ಬೆಂಗಳೂರು: ನನ್ನ ವಿರುದ್ಧದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ನಂತರ ಅನೇಕರು ವ್ಯಕ್ತಪಡಿಸಿರುವ ಅನಿಸಿಕೆಗಳನ್ನು ಗಮನಿಸಿದರೆ ಯಾರ್ಯಾರ ಮನಸ್ಸು ಮತ್ತು ನಾಲಿಗೆ ಮೇಲೆ ಏನೇನಿದೆ ಎಂಬುದು ಈಗ ತಿಳಿಯುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ತನಿಖೆಗೆ ಅನುಮತಿ ಹಿಂಪಡೆದಿರುವ ಬೆಳವಣಿಗೆಯಿಂದ ಎಲ್ಲರ ಮನಸ್ಥಿತಿಯೂ ಅರ್ಥವಾಗುತ್ತಿದೆ. ಯಾರ್ಯಾರು ಗೆಳೆಯರು, ಅವರ ಭಾವನೆ ಏನಿದೆ ಎಂಬುದು ಈಗ ತಿಳಿಯುತ್ತಿದೆ ಎಂದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಅಲೆ: ಕರ್ನಾಟಕ ಮಾದರಿಯಂತೆ ತೆಲಂಗಾಣದಲ್ಲಿ 6 ಗ್ಯಾರಂಟಿಗಳನ್ನು ನೀಡಲಾಗಿದೆ. ದಲಿತ ಸಿಎಂ ಸೇರಿ ಕೆಸಿಆರ್ ನೇತೃತ್ವದ ಸರ್ಕಾರ 10 ವರ್ಷಗಳಲ್ಲಿ ತಾನು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ತೆಲಂಗಾಣ ರಾಜ್ಯ ರಚನೆಗೆ ಸೋನಿಯಾ ಗಾಂಧಿ ಅವರೇ ಕಾರಣ.
ತೆಲಂಗಾಣದ ಜನರಿಗೆ ಸೋನಿಯಾಗಾಂಧಿ ಅವರ ಋಣ ತೀರಿಸಬೇಕು ಎನ್ನುವ ಭಾವನೆ ಬಂದಿದೆ. ಜನರಿಗೆ ತೋಟದ ಮನೆಯಲ್ಲಿ ಕುಳಿತು ಕೆಲಸ ಮಾಡುವವರು ಬೇಕಿಲ್ಲ. ಜನರ ಮಧ್ಯೆ ಕೆಲಸ ಮಾಡುವ ಸರ್ಕಾರ ಬೇಕು ಎನ್ನುವುದು ಅರ್ಥವಾಗಿದೆ. ಜನ ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.
ಬೋಗಸ್ ಜನತಾ ದರ್ಶನ, ಸರ್ಕಾರ ಈಗ ಎಚ್ಚರವಾಗಿದೆ ಎಂಬ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪವನ್ನು ಉಲ್ಲೇಖೀಸಿದ ಅವರು ಹೊಸದಾಗಿ ಪ್ರತಿಪಕ್ಷದ ನಾಯಕರಾಗಿದ್ದಾರೆ. ಹೊಸದರಲ್ಲಿ ಜೋರಾಗಿ ಬಟ್ಟೆ ಒಗೆಯಲಿ. ನಾವು ಎಲ್ಲರ ಮನಸ್ಥಿತಿ ಅರಿಯುತ್ತಿದ್ದೇವೆ ಎಂದು ಛೇಡಿಸಿದರು.
ದೆಹಲಿ ಭೇಟಿ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ನನ್ನ ವಕೀಲರಾಗಿದ್ದ ಸಿದ್ದಾರ್ಥ ಅವರ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದು, ಅದನ್ನು ಮುಗಿಸಿ ಕರ್ನಾಟಕಕ್ಕೆ ಮರಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.