Advertisement

Birth Anniversary: ಇವರು ಸ್ವತಂತ್ರ ಭಾರತದ ಮೊದಲ ರಕ್ಷಣಾ ಸಚಿವ…ಯಾರೀವರು?

02:51 PM Jul 10, 2023 | Team Udayavani |

1902 ಜುಲೈ 11ರಂದು ಜನಿಸಿದ್ದ ಸರ್ದಾರ್‌ ಬಲದೇವ್‌ ಸಿಂಗ್‌ ಸ್ವತಂತ್ರ ಭಾರತದ ಮೊದಲ ರಕ್ಷಣಾ ಸಚಿವರಾಗಿದ್ದರು. ಬ್ರಿಟಿಷ್‌ ಆಡಳಿತಾವಧಿಯ ಪಂಜಾಬ್‌ ನ ರೂಪಾರ್‌ ಜಿಲ್ಲೆಯಲ್ಲಿ ಜನಿಸಿದ್ದ ಸಿಂಗ್‌ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Advertisement

ಇದನ್ನೂ ಓದಿ:Light House ಪಕ್ಕದಲ್ಲಿ ಸಮುದ್ರಕ್ಕೆ ಇಳಿಯುವುದು ಹಾಗೂ ಬಂಡೆ ಮೇಲಿನ ಪ್ರವೇಶಕ್ಕೆ ನಿರ್ಬಂಧ

ಭಾರತದ ಸ್ವಾತಂತ್ರ್ಯ ಮತ್ತು ವಿಭಜನೆಗೆ ಕಾರಣವಾದ ಸಂದರ್ಭದ ಮಾತುಕತೆಯಲ್ಲಿ ಬಲದೇವ್‌ ಸಿಂಗ್‌ ಅವರು ಸಿಖ್‌ ಸಮುದಾಯವನ್ನು ಪ್ರತಿನಿಧಿಸಿದ್ದರು. ಜೇಮ್‌ ಶೆಡ್‌ ಪುರದ ಪ್ರತಿಷ್ಠಿತ ಸ್ಟೀಲ್‌ ಉದ್ಯಮಿ ಇಂದರ್‌ ಸಿಂಗ್‌ ಪುತ್ರ ಬಲದೇವ್‌ ಸಿಂಗ್.‌ ಅಮೃತ್‌ ಸರದ ಖಾಲ್ಸಾ ಕಾಲೇಜಿನಲ್ಲಿ ಪದವಿ ಪಡೆದ ನಂತರ ಸರ್ದಾರ್‌ ಬಲದೇವ್‌ ಸಿಂಗ್‌ ತಂದೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. 1930ರಲ್ಲಿ ಪಂಜಾಬ್‌ ಗೆ ಮರಳಿದ ಬಲದೇವ್‌ ರಾಜಕೀಯಕ್ಕೆ ಸೇರ್ಪಡೆಗೊಂಡಿದ್ದರು.

ಬಲದೇವ್‌ ಸಿಂಗ್‌ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಭಾರತದ ಮೊದಲ ರಕ್ಷಣಾ ಸಚಿವರಾಗಿ, ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ.

Advertisement

ಸರ್ದಾರ್‌ ಬಲದೇವ್‌ ಸಿಂಗ್‌ ರಾಜಕೀಯ ಪಯಣ:

ಬಲದೇವ್‌ ಸಿಂಗ್‌ ಅವರು 1937ರಲ್ಲಿ ಪ್ಯಾಂಥಿಕ್‌ ಪಕ್ಷದ ಅಭ್ಯರ್ಥಿಯಾಗಿ ಪಂಜಾಬ್‌ ಪ್ರಾಂತೀಯ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಬಲದೇವ್‌ ಅವರು ಸಿಖ್‌ ಧಾರ್ಮಿಕ ಮುಖಂಡ ಮಾಸ್ಟರ್‌ ತಾರಾ ಸಿಂಗ್‌ ಮತ್ತು ಶಿರೋಮಣಿ ಅಕಾಲಿ ದಳದ ಜೊತೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು.

