ಹುಬ್ಬಳ್ಳಿ: ಹಣ, ಅಧಿಕಾರ, ಪದವಿಗಳು ಆಸ್ತಿಯಲ್ಲ. ಜ್ಞಾನವೇ ನಿಜವಾದ ಆಸ್ತಿ. ಜ್ಞಾನಕ್ಕಾಗಿ ಆಸಕ್ತಿ ಬೇಕು, ಕಠಿಣ ಪರಿಶ್ರಮ ಇರಬೇಕು. ಜ್ಞಾನದಿಂದ ಸಾಧನೆ ಸಾಧ್ಯ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಬದುಕಿಗೆ ಮುಂದಾಗಬೇಡಿ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ| ಸುಧಾಮೂರ್ತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಹಣ ಮತ್ತು ಪದವಿಗಳಿಂದ ಆತ್ಮವಿಶ್ವಾಸ ಖರೀದಿ ಮಾಡಲು ಸಾಧ್ಯವಿಲ್ಲ. ಆತ್ಮವಿಶ್ವಾಸ ನಾವೇ ರೂಪಿಸಿಕೊಳ್ಳಬೇಕು. ನಮ್ಮ ಬದುಕಿನಲ್ಲಿ ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ನಿರ್ಧರಿಸುವುದೇ ಆತ್ಮವಿಶ್ವಾಸವಾಗಿದೆ. ಆತ್ಮವಿಶ್ವಾಸವೇ ನಮ್ಮ ಭವಿಷ್ಯ ನಿರ್ಧರಿಸುತ್ತದೆ ಎಂದರು.
ಪದವಿ ಪಡೆದ ನೀವೆಲ್ಲರೂ ಇದೀಗ ದೊಡ್ಡ ವಿಶ್ವಕ್ಕೆ ಪ್ರವೇಶ ಪಡೆಯುತ್ತಿದ್ದೀರಿ. ಇಲ್ಲಿ ಪಠ್ಯ, ಶಿಕ್ಷಕರು, ಪರೀಕ್ಷೆ ದಿನಾಂಕ ಇರದು. ಆದರೆ, ಅನುಭವವೇ ಜೀವನದ ಶ್ರೇಷ್ಠ ಶಿಕ್ಷಕನಾಗುತ್ತಾನೆ. ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಏರಿಳಿತ ನಿರ್ವಹಿಸುವ ಶಕ್ತಿ ಪ್ರತಿಯೊಬ್ಬರಿಗೂ ಇರಬೇಕು. ಬದುಕಿನಲ್ಲಿ ಹಣ ಸೀಮಿತ ಮಾತ್ರ. ಅದೇ ಬದುಕಲ್ಲ. ಸಕಾರಾತ್ಮಕವಾಗಿ ಚಿಂತಿಸಿ ಮುನ್ನಡೆದಲ್ಲಿ ಬದುಕು ಸಂತೋಷಮಯವಾಗಿರುತ್ತದೆ. ಪರೋಪಕಾರ ಮತ್ತು ಪರಸ್ಪರರನ್ನು ಪ್ರೀತಿಸುವ ಗುಣ ಹೊಂದಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಕಂಪೆನಿಗಳು ತನಗೆ ಉತ್ತಮ ಆಸ್ತಿ ಆಗಬಲ್ಲ ಮಾನವ ಸಂಪನ್ಮೂಲವನ್ನು ನೋಡುತ್ತವೆ. ಅಂತಹವರಿಗೆ ಉದ್ಯೋಗಾವಕಾಶ ನೀಡುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕೆಂದರು.
ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ ವಿವಿಯ ಸಾಧನೆ ಕುರಿತಾಗಿ ವಿವರಿಸಿದರು. ಇಂದಿನ ಘಟಿಕೋತ್ಸವದಲ್ಲಿ ಸುಮಾರು 1062 ಪದವಿ ವಿದ್ಯಾರ್ಥಿಗಳು ಹಾಗೂ 186 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದು, ವಿವಿಯ ಮೊದಲ ತಂಡ ಇದಾಗಿದೆ. ಬಿವಿಬಿ ಎಂಜಿನಿಯರಿಂಗ್ ಕಾಲೇಜು ಇದೀಗ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವಾಗಿದ್ದು, ರಾಷ್ಟ್ರ-ಅಂತಾರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ತೋರಿದೆ ಎಂದು ವಿವರಿಸಿದರು.
ಎಂಐಟಿ ಗುರುತಿಸಿದ ಭವಿಷ್ಯದ ಎಂಜಿನಿಯರಿಂಗ್ ಶಿಕ್ಷಣದ ಜಾಗತಿಕ ನಾಯಕತ್ವದ ಐದು ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಬಿವಿಬಿ-ಕೆಎಲ್ಇ ತಾಂತ್ರಿಕ ವಿವಿ ಒಂದಾಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ದೇಶದ ಏಕೈಕ ಸಂಸ್ಥೆ ಎಂಬುದು ಹೆಮ್ಮೆಯ ಸಂಗತಿ. ಅದೇ ರೀತಿ ಎಐಸಿಟಿ ಪರೀಕ್ಷಾ ಪದ್ಧತಿಯಲ್ಲಿ ಅನೇಕ ಸುಧಾರಣೆಗಳನ್ನು ತಂದಿದೆ. ಕೆಎಲ್ಇ ತಾಂತ್ರಿಕ ವಿವಿ ಪರೀಕ್ಷಾ ವ್ಯವಸ್ಥೆ ದೇಶದ ಅನೇಕ ವಿವಿಗಳಿಗೆ ಮಾದರಿಯಾಗಿದೆ ಎಂದರು.
ಉಕ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ನಿಟ್ಟಿನಲ್ಲಿ ಕೆಎಲ್ಇ ತಾಂತ್ರಿಕ ವಿವಿ ತನ್ನದೇ ಕೊಡುಗೆಗೆ ಮುಂದಾಗಿದೆ. ನವೋದ್ಯಮ ಉತ್ತೇಜನಕ್ಕೆ ಆರಂಭಿಸಿರುವ ಇನ್‌ಕ್ಯುಬೇಷನ್ ಕೇಂದ್ರದಲ್ಲಿ 38 ಕಂಪೆನಿಗಳಿಗೆ ಅವಕಾಶ ನೀಡಲಾಗಿದ್ದು, 2 ಕಂಪೆನಿಗಳು 200 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿವೆ. 2ನೇ ಹಂತದ ನಗರಗಳಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದರು.
ರಾಜ್ಯಸಭಾ ಸದಸ್ಯ ಹಾಗೂ ಕೆಎಲ್ಇ ತಾಂತ್ರಿಕ ವಿವಿ ಕುಲಾಧಿಪತಿ ಡಾ| ಪ್ರಭಾಕರ ಕೋರೆ, ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.