ಜೇವರ್ಗಿ: ಕೃಷಿ ಪರಿಕರಗಳನ್ನು ಮಾರಾಟ ಮಾಡುವವರಿಗೆ ಸರಿಯಾದ ತರಬೇತಿ ಒದಗಿಸಿ, ಅಗತ್ಯ ಜ್ಞಾನ ತಿಳಿವಳಿಕೆ ನೀಡುವುದು ಅಗತ್ಯವಾಗಿದೆ ಎಂದು ನಿವೃತ್ತ ನವದೆಹಲಿಯ ಐಎಆರ್‌ಐ ನಿರ್ದೇಶಕ ಹಾಗೂ ಧಾರವಾಡ ಕೃಷಿ ವಿವಿಯ ನಿವೃತ್ತ ಕುಲಪತಿ ಡಾ| ಎಸ್.ಎ. ಪಾಟೀಲ ಹೇಳಿದರು.
ತಾಲೂಕಿನ ಕಲಬುರಗಿ ರಸ್ತೆಯಲ್ಲಿರುವ ರದ್ದೇವಾಡಗಿಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಭಾರತ ಸರ್ಕಾರದ ಮ್ಯಾನೇಜ್ ಹೈದರಾಬಾದ ಸಮೇತಿ (ಉತ್ತರ), ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರ ಮತ್ತು ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ-2 ಸಂಯುಕ್ತಾಶ್ರಯದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ಕೋರ್ಸ್ ಪ್ರಮಾಣ ಪತ್ರ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿ ಸಮುದಾಯಕ್ಕೆ ಕೂಡಲೇ ಸಿಗುವ ಮಾರ್ಗದರ್ಶಿಗಳೆಂದರೆ ಕೃಷಿ ಪರಿಕರಗಳನ್ನು ಮಾರಾಟ ಮಾಡುವವರು. ಅವರಲ್ಲಿ ಬಹಳಷ್ಟು ಜನ ಕೃಷಿ ಪರಿಕರದ ಬಗ್ಗೆ ಪರಿಣತಿಯನ್ನು ಹೊಂದಿದವರಾಗಲೀ ಅಥವಾ ಮಾಡಿರುವವರಾಗಲೀ ಇರುವುದಿಲ್ಲ. ಅಂತಹವರಿಗೆ ಸರಿಯಾದ ತರಬೇತಿ ಒದಗಿಸಿ, ಅಗತ್ಯ ಜ್ಞಾನ ತಿಳಿವಳಿಕೆ ಒದಗಿಸುವುದು ಅಗತ್ಯ. ರೈತರಿಗೆ , ಕೃಷಿ ತಾಂತ್ರಿಕ ಮಾಹಿತಿಗಾಗಿ ಸಂಪರ್ಕಿಸುವ ಎರಡನೇ ಪ್ರಮುಖ ಮೂಲ ವ್ಯಕ್ತಿಗಳಾಗಿರುವ ಪರಿಕರ ಮಾರಾಟಗಾರರು ರೈತರಿಗೆ ಹೊಸ ಹೊಸ ವಿಧಾನಗಳ ಬಗ್ಗೆ ತಿಳಿಹೇಳಬೇಕು. ಬಹಳ ಕಷ್ಟಪಟ್ಟು ಡೀಲರ್ ಗಳಾಗಿದ್ದೀರಿ, ನಿಮ್ಮ ಸೇವೆ ದೇವರ ಸೇವೆ ಇದ್ದ ಹಾಗೇ. ಕೃಷಿ ಪರಿಕರ ಮಾರಾಟದ ಜತೆ ಜತೆಗೆ ಹೊಸ ವಿಧಾನಗಳ ಬಗ್ಗೆ ತಿಳಿದುಕೊಂಡು ರೈತರಿಗೆ ತರಬೇತಿ ನೀಡಬೇಕು. 10 ಜನ್ಮ ತಾಳಿ ಬಂದರೂ ಕೃಷಿ ಬಗ್ಗೆ ಸಂಪೂರ್ಣ ತಿಳಿದುಕೊಳ್ಳುವುದು ಅಸಾಧ್ಯ. ನಮ್ಮ ದೇಶದ ಕೃಷಿ ವಿಜ್ಞಾನ ಅಮೇರಿಕಾಗಿಂತ ಚೆನ್ನಾಗಿದೆ. 1 ಲಕ್ಷ ಕೋಟಿ ಆಹಾರ ಧಾನ್ಯ ವಿದೇಶಕ್ಕೆ ರಪು¤ ಮಾಡಲಾಗುತ್ತಿದೆ. ವಿದ್ಯಾವಂತ ಯುವಕರು ಕೃಷಿ ಕಡೆ ವಾಲಿದರೇ ಜೇವರ್ಗಿ ಕೂಡ ಇಸ್ರೇಲ್ ಮಾದರಿ ಆಗಬಹುದು ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ ಡಾ| ಅಜಯಸಿಂಗ್, ರೈತರ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ. ರಾಜ್ಯದಲ್ಲಿ 2.82 ಲಕ್ಷ ಪರಿಕರ ಮಾರಾಟಗಾರರಿದ್ದು, ಜೇವರ್ಗಿ ತಾಲೂಕಿನಲ್ಲಿ 40 ಜನ ಪರಿಕರ ಮಾರಾಟಗಾರರು 48 ವಾರಗಳ ತರಬೇತಿ ಪಡೆದುಕೊಂಡಿದ್ದಾರೆ. ರೈತರ ಏಳ್ಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.
ಇದೇ ವೇಳೆ ತರಬೇತಿ ಪಡೆದ 40 ಜನ ಪರಿಕರ ಮಾರಾಟಗಾರರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಧಾರವಾಡ ಕೃಷಿ ವಿವಿಯ ಪ್ರಾಧ್ಯಾಪಕ ಡಾ|ಎಂ.ಗೋಪಾಲ, ಕೃಷಿ ವಿಜ್ಞಾನ ಕೇಂದ್ರದ ಅನುಗಾರರಾದ ಅಶೋಕಕುಮಾರ ಬೆಣ್ಣೂರ, ಕೆವಿಕೆ ಮುಖ್ಯಸ್ಥ ಡಾ|ಎನ್.ಮಂಜುನಾಥ, ಡಾ|ಅಮರೇಶ, ಡಾ|ರಾಘವೇಂದ್ರ, ಡಾ| ಉಮಾ, ರಾಜಶೇಖರ ಸೀರಿ ಆಗಮಿಸಿದ್ದರು. ಪರಿಕರ ಮಾರಾಟಗಾರರಾದ ದಯಾನಂದ ದೇವರಮನಿ, ಮಲ್ಲಿಕಾರ್ಜುನ ಪಾಟೀಲ ಬಿರಾಳ, ಈರಣ್ಣ ಬನ್ನೆಟ್ಟಿ, ಮಹ್ಮದ್ ಸೋಫಿ ಗಂವ್ಹಾರ, ನಾಗಣ್ಣಗೌಡ ಹೊಸಮನಿ, ಸತೀಶಬಾಬು ಹರವಾಳ, ಮರೆಪ್ಪ ಸರಡಗಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.