Advertisement

ಅರಿತು ದೇಹದಲ್ಲಿ ಬೆರೆತ ಪ್ಲಾಸ್ಟಿಕ್‌!

10:24 PM Jun 03, 2019 | Lakshmi GovindaRaj |

ಬೆಂಗಳೂರು: ಒಂದು ಸಾವಿರ ಬಾರಿ ಪ್ಲಾಸ್ಟಿಕ್‌ ಅಂಶ ನಮ್ಮ ದೇಹ ಸೇರಿದರೆ ಕ್ಯಾನ್ಸರ್‌ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಹೇಳುತ್ತಾರೆ. ಆದರೆ, ನಮಗೆ ಅರಿವಿದ್ದೂ ಲೆಕ್ಕವಿಲ್ಲದಷ್ಟು ಪ್ಲಾಸ್ಟಿಕ್‌ ಅಂಶ ನಿತ್ಯ ನಾನಾ ರೂಪದಲ್ಲಿ ನಮ್ಮ ದೇಹ ಸೇರುತ್ತಲೇ ಇದೆ.

Advertisement

ಟೀ/ಕಾಫಿಯಿಂದ ಹಿಡಿದು ನೀರಿನ ಬಾಟಲ್‌, ಹೋಟೆಲ್, ಕೆಫೆ, ಬೇಕರಿ, ಜ್ಯೂಸ್‌ಸ್ಟಾಲ್, ದಿನಸಿ ಅಂಗಡಿ, ಹಣ್ಣು, ತರಕಾರಿ ಮಳಿಗೆ, ಮಾಂಸದ ಅಂಗಡಿ, ಪ್ಯಾಕ್ಡ್ ಫ‌ುಡ್‌, ಕೊನೆಗೆ ಅಡುಗೆ ಮನೆಯ ಸಾಮಗ್ರಿಗಳಲ್ಲೂ ಪ್ಲಾಸ್ಟಿಕ್‌ ಹಾಸುಹೊಕ್ಕಾಗಿದೆ. ಇದರಿಂದಾಗಿ ನಿತ್ಯ ಒಂದಲ್ಲ ಒಂದು ರೀತಿ ಪ್ಲಾಸ್ಟಿಕ್‌ನಲ್ಲಿನ ವಿಷಕಾರಿ ರಾಸಾಯನಿಕ ನಮ್ಮ ದೇಹ ಸೇರುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಇದು ಮಾರಕವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ.

ಪ್ಲಾಸ್ಟಿಕ್‌ ವಿಷಕಾರಿ ಎಂದು ಎಲ್ಲರಿಗೂ ಗೊತ್ತಿದೆ. ಆದರೂ, ಇಡ್ಲಿ ಮಾಡುವಲ್ಲಿ ಪ್ಲಾಸ್ಟಿಕ್‌ ಕವರ್‌ ಬಳಕೆ, ಹಳೆಯ ಪ್ಲಾಸ್ಟಿಕ್‌ ನೀರಿನ ಬಾಟಲಿಗಳ ನಿರಂತರ ಬಳಕೆ, ಫ‌ುಟ್‌ಪಾತ್‌ ಹೋಟೆಲ್‌ಗ‌ಳಿಂದ ಹಿಡಿದು ಪಂಚತಾರಾ ಹೋಟೆಲ್‌ಗ‌ಳವರೆಗೆ ಆಹಾರವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ತೆಗೆದುಕೊಂಡು ಹೋಗುವುದು, ಆಹಾರ ಪದಾರ್ಥಗಳನ್ನು ದೀರ್ಘ‌ ಕಾಲದವರೆಗೆ ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಕಟ್ಟಿಡುವುದು, ಮನೆಯಲ್ಲಿ ಪ್ಲಾಸ್ಟಿಕ್‌ ಡಬ್ಬಗಳ ಬಳಸುವುದು ಮುಂದುವರಿದಿದೆ.

