Advertisement

ಪುಸ್ತಕಗಳಿಂದ ಜ್ಞಾನ, ಕಲ್ಪನಾಶಕ್ತಿ ವೃದ್ಧಿ

09:40 AM Apr 24, 2019 | Team Udayavani |

ಹುಣಸೂರು: ಪುಸ್ತಕ ವ್ಯಕ್ತಿಯ ಜ್ಞಾನ ವೃದ್ಧಿಸಲು ಹಾಗೂ ಮನೋವಿಕಾಸಕ್ಕೆ ಪೂರಕವಾಗಿದೆ ಎಂದು ನಗರಸಭೆ ಪೌರಾಯುಕ್ತೆ ವಾಣಿ ವಿ.ಆಳ್ವ ತಿಳಿಸಿದರು.

Advertisement

ನಗರದ ಗ್ರಂಥಾಲಯದಲ್ಲಿ ಆಯೋಜಿಸಿದ್ದ ವಿಶ್ವ ಪುಸ್ತಕ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪುಸ್ತಕಗಳು ನಮ್ಮ ಕಲ್ಪನಾಶಕ್ತಿಯನ್ನು ಹೆಚ್ಚಿಸಲಿವೆ.

ನಮಗೆ ಪರಿಚಯವಿಲ್ಲದ ಪ್ರಪಂಚವನ್ನು, ಅದರ ಸಂಸ್ಕೃತಿ, ಜನಜೀವನ ಪರಿಚಯಿಸಲಿವೆ. ಜೊತೆಗೆ ನಮ್ಮ ಚರಿತ್ರೆಯನ್ನು ಮುಂದಿನ ಪೀಳಿಗೆಗೂ ತಿಳಿಸಿ ಕೊಡಲಿವೆ. ನಿರಂತರ ಓದಿನಿಂದ ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು.

ಪುಸ್ತಕ ಲಭ್ಯ: ಇತ್ತೀಚಿನ ದಿನಗಳಲ್ಲಿ ಮೊಬೈಲ್‌, ವ್ಯಾಟ್ಸಾಪ್‌, ಫೇಸ್‌ಬುಕ್‌, ಟೀವಿಗಳ ವ್ಯಾಮೋಹದಿಂದ ಪುಸ್ತಕ ಓದುಗರ ಸಂಖ್ಯೆ ಕ್ಷೀಣಿಸಿದೆ. ಯುವ ಪೀಳಿಗೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಜ್ಞಾನಾರ್ಜನೆಗೆ ಉಪಯುಕ್ತವಾಗಲಿದೆ.

ಇಲ್ಲಿನ ಗ್ರಂಥಾಲಯದಲ್ಲಿ ಎಲ್ಲಾ ಬಗೆಯ ಪುಸ್ತಕಗಳು ಲಭ್ಯವಿದ್ದು, ಸದುಪಯೋಗ ಪಡೆಯಬೇಕು ಎಂದು ಕೋರಿದರು. ಗ್ರಂಥಾಲಯ ಅಧಿಕಾರಿ ಸತೀಶ್‌, ವಿಶ್ವ ಪುಸ್ತಕ ದಿನಾಚರಣೆ ಕುರಿತು ಮಾಹಿತಿ ನೀಡಿ ಈ ದಿನವನ್ನು ಕೃತಿ ಸ್ವಾಮ್ಯದಿನ, ಅಂತಾರಾಷ್ಟ್ರೀಯ ಪುಸ್ತಕದಿನವೆಂದು ಕರೆಯಲಾಗುತ್ತದೆ.

Advertisement

ಆರಂಭದಲ್ಲಿ ವೆಲೆನ್ಸಿಯಾದ ಬರಹಗಾರ ವಿಸೆಟ್‌ ಕ್ಲವೆಲ್‌ ಆಂಡೂ ಅವರ ಜನ್ಮದಿನ ಆ.7 ರಂದು ಆಚರಿಸಲಾಯಿತು. ಬಳಿಕ ಅವರು ಮರಣ ಹೊಂದಿದ ಏ.23 ರಂದು ವಿಶ್ವ ಪುಸ್ತಕದಿನವೆಂದು ನಿಗದಿಯಾಯಿತು.

ಅಲ್ಲದೇ ಏ.23 ರಂದು ವಿಲಿಯಂ ಶೇಕ್ಸ್‌ಪಿಯರ್‌ ಮರಣ ಹೊಂದಿದ ದಿನವಾಗಿದೆ. ಸಾಕಷ್ಟು ಬರಹಗಾರರ ಜನ್ಮದಿನವೂ ಇದೇ ಆಗಿದ್ದನ್ನು ಗಮನಿಸಿ, ವಿಶ್ವ ಸಂಸ್ಥೆಯು ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಘಟನೆ(ಯುನೆಸ್ಕೋ)ವತಿಯಿಂದ 1995 ಏ.23ರಂದು ಮೊದಲಬಾರಿಗೆ ಆಚರಿಸಿದ್ದಲ್ಲದೇ, ಘೋಷಿಸಿತು.

ಕಾರ್ಯಕ್ರಮದಲ್ಲಿ ನಗರಸಭೆ ಎಇಇ ಮಂಜುನಾಥ್‌, ಪರಿಸರ ಎಂಜಿನಿಯರ್‌ ರೂಪಾ, ಎಂಜಿನಿಯರ್‌ ಅನುಪಮ, ಗ್ರಂಥಾಲಯ ಸಿಬ್ಬಂದಿ ಸರಸ್ವತಿ, ಸಂದೇಶ್‌, ಹಿರಿಯ ಓದುಗ ಅರಸ್‌, ರಾಘು ಸೇರಿದಂತೆ ಅನೇಕ ಓದುಗರು ಉಪಸ್ಥಿತರಿದ್ದರು.

ಗ್ರಂಥಾಲಯ ಸದಸ್ಯತ್ವ ಪಡೆಯಿರಿ: ನಮ್ಮ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು, ಗೃಹಿಣಿಯರು, ಮಕ್ಕಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವವರಿಗೂ ಪುಸ್ತಕಗಳು, ನಿಯತಕಾಲಿಕೆಗಳು, ದಿನಪತ್ರಿಕೆಗಳು, ಸರಕಾರಿ ಗೆಜೆಟ್‌ ಸೇರಿದಂತೆ ಉಪಯುಕ್ತ ಪುಸ್ತಕಗಳು ಲಭ್ಯವಿದ್ದು, ಗ್ರಂಥಾಲಯದ ಸದಸ್ಯತ್ವ ಪಡೆಯುವ ಮೂಲಕ ಇತರರಿಗೂ ನೆರವಾಗಿರೆಂದು ಗ್ರಂಥಾಲಯ ಅಧಿಕಾರಿ ಸತೀಶ್‌ ಮನವಿ ಮಾಡಿದರು.

ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಈ ದಿನವನ್ನು ರಾಷ್ಟ್ರೀಯ ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಹಲವೆಡೆ ಶಾಲಾ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಏರ್ಪಡಿಸಿ, ಬಹುಮಾನವಾಗಿ ಉಚಿತ ಪುಸ್ತಕ ನೀಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next