Advertisement

ನಮ್ಮ ಶಾಲೆ ನಮ್ಮ ಹೆಮ್ಮೆ: ಗ್ರಾಮೀಣ ಪ್ರದೇಶದ ಜ್ಞಾನ ದೇಗುಲ ಕಲ್ಲಡ್ಕ ಸ.ಹಿ.ಪ್ರಾ. ಶಾಲೆ

12:40 PM Nov 03, 2019 | mahesh |

ಇಬ್ಬರು ಶಾಸಕರನ್ನು ಸಮಾಜಕ್ಕೆ ಕೊಟ್ಟ ಹೆಮ್ಮೆ ಈ ಶಾಲೆಗಿದೆ.
1893 ಶಾಲೆ ಆರಂಭ

Advertisement

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಬಂಟ್ವಾಳ: ಹತ್ತೂರ ವಿದ್ಯಾರ್ಥಿಗಳ ಶಿಕ್ಷಣದ ದಾಹ ನೀಗಿಸುವ ನಿಟ್ಟಿನಲ್ಲಿ ತೀರಾ ಗ್ರಾಮೀಣ ಪ್ರದೇಶವಾಗಿದ್ದ ಕಲ್ಲಡ್ಕದಲ್ಲಿ ಆರಂಭಗೊಂಡ ದ.ಕ.ಜಿ.ಪಂ. ಮಾದರಿ ಹಿ.ಪ್ರಾ. ಶಾಲೆ ಇದೀಗ ಶತಮಾನೋತ್ತರ ಬೆಳ್ಳಿಹಬ್ಬ (125 ವರ್ಷಗಳು)ದೊಂದಿಗೆ ಹೆಮ್ಮರವಾಗಿ ಬೆಳೆದುನಿಂತಿದೆ. 1893ರಲ್ಲಿ ಆರಂಭಗೊಂಡ ಶಾಲೆಯಲ್ಲೀಗ 305 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಅಂದಿನ ಕಾಲಘಟ್ಟದಲ್ಲಿ ಕಲ್ಲಡ್ಕದ ಸುತ್ತಮುತ್ತ ಲಿನ ಗ್ರಾಮಗಳಾದ ಪಾಣೆಮಂಗಳೂರು, ನರಿಕೊಂಬು, ಶಂಭೂರು, ಬಾಳ್ತಿಲ, ಮಾಣಿ, ವೀರಕಂಭ, ಬೋಳಂತೂರು, ಅಮೂರು ಭಾಗಗಳಿಂದ ವಿದ್ಯಾರ್ಥಿಗಳು ಇದೇ ಶಾಲೆಗೆ ವ್ಯಾಸಂಗಕ್ಕಾಗಿ ಆಗಮಿಸುತ್ತಿದ್ದರು. ಪ್ರಾರಂಭದ ದಿನಗಳಲ್ಲಿ “ಲೋಕಲ್‌ ಫಂಡ್‌ ಶಾಲೆ’ ಎಂಬ ಹೆಸರಿನೊಂದಿಗೆ ಸಣ್ಣ ಮುಳಿಹುಲ್ಲಿನ ಸೂರಿನಲ್ಲಿ ಶಾಲೆ ಆರಂಭಗೊಂಡಿತ್ತು.

ಪ್ರಸ್ತುತ ಕಲ್ಲಡ್ಕ ಸುತ್ತಮುತ್ತಲ ಪ್ರದೇಶದಲ್ಲಿ ಖಾಸಗಿ, ಸರಕಾರಿ ಸಹಿತ 11 ಶಾಲೆಗಳು ಕಾರ್ಯಾಚರಿಸುತ್ತಿವೆ. ಶಾಲೆಯ ನಿವೇಶನವು 0.85 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, 1.75 ಎಕರೆಯ ಆಟದ ಮೈದಾನವನ್ನು ಹೊಂದಿದೆ. ಪ್ರಸ್ತುತ ಆಟದ ಮೈದಾನದ ಜತೆಗೆ ಕುಡಿಯುವ ನೀರಿಗಾಗಿ ಬಾವಿ, ಕೊಳವೆಬಾವಿ, ವಿದ್ಯುತ್‌ ಸೌಲಭ್ಯ, ಶೌಚಾಲಯ, ಕಂಪೌಂಡ್‌, ಕಂಪ್ಯೂಟರ್‌ ಸೌಲಭ್ಯ, ಬ್ಯಾಂಡ್‌ ಸೆಟ್‌, ಅಡುಗೆ ಕೊಠಡಿ, ಪ್ಲೇ ಏರಿಯಾಗಳನ್ನು ಹೊಂದಿರುವುದು ಶಾಲೆಯ ವಿಶೇಷತೆಯಾಗಿದೆ.