ಪ್ಲಾಸ್ಟಿಕ್‌ ಎಂಜನಿಯರಿಂಗ್‌ ಹಾಗೂ ತಂತ್ರಜ್ಞಾನ ಸಂಸ್ಥೆ ಅಧ್ಯಯನವೊಂದರ ಪ್ರಕಾರ ನಿತ್ಯ ಶೇ.15ರಷ್ಟು ಕ್ಯಾಂಟೀನ್‌ ಬಳಕೆ, ಶೇ.9ರಷ್ಟು ಆಹಾರ ತಯಾರಿಕೆಯಲ್ಲಿ, ಶೇ.9ರಷ್ಟು ಬಾಟಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್‌ ಬಳಸುತ್ತಿದ್ದೇವೆ. ಪ್ಲಾಸ್ಟಿಕ್‌ ತಯಾರಿಕೆಯಲ್ಲಿ ಮುಖ್ಯವಾಗಿ ಟೈಟಾನಿಯಂ ಡೈ ಆಕ್ಸೆ„ಡ್‌, ಎಥಿಲಿನ್‌, ಫಾಸ್ಪೇಟ್‌, ಕ್ಯಾಡ್ಮಿಯಂ, ಪೊಲಿವಿನೈಲ್‌ ಕ್ಲೋರೈಡ್‌, ಆಥೋ ಟೈಕ್ರಿಸಾಯಿನ್‌, ಡಯಾಕ್ಸಿನ್‌ನಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ.

ಪ್ಲಾಸ್ಟಿಕ್‌ ಉತ್ಪನ್ನ ತಯಾರಾದ ಎರಡು ತಿಂಗಳ ನಂತರ ವಾತಾವರಣದ ಶಾಖದಿಂದ ಅದರಲ್ಲಿನ ರಾಸಾಯನಿಕಗಳು ಹೊರಹೊಮ್ಮುತ್ತವೆ. ಉತ್ಪನ್ನ ಹಳೆಯದಾದಂತೆ ರಾಸಾಯನಿಕಗಳ ಹೊರಹೊಮ್ಮುವಿಕೆ ಪ್ರಮಾಣ ಅಧಿಕವಾಗುತ್ತದೆ. ಪ್ರಮುಖವಾಗಿ ನೀರಿನ ಬಾಟಲಿ, ತಟ್ಟೆ-ಲೋಟಗಳು, ಪಾರ್ಸಲ್‌ ಕವರ್‌ಗಳು ಹಾಗೂ ಕೈ ಚೀಲಗಳಲ್ಲಿ ಈ ಅಂಶವನ್ನು ಕಾಣಬಹುದಾಗಿದೆ ಎಂದು ತಜ್ಞರು ಹೇಳುತ್ತಾರೆ.

Advertisement

ಇನ್ನು ತೆಳುವಾದ ಪ್ಲಾಸ್ಟಿಕ್‌ ಕವರ್‌ನಲ್ಲಿ ಬಿಸಿ ಆಹಾರ ಹಾಕಿದಾಗ ಡಯಾಕ್ಸಿನ್‌ ರಾಸಾಯನಿಕ ಬಿಡುಗಡೆಯಾಗುತ್ತದೆ. ಅದು ಮನುಷ್ಯನ ದೇಹ ಸೇರಿ ಆರೋಗ್ಯದ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮ ಉಂಟು ಮಾಡುತ್ತದೆ. ಪ್ಲಾಸ್ಟಿಕ್‌ನ ಚಿಕ್ಕ ಲೋಟ ಹಾಗೂ ಮಗ್‌ಗಳಲ್ಲಿ ಕಾಫಿ/ಟೀಯಂತಹ ಬಿಸಿ ದ್ರಾವಣಗಳನ್ನು ಹಾಕಿದಾಗ ಅವು ಕಾರ್ಸಿನೋಜೆನಿಕ್‌ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತವೆ. ನೀರು ತುಂಬಿದ ಪ್ಲಾಸ್ಟಿಕ್‌ ಬಾಟಲಿಯನ್ನು ಬಿಸಿಲಿಗಿಟ್ಟಾಗ ಅಲ್ಲಿನ ಶಾಖದಿಂದ ರಾಸಾಯನಿಕ ಅಂಶ ಬಿಡುಗಡೆಯಾಗಿ ಅದು ನೀರಿನಲ್ಲಿ ಸೇರುತ್ತದೆ.

