Advertisement

ಸುಭದ್ರ ಸರ್ಕಾರ ನಡೆಸೋದು ಗೊತ್ತು; ಸಿಎಂ

06:30 AM Sep 30, 2018 | Team Udayavani |

ಬೆಂಗಳೂರು: “ಸುಭದ್ರವಾಗಿ ಸರ್ಕಾರ ನಡೆಸುವುದು ಹೇಗೆ ಎಂಬುದು ನಮಗೂ ಗೊತ್ತು. ಈ ಸರ್ಕಾರ ತನ್ನ ಐದು ವರ್ಷ ಅವಧಿ ಪೂರ್ಣಗೊಳಿಸಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡ ಎರಡು ದಿನಗಳ ಉದ್ಯೋಗ ಮೇಳಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ 24 ಗಂಟೆಯಲ್ಲಿ ಸರ್ಕಾರ ಬೀಳಲಿದೆ, ಸರ್ಕಾರ ಆಯಸ್ಸು ವಾರ ಅಥವಾ ಒಂದು ತಿಂಗಳು ಎಂದೆಲ್ಲಾ ಕೆಲವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಸರ್ಕಾರ ಐದು ವರ್ಷ ಸುಭದ್ರವಾಗಿ ಇರುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಅಥವಾ ಅನುಮಾನ ಇಲ್ಲ ಎಂದು ಹೇಳಿದರು.

“ಮೈತ್ರಿ ಸರ್ಕಾರದಲ್ಲಿ ಹಿರಿಯರಿದ್ದಾರೆ. ಅವರೆಲ್ಲರೂ ಸಲಹೆ-ಮಾರ್ಗದರ್ಶನ ನೀಡುತ್ತಾರೆ. ಸುಭದ್ರ ಸರ್ಕಾರ ನಡೆಸುವುದು ಹೇಗೆ ಅಂತ ನಮಗೂ ಗೊತ್ತು. ಈ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಪ್ರತಿ ಕುಟುಂಬ ನೆಮ್ಮದಿಯಿಂದ ಜೀವನ ನಡೆಸುವಂತಹ ವಾತಾವರಣ ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ’ ಎಂದು ತಿಳಿಸಿದರು.

ಯೋಜನೆಗಳಿಗೆ ಕತ್ತರಿ ಹಾಕಲ್ಲ; ಸಿಎಂ
ರೈತರ ಸಾಲ ಮನ್ನಾಕ್ಕೂ ರಾಜ್ಯದ ಅಭಿವೃದ್ಧಿಗೂ ಯಾವುದೇ ಸಂಬಂಧ ಇಲ್ಲ. ಸಾಲ ಮನ್ನಾ ಹಿನ್ನೆಲೆಯಲ್ಲಿ ಯಾವುದೇ ಯೋಜನೆಗಳು ಕಡಿತಗೊಳಿಸಿಲ್ಲ ಮತ್ತು ಕಡಿತಗೊಳಿಸುವುದೂ ಇಲ್ಲ. ಈಗಾಗಲೇ ಅನೇಕ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಪ್ರತಿ ಲೀ.ಗೆ 2 ರೂ.ವರೆಗೆ ಸೆಸ್‌ ಕಡಿಮೆ ಮಾಡಿದ್ದರಿಂದ ದೇಶದಲ್ಲೇ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದೊರೆಯುತ್ತಿದೆ. ಆದರೆ, ಇದರ ಬಗ್ಗೆ ನಿರೀಕ್ಷಿತ ಪ್ರಚಾರ ಸಿಗಲೇ ಇಲ್ಲ. ಕೇಂದ್ರದ ಮಹಾನ್‌ ವ್ಯಕ್ತಿಗಳಿಗೆ ಸಾಕಷ್ಟು ಪ್ರಚಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಪ್ರತಿಪಕ್ಷ ಬಿಜೆಪಿ ತನ್ನ ರಾಜಕೀಯ ಧರ್ಮ ಪಾಲಿಸಬೇಕು. ಅದೇ ರೀತಿ, ಮೈತ್ರಿ ಸರ್ಕಾರ ಕೂಡ ತನ್ನ ರಾಜಧರ್ಮ ಪಾಲಿಸುತ್ತದೆ. ಆಗ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next