Advertisement

ಕೊಡಗಿನಲ್ಲಿ ಈಗ ನೀರವ; ಭೂಕುಸಿತ ಪ್ರದೇಶದಲ್ಲಿ 3 ಮೃತದೇಹ ಪತ್ತೆ​​​​

06:00 AM Aug 23, 2018 | |

ಮಡಿಕೇರಿ: ಕಳೆದ ಒಂದು ವಾರಗಳ ಮಹಾಮಳೆಯಿಂದ ಉಂಟಾದ ಕೆಸರಿನಾರ್ಭಟದಿಂದ ಮಡಿಕೇರಿ ತಾಲೂಕು ವ್ಯಾಪ್ತಿಯ 10ಕ್ಕೂ ಹೆಚ್ಚು ಗ್ರಾಮಗಳು ನಾಮಾವಶೇಷಗೊಂಡಿದ್ದು, ಶ್ಮಶಾನ ಮೌನ ಆವರಿಸಿದೆ. ಅಲ್ಲದೆ, ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಕೆಲವು ಪ್ರದೇಶಗಳಲ್ಲಿ ಡ್ರೋನ್‌ ಕಾರ್ಯಾಚರಣೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Advertisement

ಮಕ್ಕಂದೂರಿನ ಮೇಘಾತ್ತಾಳು ಮತ್ತು ಹೆಮ್ಮೆತ್ತಾಳು ಗ್ರಾಮ ಮತ್ತು ಕಾಟಕೇರಿ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸಿ ಒಟ್ಟು 3 ಮೃತದೇಹಗಳನ್ನು ಹೊರತೆಗೆಯಲಾಗಿದೆ. 

ಮೇಘಾತ್ತಾಳುವಿನಲ್ಲಿ ಕಳೆದ 8 ದಿನಗಳ ಹಿಂದೆ ಭಾರೀ ಮಳೆಗೆ ಬೆಟ್ಟ ಶ್ರೇಣಿ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ತಾಯಿ ಮಗ ಸಮಾಧಿಯಾಗಿದ್ದರು.

ಎನ್‌ಡಿಆರ್‌ಎಫ್ ಮತ್ತು ಡೋಂಗ್ರಾ ರೆಜಿಮೆಂಟನ್‌ ಸಿಬಂದಿಯೊಂದಿಗೆ ಸ್ಥಳೀಯರು ಕೂಡ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. 15ನೇ ಡೋಂಗ್ರಾ ರೆಜಿಮೆಂಟನ್‌ ಮೇಜರ್‌ ವಿಶ್ವಾಸ್‌ ಮತ್ತು ಮಕ್ಕಂದೂರು ನಿವಾಸಿ ಮೇಜರ್‌ ಬಿದ್ದಪ್ಪ ಅವರ ನೇತೃತ್ವದಲ್ಲಿ 15 ಮಂದಿ ಸೇನಾ ಸಿಬ್ಬಂದಿ ಮತ್ತು ಸ್ಥಳಿಯ ಯುವಕರ ತಂಡ ಬೆಳಗ್ಗೆಯಿಂದ ಬಿರುಸಿನ ಶೋಧ ಕಾರ್ಯ ನಡೆಸಿದರು. ಸ್ಥಳೀಯರಾದ ಮೇಜರ್‌ ಬಿದ್ದಪ್ಪ ಅವರ ಅನುಭವವನ್ನು ಆಧರಿಸಿ 15 ಡೋಂಗ್ರಾ ರೆಜಿಮೆಂಟನ್‌ ಯೋಧರು ಅಂದಾಜು 5 ಎಕರೆ ಪ್ರದೇಶದಲ್ಲಿ ಮೃತದೇಹಗಳಿಗೆ ಹುಡುಕಾಟ ನಡೆಸಿದರು. ಭೂಕುಸಿತ ಸ್ಥಳದಿಂದ 700 ಅಡಿ ದೂರದಲ್ಲಿ ಕೆಸರಿನಡಿ ಸಿಲುಕಿದ್ದ ಚಂದ್ರಾವತಿ (60) ಹಾಗೂ ಉಮೇಶ್‌ ರೈ (32) ಅವರ ಮೃತದೇಹವನ್ನು ಹೊರತೆಗೆಯುವಲ್ಲಿ ಸೇನಾ ತಂಡ ಯಶಸ್ವಿಯಾಯಿತು.