Advertisement

ಇಬ್ಬರು ಮಾಜಿ ಶಾಸಕರು
ಶಿಕ್ಷಕ ಲಾರೆನ್ಸ್‌ ಕ್ರಾಸ್ತಾ ಅವರು ಪ್ರಾರಂಭದ ಮುಖ್ಯ ಶಿಕ್ಷಕರಾಗಿದ್ದು, ಅಂದಿನ ಶಿಕ್ಷಕರು-ವಿದ್ಯಾರ್ಥಿಗಳ ವಿವರ ಲಭ್ಯವಾಗಿಲ್ಲ. ಶಾಲೆ ಪ್ರಾರಂಭವಾದ ದಿನಗಳಲ್ಲಿ ಸುಮಾರು 8 ಗ್ರಾಮಗಳಿಗೆ ಒಂದೇ ಶಾಲೆ ಇತ್ತು. ಹಲವು ಹಳೆ ವಿದ್ಯಾರ್ಥಿಗಳು ಸಮಾಜದ ಪ್ರಮುಖ ಸ್ಥಾನಗಳನ್ನು ಅಲಂಕರಿಸುವ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದು, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ನಿವೃತ್ತ ಅಡಿಶನಲ್‌ ಜನರಲ್‌ ಮ್ಯಾನೇಜರ್‌ ಕೆ.ಎಂ. ಶೆಟ್ಟಿ, ಲೋಕೋಪಯೋಗಿ ಗುತ್ತಿಗೆದಾರ ಪಿ.ಬಿ. ಇಬ್ರಾಹಿಂ ಭಟ್ಕಳ ಮೊದಲಾದ ಅನೇಕ ಗಣ್ಯರು ಇದೇ ಶಾಲೆಯಲ್ಲಿ ಕಲಿತು ಹೆಸರು ಮಾಡಿದ್ದಾರೆ.

ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ
ಶಾಲೆಯ ಹಳೆಯ ಕಟ್ಟಡವನ್ನು ಕೆಡವಲು ಇಲಾಖೆ ಅನುಮತಿ ನೀಡಿದ್ದು, ಅದೇ ಸ್ಥಳದಲ್ಲಿ ಎಂಆರ್‌ಪಿಎಲ್‌ನ 64 ಲಕ್ಷ ರೂ. ಅನುದಾನದಲ್ಲಿ 10 ಕೊಠಡಿಗಳ ನಿರ್ಮಾಣಕ್ಕೆ ಈಗಾಗಲೇ ಸಂಸದ ನಳಿನ್‌ಕುಮಾರ್‌ ಕಟೀಲು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹಳೆ ಕಟ್ಟಡವನ್ನು ಕೆಡಹುವ ಉದ್ದೇಶದಿಂದಲೇ ಕೆಲವು ಸಮಯಗಳ ಹಿಂದೆ ಸುಮಾರು 17.30 ಲಕ್ಷ ರೂ. ವೆಚ್ಚದಲ್ಲಿ ಮೂರು ಕೊಠಡಿಗಳು ನಿರ್ಮಾಣಗೊಂಡಿವೆ. ಶಾಲೆಯ ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿ ಹಾಗೂ ಎಂಆರ್‌ಪಿಎಲ್‌ನ ಸಹಯೋಗದೊಂದಿಗೆ ಕಳೆದ ಅ. 1ರಂದು ಮಕ್ಕಳಿಗೆ ಪ್ಲೇ ಏರಿಯಾವೊಂದನ್ನು ನಿರ್ಮಿಸಿ ಕೊಡಲಾಗಿದೆ.

305 ವಿದ್ಯಾರ್ಥಿಗಳು
ಈ ಶಾಲೆಯಲ್ಲಿ 2019-20ನೇ ಶೈಕ್ಷಣಿಕ ಸಾಲಿನಿಂದ ಸರಕಾರಿ ಅನುಮತಿಯೊಂದಿಗೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ, ಜತೆಗೆ ಎಸ್‌ಡಿಎಂಸಿ ಸಹಕಾರದಿಂದ ಎಲ್‌ಕೆಜಿ, ಯುಕೆಜಿ ಶಿಕ್ಷಣ ಆರಂಭಗೊಂಡಿದೆ. ಈ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿಯಿಂದ 8ನೇ ತರಗತಿವರೆಗೆ 305 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಒಟ್ಟು 9 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 125 ವರ್ಷಗಳ ಇತಿಹಾಸವಿರುವ ಕಲ್ಲಡ್ಕ ಶಾಲೆ ಇಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಜ್ಞಾನದ ದೇಗುಲವಾಗಿ ಬೆಳೆದಿದೆ.
-ಅಬೂಬಕ್ಕರ್‌ ಅಶ್ರಫ್‌, ಮುಖ್ಯ ಶಿಕ್ಷಕರು

ಕಲ್ಲಡ್ಕ ಶಾಲೆಗೆ ನಾನು 1952ರಲ್ಲಿ 1ನೇ ತರಗತಿಗೆ ಸೇರ್ಪಡೆ ಗೊಂಡಿದ್ದೆ. ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿತ್ತು. ಪ್ರಸ್ತುತ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಶತಮಾನೋತ್ತರ ಬೆಳ್ಳಿಹಬ್ಬಕ್ಕೆ ಎಲ್ಲರ ನೆರವಿನಿಂದ ಅಭಿವೃದ್ಧಿಗಾಗಿ 2 ಕೋ.ರೂ.ಗಳ ಯೋಜನೆ ಹಾಕಿಕೊಳ್ಳಲಾಗಿದೆ.
-ರುಕ್ಮಯ ಪೂಜಾರಿ, ಮಾಜಿ ಶಾಸಕರು, ಹಳೆ ವಿದ್ಯಾರ್ಥಿ

- ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next