ಆ ನೀರು ಕುಡಿದಾಗ ಕರಳು ಸಂಬಂಧಿ ಕಾಯಿಲೆಗಳು ಬರುತ್ತವೆ. ಆಹಾರವನ್ನು ಪ್ಲಾಸ್ಟಿಕ್‌ ಪಾತ್ರೆಯಲ್ಲಿ ಹಾಕಿ ಮೈಕ್ರೋವೇವ್‌ ಒವೆನ್‌ನಲ್ಲಿರಿಸಿ ಬಿಸಿ ಮಾಡಿದಾಗ ಅದರೊಳಗಿನ ಶಾಖದಿಂದ ಪ್ಲಾಸ್ಟಿಕ್‌ನಲ್ಲಿರುವ ಬಿಸ್ಫನೋಲ್‌ (ಬಿಪಿಎ) ರಾಸಾಯನಿಕ ಆಹಾರದ ಜತೆ ಸೇರಿಕೊಳ್ಳುತ್ತದೆ. ಪ್ಯಾಕ್‌ ಆದ ಆಹಾರದಲ್ಲಿ ಸೇರುವ ಈ ಬಿಪಿಎ ರಾಸಾಯನಿಕ, ವ್ಯಕ್ತಿಯಲ್ಲಿನ ರೋಗ ನಿರೋಧಕ ಶಕ್ತಿ ಕುಗ್ಗಿಸುತ್ತದೆ.

ಪ್ಲಾಸ್ಟಿಕ್‌ ತಂದೊಡ್ಡುವ ಕಾಯಿಲೆಗಳು: ಆಹಾರದ ಮೂಲಕ ಪ್ಲಾಸ್ಟಿಕ್‌ ದೇಹ ಸೇರುವುದರಿಂದ ಥೈರಾಯಿಡ್‌, ರಕ್ತದೊತ್ತಡ, ಮಧುಮೇಹ, ಕರುಳಿನ ಕ್ಯಾನ್ಸರ್‌, ಸಂತಾನಹೀನತೆ, ಹಾರ್ಮೋನ್‌ ಏರುಪೇರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಪ್ಲಾಸ್ಟಿಕ್‌ ಸುಟ್ಟಾಗ ಬರುವ ವಿಷಕಾರಿ ಹೊಗೆ ಸೇವಿಸಿದರೆ ಅಸ್ತಮಾ, ಶ್ವಾಸಕೋಶದ ಕ್ಯಾನ್ಸರ್‌, ಸ್ತನ ಕ್ಯಾನ್ಸರ್‌ ಹಾಗೂ ಕರುಳಿನ ಕ್ಯಾನ್ಯರ್‌ ಬರುತ್ತವೆ ಎಂದು ವೈದ್ಯರು ತಿಳಿಸುತ್ತಾರೆ.

ವಾತಾವರಣದ ಪ್ಲಾಸ್ಟಿಕ್‌ನಿಂದ ಅನಾರೋಗ್ಯ: ರಸ್ತೆ ಅಕ್ಕಪಕ್ಕ ಬಿದ್ದಿರುವ ಪ್ಲಾಸ್ಟಿಕ್‌ ತ್ಯಾಜ್ಯ ಮಳೆಗಾಲದಲ್ಲಿ ಮೋರಿ, ಗಟಾರ ಸೇರಿ ನೀರು ಹರಿಯಲು ಸಾಕಷ್ಟು ಅಡ್ಡಿಪಡಿಸುತ್ತದೆ. ತ್ಯಾಜ್ಯನೀರು ನಿಲ್ಲುವುದರಿಂದ ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂ ಘೀ, ಚಿಕೂನ್‌ಗುನ್ಯಾ, ಮಲೇರಿ ರೀತಿಯ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಕೆಲವೆಡೆ ನಗರದಲ್ಲಿ ಸಿಗುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ರಸ್ತೆ ಬದಿ ಗುಡ್ಡೆ ಹಾಕಿ ಸುಟ್ಟಾಗ ಹೊಗೆಯೊಂದಿಗೆ ಬಿಡುಗಡೆಯಾಗುವ ಕಾರ್ಬನ್‌ ಮೋನಾಕ್ಸೆ„ಡ್‌, ಡಯಾಕ್ಸಿನ್‌ನಂತಹ ವಿಷಕಾರಿ ಅನಿಲಗಳೂ ಹಲವು ಕಾಯಿಲೆ ತರುತ್ತವೆ.

