Advertisement

ಒಂದು ದೇಶ, ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಗೆ ಸರಕಾರ ಬದ್ಧ: ಪ್ರಧಾನಿ ನರೇಂದ್ರ ಮೋದಿ

02:57 PM Jan 05, 2021 | Team Udayavani |

ಬೆಂಗಳೂರು: ಒಂದು ದೇಶ, ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮೂಲಕ ದೇಶದಲ್ಲಿ ನೈಸರ್ಗಿಕ ಅನಿಲದ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

Advertisement

ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ್ ಪೈಪ್ ಲೈನ್ ಅನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಭಾರತ ಸರ್ಕಾರವು ಇಂಧನ ಪೂರೈಕೆಗೆ ಒಂದು ಸಮಗ್ರ ಯೋಜನೆಯನ್ನು ರೂಪಿಸಿದ್ದು, ಪರಿಸರ ಸ್ನೇಹಿ ಇಂಧನ ಬಳಕೆಗೆ ಆದ್ಯತೆ ನೀಡುತ್ತಿದೆ. ಆ ಮೂಲಕ ಜನ ಸ್ನೇಹಿ ಹಾಗೂ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.

1987 ರಿಂದ 2014 ರ ಅವಧಿಯಲ್ಲಿ ದೇಶದಲ್ಲಿ 15 ಸಾವಿರ ಕಿ.ಮೀ. ನೈಸರ್ಗಿಕ ಅನಿಲ ಪೈಪ್ ಲೈನ್ ಅಳವಡಿಸಲಾಗಿತ್ತು. ಆದರೆ ಕಳೆದ ಆರು ವರ್ಷಗಳ ಅವಧಿಯಲ್ಲಿ 16 ಸಾವಿರ ಕಿ.ಮೀ. ನಷ್ಟು ನೈಸರ್ಗಿಕ ಅನಿಲ ಪೈಪ್ ಲೈನ್ ಅಳವಡಿಸುವ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮುಂದಿನ ನಾಲ್ಕಾರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು.

ಇದನ್ನೂ ಓದಿ:ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆಯಿಂದ ಕಾಂಗ್ರೆಸ್ ನಿರ್ನಾಮ: ಈಶ್ವರಪ್ಪ

ಸಾರಿಗೆ ಸಂಪರ್ಕ ಹಾಗೂ ಪರಿಸರ ಸ್ನೇಹಿ ಇಂಧನ ವಲಯದಲ್ಲಿ ಪ್ರಗತಿ ಸಾಧಿಸಿದ ದೇಶಗಳು ಅಭಿವೃದ್ಧಿ ನಕ್ಷೆಯಲ್ಲಿ ಮುಂಚೂಣಿಯಲ್ಲಿರುತ್ತವೆ. ಭಾರತವೂ ಅಭಿವೃದ್ಧಿಯ ಮುಂಚೂಣಿಯಲ್ಲಿರಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

Advertisement

ಒಂದು ದೇಶ ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಯು ಪೂರ್ಣಪ್ರಮಾಣದಲ್ಲಿ ಸಾಕಾರಗೊಂಡಾಗ ರಸಗೊಬ್ಬರ, ರಾಸಾಯನಿಕ, ಪೆಟ್ರೋಲಿಯಂ ಮತ್ತು ಇಂಧನ ವಲಯಗಳಿಗೆ ಹೆಚ್ಚಿನ ಲಾಭವಾಗಲಿದೆ. ಬಡ, ಮಧ್ಯಮ ವರ್ಗದ ಜನರು ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಸಾವಿರಾರು ಕೋಟಿ ವಿದೇಶಿ ವಿನಿಮಯ ಮೊತ್ತ ಉಳಿತಾಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಆರಂಗಡಿಯಲ್ಲಿ ಕಾಗೆಗಳ ನಿಗೂಢ ಸಾವು : ಸ್ಥಳೀಯರಲ್ಲಿ ಆತಂಕ

ದೇಶದಲ್ಲಿ ನೈಸರ್ಗಿಕ ಅನಿಲ ಬಳಕೆ ಶೇ 6.3 ರಷ್ಟಿದ್ದು, 2030ರ ವೇಳೆಗೆ ಇದನ್ನು ಶೇ. 15ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೊಚ್ಚಿ-ಮಂಗಳೂರು ಪೈಪ್ ಲೈನ್ ನಿಂದ ಈ ಭಾಗದ ಕೈಗಾರಿಕೋದ್ಯಮಗಳಿಗೆ ಅನುಕೂಲವಾಗಲಿದೆ. ಜೊತೆಗೆ ವಾಹನಗಳಲ್ಲಿ ಸಿ ಎನ್ ಜಿ ಬಳಕೆಗೂ ಉತ್ತೇಜನ ದೊರೆಯಲಿದೆ. ಈ ವ್ಯಾಪ್ತಿಯಲ್ಲಿ ಸುಮಾರು 700 ಸಿಎನ್ ಜಿ ಸ್ಟೇಷನ್ ಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಯೋಜನೆಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಭಾಗದಲ್ಲಿ 4 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಸಲಾಗುವುದು, ಅಲ್ಲದೆ, ವಾಣಿಜ್ಯ ಚಟುವಟಿಕೆಗಳಿಗೆ, ಉದ್ದಿಮೆಗಳಿಗೆ, ವಿಶೇಷವಾಗಿ ಎಂ.ಸಿ.ಎಫ್ ಹಾಗೂ ಎಂ.ಆರ್. ಪಿ.ಎಲ್ ಗಳಿಗೆ ಅನುಕೂಲವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next