ಯೋಧರು ಹಗ್ಗದ ಸಹಾಯದಿಂದ ಆಂದಾಜು 3 ಸಾವಿರ ಅಡಿ ಆಳದ ಕಂದಕದಿಂದ ತಾಯಿ-ಮಗನ ಮೃತದೇಹವನ್ನು ಮೇಲೆ ತರುವ ಮೂಲಕ ಸಾಹಸ ಮೆರೆದರು.

Advertisement

ಕಾಟಕೇರಿ ಬಳಿ ಭೂಕುಸಿತದಿಂದ ಸಾವನ್ನಪ್ಪಿದ ಪವನ್‌ (34) ಎಂಬಾತನ ಮೃತದೇಹವನ್ನು ಎನ್‌ಡಿಆರ್‌ಆಫ್ ತಂಡ ಮತ್ತು ಕಾವೇರಿ ಸೇನೆಯ ಯುವಕರು 20 ಅಡಿ ಆಳದಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಬಳಿಕ ಮೂರೂ ಮೃತದೇಹಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

ತೀವ್ರಗೊಂಡ ಡ್ರೋನ್‌ ಕಾರ್ಯಾಚರಣೆ
ಮಹಾಮಳೆ ಮತ್ತು ಭೂ ಕುಸಿತದಿಂದ ಹಾನಿಗೊಳಗಾಗಿರುವ ಹಾರಂಗಿ, ಮಕ್ಕಂದೂರು, ಜೋಡುಪಾಲ, ಮುಕ್ಕೋಡ್ಲು, ಕಾಲೂರು ಹಾಗೂ ಮಡಿಕೇರಿ ಭಾಗದಲ್ಲಿ ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿ.ಪಂ. ಸಿಇಒ ಪ್ರಶಾಂತ್‌ ಸೇರಿದಂತೆ ಹಿರಿಯ ಅಧಿಕಾರಿಗಳು ವೈಮಾನಿಕ ಸಮೀಕ್ಷೆ ನಡೆಸಿದರು.

ಶುಕ್ರವಾರದಿಂದ ನೂತನ ತಂತ್ರಜಾnನದ ಮೂಲಕ ಬೆಳೆ ಹಾನಿ ಸಮೀಕ್ಷೆ ನಡೆಸಿ ಅನಂತರ ಪರಿಹಾರ ವಿತರಣೆ ಮಾಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಸೇನಾ ಪಡೆಗೆ ಸೇರಿದ ಡ್ರೋನ್‌ ಸೇರಿದಂತೆ ಇತರ 8 ಡ್ರೋನ್‌ಗಳ ಸಹಾಯದಿಂದ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ, ನಾಶಗೊಂಡ ಮನೆಗಳು, ಕೃಷಿ ಭೂಮಿ ಹಾಗೂ ಮೃತದೇಹಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೆಲವು ಮೃತದೇಹಗಳು ಗೋಚರಿಸಿದ ಬಗ್ಗೆಯೂ ಮಾಹಿತಿ ಲಭಿಸಿದೆಯಾದರು, ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊರತೆಗೆಯಲು ಅಗತ್ಯ ಮಾರ್ಗದ ವ್ಯವಸ್ಥೆಯನ್ನು ಮಾಡಿಕೊಂಡ ಬಳಿಕವಷ್ಟೆ ನಿಖರವಾಗಿ ಸಾವನ್ನಪ್ಪಿದವರ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ಮಿನಿ ಬಸ್‌ ಸೌಲಭ್ಯ
ಮಡಿಕೇರಿ-ಮಂಗಳೂರು ರಸ್ತೆ ಗುಡ್ಡ ಕುಸಿತದಿಂದ ಸಂಪರ್ಕ ಕಳೆೆದುಕೊಂಡಿದ್ದು, ಸುಳ್ಯಕ್ಕೆ ಸಂಪರ್ಕ ಕಲ್ಪಿಸುವ ಭಾಗಮಂಡಲ-ಕರಿಕೆ ಮೂಲಕ ಹಾದುಹೋಗಲು ಮಡಿಕೇರಿಯಿಂದ ಸುಳ್ಯದವರೆಗೆ ಮಿನಿ ಬಸ್‌ಗಳ ಸಂಚಾರ ಆರಂಭಿಸಲಾಗಿದೆ.

ಮನಃಶಾಸ್ತ್ರಜ್ಞರುರಿಂದ ಕೌನ್ಸೆಲಿಂಗ್‌
ಮಡಿಕೇರಿ:
ಜಲ ಪ್ರಳಯದಿಂದ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿ, ನಲುಗಿಹೋಗಿರುವ ನೂರಾರು ಕುಟುಂಬಗಳಿಗೆ ಮಾನಸಿಕ ಧೈರ್ಯ ತುಂಬಲು ಮನಶಾಸ್ತ್ರಜ್ಞರು ತಂಡ  ವೈಯಕ್ತಿಕ ಹಾಗೂ ಸಾಮೂಹಿಕ ಕೌನ್ಸೆಲಿಂಗ್‌ ಆರಂಭಿಸಿದೆ.

