂರುಬಾಣೆಯ ನಿವಾಸಿ ಬೋಪಯ್ಯ ಹಾಗೂ ಮಾದಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಪೊನ್ನಮ್ಮ ಅವರ ಪುತ್ರ ಶಿಬಿ ಬೋಪಯ್ಯ(23) ಅವರೇ ಸಾವಿಗೀಡಾದ ಯುವಕ.

ಗುಜರಾತಿನ ಅಹಮದಾಬಾದ್ ನಲ್ಲಿ ಏರೋನಾಟಿಕ್ ಸೆಂಟರ್ ತರಬೇತಿ ಕೇಂದ್ರದಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಶಿಬಿ ಬೋಪಯ್ಯ ಅವರು ಪ್ರತಿದಿನ ರಾತ್ರಿ ತಂದೆ, ತಾಯಿಯೊಂದಿಗೆ ಮೊಬೈಲ್ ಮೂಲಕ ಮಾತನಾಡುತ್ತಿದ್ದರು. ಆದರೆ ಗುರುವಾರ ರಾತ್ರಿ ಕರೆ ಬಂದಿರಲಿಲ್ಲ, ಅಲ್ಲದೆ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲವೆಂದು ತಿಳಿದು ಬಂದಿದೆ.

ಇದನ್ನೂ ಓದಿ: ಕಸದ ರಾಶಿ ಪಕ್ಕ ನಟಿ ಬಿ. ಜಯಮ್ಮ ಮೃತದೇಹ : ಕುಟುಂಬಸ್ಥರು ಹೇಳಿದ್ದೇನು ?

ಶಿಬಿ ಅವರ ಸಹೋದರಿಗೆ ಶುಕ್ರವಾರ ತರಬೇತಿ ಕೇಂದ್ರದಿಂದ ಅಧಿಕಾರಿಗಳು ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 3 ತಿಂಗಳ ತರಬೇತಿಯಷ್ಟೇ ಬಾಕಿ ಉಳಿದಿದ್ದು, ಇದನ್ನು ಪೂರ್ಣಗೊಳಿಸಿದ್ದರೆ ಶಿಬಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದಿತ್ತು. ಆದರೆ ತರಬೇತಿ ಕೇಂದ್ರದ ಪಕ್ಕದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಸಂತೋಷದಿಂದಲೇ ಇದ್ದ ಶಿಬಿ ಸಾವಿಗೆ ಶರಣಾಗಲು ಹೇಗೆ ಸಾಧ್ಯ ಎಂದು ಪ್ರಕರಣದ ಬಗ್ಗೆ ಕುಟುಂಬ ವರ್ಗ ಸಂಶಯ ವ್ಯಕ್ತಪಡಿಸಿದೆ. ಈಗಾಗಲೇ ಪೋಷಕರು ಗುಜರಾತ್ ಕಡೆಗೆ ಪ್ರಯಾಣ ಬೆಳೆಸಿದ್ದು, ತಲುಪಿದ ನಂತರವಷ್ಟೇ ಸತ್ಯಾಂಶ ಗೊತ್ತಾಗಲಿದೆ.

ಅಹಮದಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next