ಮಹಾನಗರ: ನೂತನ ಕೈಗಾರಿಕೆ ನೀತಿಗಳ ಬಗ್ಗೆ ಕೈಗಾರಿಕೋದ್ಯಮಿಗಳು, ರಫ್ತುದಾರರು ತಿಳಿದುಕೊಳ್ಳುವ ಆವಶ್ಯಕತೆ ಇದೆ ಎಂದು ಬೆಂಗಳೂರಿನ ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಶನ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಸತೀಶ್ ಹೇಳಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಮತ್ತು ವಿಟಿಪಿಸಿ ಬೆಂಗಳೂರು ಸಹಯೋಗದಲ್ಲಿ ಕೆಸಿಸಿಐ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಫ್ತುದಾರರ ಸಮಸ್ಯೆಗಳ ವಿಷಯವಾಗಿ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೈಗಾರಿಕಾ ನೀತಿಗಳ ಅರಿವು ಇದ್ದರೆ ಕೈಗಾರಿಕೆ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದರು.
ಸೇವಾ ರಫ್ತಿನಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಸರಕಾರ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಆರ್ಥಿಕ ಸವಲತ್ತು ಕಲ್ಪಿಸಿದೆ. ರಫು¤ ನೀತಿಯಡಿ ವಿಶೇಷವಾದ ವೆಬ್‌ಸೈಟ್‌ಗಳು ಲಭ್ಯವಿದ್ದು, ಇವುಗಳ ಮುಖಾಂತರ ಕೌಶಲ ಅಭಿವೃದ್ಧಿ ವ್ಯವಸ್ಥೆ, ಸರಕು ಸಾಗಾಣಿಕೆ, ಎಕ್ಸಪೋರ್ಟ್ ಕ್ರೆಡಿಟ್ ಗ್ಯಾರಂಟಿ ಇನ್ಶೂರೆನ್ಸ್ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು.
ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದ ಜಂಟಿ ನಿರ್ದೇಶಕ ಬಿ.ಕೆ. ಶಿವಕುಮಾರ್, ದ.ಕ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ರಮಾನಂದ ನಾಯಕ್ ಉಪಸ್ಥಿತರಿದ್ದರು. ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಸ್ವಾಗತಿಸಿ, ಐಸಾಕ್ ವಾಸ್ ಅತಿಥಿಗಳ ಪರಿಚಯ ಮಾಡಿದರು. ಶಶಿಧರ ಪೈ ಮಾರೂರು ವಂದಿಸಿದರು.