Advertisement

ವಿಮೋಚನಾ ಹೋರಾಟದ ಸತ್ಯ ಅರಿವಿರಲಿ

04:20 PM Sep 06, 2022 | Team Udayavani |

ಕಲಬುರಗಿ: ಇಂದಿನ ದಿನಗಳಲ್ಲಿ ನಮ್ಮ ಯುವ ಜನಾಂಗಕ್ಕೆ ಇತಿಹಾಸದ ತಿಳಿವು ಅಗತ್ಯವಾಗಿ ಬೇಕು. ವಿಮೋಚನಾ ದಿನಗಳಲ್ಲಿ ನಡೆದಿರುವ ಹೋರಾಟದ ಕುರಿತು ಸತ್ಯವನ್ನು ಅರಿಯಬೇಕು. ಆದರಿಂದ ಮುಂದಿನ ನಡೆ ಸ್ಪಷ್ಟವಾಗುತ್ತದೆ ಎಂದು ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ್‌ ಹೇಳಿದರು.

Advertisement

ನಗರದ ಸರಕಾರಿ ಕನ್ಯಾ ಪ.ಪೂ. ಕಾಲೇಜಿನಲ್ಲಿ ಸೋಮವಾರ ನಡೆದ ಜಿಲ್ಲಾಡಳಿತ, ಪ.ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಮೋಚನಾ ಹೋರಾಟದ ಚಿಂತನ- ಮಂಥನ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಳಿಕ ಉಪನ್ಯಾಸ ನೀಡಿದ ಪತ್ರಕರ್ತ ಹಾಗೂ ಲೇಖಕ ಮಹಿಪಾಲರೆಡ್ಡಿ ಮುನ್ನೂರ್‌, ಅವಿಭಜಿತ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಭಾರತದಲ್ಲಿ ಬಹುತೇಕ ಚಿಕ್ಕ ಚಿಕ್ಕ ರಾಜ್ಯಗಳು, ಸಂಸ್ಥಾನಗಳಿದ್ದವು. ಬ್ರಿಟಿಷ ಸರ್ಕಾರ ಈ ಎಲ್ಲಾ ರಾಜ್ಯ, ಸಂಸ್ಥಾನಗಳಿಗೆ ಹೊಸದಾಗಿ ರಚಿಸಲ್ಪಡುವ ಭಾರತ ಅಥವಾ ಪಾಕಿಸ್ತಾನದ ಜೊತೆ ವಿಲೀನವಾಗಲು ಅಥವಾ ಸ್ವತಂತ್ರವಾಗಿ ಇರಲು ಆಯ್ಕೆಗಳನ್ನು ಕೊಟ್ಟಿತ್ತು ಎಂದು ತಿಳಿಸಿದರು.

ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳು ಅವತ್ತಿನ ದಿನದಿಂದ ಭಾರತಕ್ಕೆ, ಪಾಕಿಸ್ತಾನಕ್ಕೆ ಸೇರಿಸಲ್ಪಟ್ಟವು. ಕೆಲವು ಸಂಸ್ಥಾನಗಳು ಮೊದಮೊದಲು ಭಾರತದಲ್ಲಿ ವಿಲೀನವಾಗಲು ಒಪ್ಪದಿದ್ದರೂ, ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ರಾಜಕೀಯ ಮುತ್ಸದ್ಧಿತನ ಮತ್ತು ಚಾಣಾಕ್ಷತನದಿಂದ ನಂತರ ಒಪ್ಪಿದರು. ಅನೇಕ ರಾಜ್ಯಗಳೊಂದಿಗೆ ಅಂದಿನ ಹೈದರಾಬಾದ್‌ ಕರ್ನಾಟಕ ಪ್ರದೇಶಗಳನ್ನೊಳಗೊಂಡ ರಾಜ್ಯವು ಕೂಡ ಸೇರಲು ಒಪ್ಪಲಿಲ್ಲ. ಹೈದರಾಬಾದ್‌ ರಾಜ್ಯ ಬಹುಸಂಖ್ಯಾತ ಹಿಂದೂಗಳನ್ನು ಹೊಂದಿದ್ದರೂ, ಮುಸ್ಲಿಂ ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಎಂದರು.

ತುಂಬಾ ಜನ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ, ಅದರಲ್ಲಿ ಸರದಾರ ಶರಣಗೌಡ ಇನಾಮದಾರ್‌, ಸ್ವಾಮಿ ರಾಮನಂದ ತೀರ್ಥರು, ಚಂದ್ರಶೇಖರ ಪಾಟೀಲ್‌, ನೀಲಕಂಠರಾವ್‌ ಪಾಟೀಲ್‌ ಪ್ರಮುಖರು. ಹಲವಾರು ಸಾಮಾನ್ಯ ಜನರು ತಮ್ಮ ಪ್ರಾಣವನ್ನು ನೀಡಿದ್ದಾರೆ. ರಜಾಕಾರರ ಕಿರುಕುಳ ತಾಳದೆ ಕೆಲವರು ಊರು ತ್ಯಜಿಸಿದರು. ಎಲ್ಲ ಮಾತುಕತೆಗಳು, ರಾಜತಾಂತ್ರಿಕ ಒತ್ತಡ, ಷರತ್ತುಗಳಿಗೆ ನಿಜಾಮ ಒಪ್ಪದಿದ್ದಾಗ ಆಗಿನ ಗೃಹಮಂತ್ರಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಭಾರತೀಯ ಸೇನೆಗೆ ಆದೇಶ ಕೊಟ್ಟು ಪೊಲೀಸ್‌ ಕಾರ್ಯಾಚರಣೆ ಮೂಲಕ ಹೈದರಾಬಾದ್‌ ಅನ್ನು ಭಾರತದಲ್ಲಿ 17ನೇ ಸಪ್ಟೆಂಬರ್‌ 1948 ರಂದು ಹೈದರಾಬಾದಿನ ನಿಜಾಮ ಶರಣಾದ ನಂತರ ಭಾರತದೊಂದಿಗೆ ವಿಲೀನ ಮಾಡಿಲಾಯಿತು ಎಂದು ಉಪನ್ಯಾಸದಲ್ಲಿ ವಿವರಿಸಿದರು.

Advertisement

ಪ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್‌ ಯಡ್ರಾಮಿ, ವೇದಮೂರ್ತಿ, ಒಕ್ಕೂಟದ ಕಾನೂನು ಸಲಹೆಗಾರರಾದ ಗುರುರಾಜ ತಿಳಗುಳ, ಗೌರವಾಧ್ಯಕ್ಷ ಜಗನ್ನಾಥ ಸೂರ್ಯವಂಶಿ, ಅತಿಥಿಯಾಗಿ ಸಚಿನ್‌ ಫರತಾಬಾದ್‌ ಭಾಗವಹಿಸಿದ್ದರು. ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಯಶ್ವಂತ ಸೂರ್ಯವಂಶಿ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಮಂಜುನಾಥ ನಾಲವಾರಕರ್‌ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಜಗದೇವಿ ನಿರೂಪಿಸಿದರು. ಶಿಕ್ಷಕಿ ಜಯಶ್ರೀ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next