ಕೊಡಗು ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಇರುವ ನಿರಾಶ್ರಿತರ ಕೇಂದ್ರಗಳಿಗೆ ಡಾ.ನವೀನ್‌ ಹಾಗೂ ಡಾ. ಡೇವಿಡ್‌ ನೇತೃತ್ವದ ಮನಶಾಸ್ತ್ರಜ್ಞರ ಎರಡು ತಂಡ ಪ್ರತ್ಯೇಕವಾಗಿ ಭೇಟಿ ನೀಡಿ ಮಾನಸಿಕ ಧೈರ್ಯ ತುಂಬಿ ಮುಂದಿನ ಸವಾಲು ಹೇಗೆ ಎದುರಿಸಬೇಕು ಎಂಬುದನ್ನು ನಿರಾಶ್ರಿತರಿಗೆ ಹೇಳಿಕೊಡುತ್ತಿದೆ. ಎರಡು ತಂಡದಲ್ಲಿ ಐದಾರು ಮಂದಿ ವೈದ್ಯರಿದ್ದು, ಒಂದೊಂದು ಕುಟುಂಬಕ್ಕೂ ಪ್ರತ್ಯೇಕವಾಗಿ ಕೌನ್ಸೆಲಿಂಗ್‌ ಮಾಡುತ್ತಿದ್ದಾರೆ.

ಹತ್ತಾರು ವರ್ಷ ಮನೆಯಲ್ಲಿ ಬದುಕಿದ್ದು, ತಕ್ಷಣವೇ ಮನೆ ಕಳೆದುಕೊಂಡಾಗ ಆಗುವ ನೋವು ಆಧರಿಸಿ ಮುಂದಿನ ಸವಾಲು ಹೇಗೆ ಎದುರಿಸಬೇಕು ಎಂಬ ಬಗ್ಗೆ ಕೌನ್ಸೆಲಿಂಗ್‌ ಮಾಡಲಾಗುತ್ತಿದೆ. ಎಲ್ಲ ನಿರಾಶ್ರಿತರ ಕೇಂದ್ರಕ್ಕೂ ಈ ತಂಡ ಭೇಟಿ ನೀಡಲಿದೆ. ಅವರ ಆರೋಗ್ಯಕ್ಕೂ ಬೇಕಾದ ಸಲಹೆ ಸೂಚನೆಯನ್ನು ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಕೆಟ್ಟದಾರಿ ಹಿಡಿಯ ಬಾರದು ಎಂಬುದನ್ನೂ ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಮೇಶ್‌ ಸುರಿಗೇಹಳ್ಳಿ ತಿಳಿಸುತ್ತಾರೆ.

ಸ್ವಚ್ಚತೆಗೆ ಆದ್ಯತೆ
ನಿರಶ್ರಿತರ ಶಿಬಿರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶೌಚಾಲಯಗಳನ್ನು ಹೇಗೆ ಸ್ವತ್ಛವಾಗಿಟ್ಟುಕೊಳ್ಳಬೇಕು ಎಂಬುದರ ತರಬೇತಿ ನೀಡಿದ್ದೇವೆ. ನಿತ್ಯವೂ ಮೂರ್‍ನಾಲ್ಕು ಬಾರಿ ಸ್ವತ್ಛ ಮಾಡಲಾಗುತ್ತಿದೆ. ಸಾಂಕ್ರಾಮಿಕ ರೋಗಗಳ ಬಗ್ಗೆಯೂ ಎಚ್ಚರಿಕೆ ಮತ್ತು ಅರಿವು ಮೂಡಿಸಿದ್ದೇವೆ. ಈವರೆಗೆ ಯಾವುದೇ ರೀತಿಯ ಸಾಂಕ್ರಮಿಕ ರೋಗ ಶಿಬಿರಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ವಿವರಿಸಿದರು.

– ರಾಜು ಖಾರ್ವಿ ಕೊಡೇರಿ/ಎಸ್‌.ಕೆ. ಲಕ್ಷ್ಮೀಶ್‌
ಚಿತ್ರ: ಎಚ್‌.ಫ‌ಕ್ರುದ್ದೀನ್‌

Advertisement

Udayavani is now on Telegram. Click here to join our channel and stay updated with the latest news.

Next