ಮಡಿಕೇರಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶುಕ್ರವಾರ ಎರಡು ವರ್ಷ ವಯಸ್ಸಿನ ಮಗು ಸಹಿತ 6 ಮಂದಿಗೆ ಸೋಂಕು ದೃಢಪಟ್ಟಿದೆ.
ಒಟ್ಟು 36 ಪ್ರಕರಣ ದಾಖಲಾಗಿದ್ದು ಮೂವರು ಗುಣಮುಖರಾಗಿದ್ದಾರೆ. ಉಳಿದ 33 ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೀರಾಜಪೇಟೆಯ ಹುಂಡಿ ಮತ್ತು ಸೋಮವಾರಪೇಟೆಯ ನೆಲ್ಲಿಹುದಿಕೇರಿ ಗ್ರಾಮದಲ್ಲಿ ವಾಸ ಮಾಡಿದ್ದ ಬೆಂಗಳೂರಿನ ಪ್ರಯಾಣದ ಇತಿಹಾಸವಿದ್ದ ಗಂಡ, ಹೆಂಡತಿ ಮತ್ತು ಎರಡು ವರ್ಷ ವಯಸ್ಸಿನ ಮಗುವಿಗೆ ಸೋಂಕು ದೃಢಪಟ್ಟಿದೆ. ಶನಿವಾರಸಂತೆ ನಿವಾಸಿ, ಪುಣೆಯಿಂದ ಆಗಮಿಸಿದ 24 ವರ್ಷದ ವ್ಯಕ್ತಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.
ಸೋಂಕಿತ ವ್ಯಕ್ತಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಹುಂಡಿ, ನೆಲ್ಲಿಹುದಿಕೇರಿ ಮತ್ತು ಹುಲುಸೆ ಗ್ರಾಮಗಳನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 18 ನಿಯಂತ್ರಿತ (ಕಂಟೈನ್ಮೆಂಟ್) ಪ್ರದೇಶಗಳಿವೆ.