ಪ್ಲಾಸ್ಟಿಕ್‌ನಿಂದ ಕೂದಲು ಉದುರುವ ಸಮಸ್ಯೆ: ದೈನಂದಿನ ಜೀವನದಲ್ಲಿ ಅತಿಯಾದ ಪ್ಲಾಸ್ಟಿಕ್‌ ಬಳಸುವುದರಿಂದ ಬಿಸಿ#ನಾಲ್‌ ಎ ರಾಸಾಯನಿಕ ರಕ್ತದಲ್ಲಿ ಸೇರುತ್ತದೆ. ಇದು ಕ್ಯಾನ್ಸರ್‌ ಜತೆಗೆ ಕೂದಲು ಉದುರುವಿಕೆ ಮತ್ತು ಚರ್ಮ ರೋಗಗಳಿಗೆ ಕಾರಣವಾಗುತ್ತದೆ. ಈ ಹಿಂದೆ ಹೇರ್‌ಲೈನ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ಈ ಕುರಿತು ಅಧ್ಯಯನ ನಡೆಸಿ, ಪ್ಲಾಸ್ಟಿಕ್‌ ಅಂಶವಿರುವ ಆಹಾರ ಸೇವಿಸುವವರಲ್ಲಿ ಕೂದಲು ಉದುರುವ ಸಮಸ್ಯೆ ಅಧಿಕವಾಗಿ ಕಂಡುಬರುತ್ತದೆ ಎಂದು ತಿಳಿಸಿದೆ.

ಬಿಡಾಡಿ ದನಗಳ ಪ್ರಾಣಕ್ಕೂ ಅಪಾಯ: ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ ಬಿಸಾಡುವ ಆಹಾರವನ್ನು ಬಿಡಾಡಿ ದನಗಳು ಕವರ್‌ ಸಮೇತ ತಿನ್ನುತ್ತವೆ. ಈ ಮೂಲಕ ದನಗಳ ಹೊಟ್ಟೆ ಸೇರಿದ ಪ್ಲಾಸ್ಟಿಕ್‌, ಅವುಗಳ ಪ್ರಾಣಕ್ಕೆ ಕುತ್ತು ತರುತ್ತದೆ. ಇತ್ತೀಚೆಗೆ ನಗರದಲ್ಲಿ ಮೃತಪಟ್ಟ ದನಗಳ ಹೊಟ್ಟೆಯಲ್ಲಿ ಕೆ.ಜಿ.ಗಟ್ಟಲೆ ಪ್ಲಾಸ್ಟಿಕ್‌ ಸಿಕ್ಕಿದೆ. ಪ್ಲಾಸ್ಟಿಕ್‌ ತಿಂದು ಜೀರ್ಣಿಸಿಕೊಳ್ಳಲಾರದೇ ಭಾರತದಲ್ಲಿ ಪ್ರತಿ ವರ್ಷ 20 ಸಾವಿರ ಪಶುಗಳು ಸಾವನ್ನಪ್ಪುತ್ತಿವೆ ಎಂದು ಪ್ಲಾಸ್ಟಿಕ್‌ ಎಂಜನಿಯರಿಂಗ್‌ ಹಾಗೂ ತಂತ್ರಜ್ಞಾನ ಸಂಸ್ಥೆಯ ಅಧ್ಯಯನದಿಂದ ತಿಳಿದುಬಂದಿದೆ.

ನೀರಿನ ಬಾಟಲಿಯಿಂದ ಹಿಡಿದು ಆಹಾರ ತಯಾರಿ, ವಿತರಣೆ, ಸೇವನೆಯ ಎಲ್ಲಾ ಹಂತಗಳಲ್ಲೂ ಪ್ಲಾಸ್ಟಿಕ್‌ ನಿಷೇಧವಾಗಬೇಕಿದೆ. ಜನ ಎಚ್ಚೆತ್ತುಕೊಂಡು ಪ್ಲಾಸ್ಟಿಕ್‌ನಿಂದ ಅಂತರ ಕಾಯ್ದುಕೊಳ್ಳದಿದ್ದರೆ ಭವಿಷ್ಯದಲ್ಲಿ ಮಾರಕ ರೋಗಗಳಿಗೆ ತುತ್ತಾಗುತ್ತಾರೆ. ಮೊದಲ ಹಂತವಾಗಿ ಮನೆಗಳ ಅಡುಗೆ ಕೋಣೆಯಲ್ಲಿ ಗ್ಲಾಸ್‌, ಹಿತ್ತಾಳೆ, ಸ್ಟೀಲ್‌, ತಾಮ್ರದ ಸಾಮಗ್ರಿ ಬಳಸಬೇಕು. ಪ್ಲಾಸ್ಟಿಕ್‌ ಕವರ್‌ನಲ್ಲಿ ಪಾರ್ಸಲ್‌ ಮಾಡುವ ಆಹಾರದಿಂದ ದೂರ ಉಳಿಯಬೇಕು.
-ಡಾ.ಸಿ.ರಾಮಚಂದ್ರ, ಕಿದ್ವಾಯಿ ಗಂಥಿ ಸಂಸ್ಥೆ ನಿರ್ದೇಶಕರು

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next