ಹೀಗೆ ಜನಪ್ರಿಯ ರಾಜಕೀಯ ಪಯಣ ಆರಂಭಿಸಿದ್ದ ಸರ್ದಾರ್‌ ಬಲದೇವ್‌ ಸಿಂಗ್‌ ಅವರು 1942ರಿಂದ 1946ರವರೆಗೆ ರಾಜ್ಯದ ಅಭಿವೃದ್ಧಿ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯದ ಬಳಿಕ ದೇಶ ಇಬ್ಭಾಗವಾಗುವ ಸಂದರ್ಭದಲ್ಲಿ ಆರಂಭಿಕವಾಗಿ ಬಲದೇವ್‌ ಅವರು ಇಬ್ಭಾಗವನ್ನು ಬಲವಾಗಿ ವಿರೋಧಿಸಿದ್ದರು. ಒಂದು ದೇಶ ಇಬ್ಭಾಗವಾಗುವುದೇ ಅನಿವಾರ್ಯವಾದರೆ, ಆಗ ಸಿಖ್‌ ಸಮುದಾಯಕ್ಕೆ ರಕ್ಷಣೆ ನೀಡಬೇಕು ಹಾಗೂ ಪಂಜಾಬ್‌ ನ ಮುಸ್ಲಿಂ ಬಾಹುಳ್ಯದ ಪ್ರಾಂತ್ಯಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದರು.

ದೇಶ ವಿಭಜನೆಯ ನಂತರದ ಪರಿಣಾಮ ಭೀಕರವಾಗಿತ್ತು. ಈ ಸಂದರ್ಭದಲ್ಲಿ ಗೃಹಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರೊಂದಿಗೆ ಬಲದೇವ್‌ ಸಿಂಗ್‌ ಅವರು ಪರಿಹಾರ ಮತ್ತು ಸೇನಾ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದರು.

1947ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯವನ್ನು ಬಲದೇವ್‌ ಸಿಂಗ್‌ ಸಮರ್ಥವಾಗಿ ಮುನ್ನಡೆಸಿದ್ದರು. ಅಷ್ಟೇ ಅಲ್ಲ ಜುನಾಗಢ್‌ ಮತ್ತು ಹೈದರಾಬಾದ್‌ ಅನ್ನು ಭಾರತಕ್ಕೆ ಸೇರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

1948ರ ಸೆಪ್ಟೆಂಬರ್‌ ನಲ್ಲಿ ಗೃಹ ಸಚಿವ ವಲ್ಲಭಭಾಯಿ ಪಟೇಲ್‌ ಅವರ ಸೂಚನೆಯಂತೆ ಬಲದೇವ್‌ ಸಿಂಗ್‌ ಅವರು ಹೈದರಬಾದ್‌ ನಿಜಾಮ್‌ ವಿರುದ್ಧದ ಆಪರೇಶನ್‌ ಪೋಲೊ ಕಾರ್ಯಾಚರಣೆಗೆ ಯೋಜನೆ ರೂಪಿಸಿದ್ದರು. ಅಷ್ಟೇ ಅಲ್ಲ ಭಾರತೀಯ ರಾಜಕೀಯ ಏಕೀಕರಣಗಳ ಸಮಸ್ಯೆ ಮತ್ತು ಕಾಶ್ಮೀರ ಸಂಘರ್ಷದ ನಿರ್ವಹಣೆ ಕುರಿತು ಬಲದೇವ್‌ ಅವರು ಪಟೇಲ್‌ ಅವರಿಗೆ ನಿಕಟ ಸಲಹೆಗಾರರಾಗಿದ್ದರು. ಆದರೆ ರಾಜಕೀಯ ದೃಢನಿಷ್ಠೆಯಲ್ಲಿ ನೆಹರು ವಿಶ್ವಾಸ ಕಳೆದುಕೊಂಡ ಪರಿಣಾಮ ಬಲದೇವ್‌ ಸಿಂಗ್‌ ಅವರನ್ನು ರಕ್ಷಣಾ ಸಚಿವ ಹುದ್ದೆಯಿಂದ ತೆಗೆದುಹಾಕಲಾಗಿತ್ತು.!

ಭಾರತ ಸ್ವತಂತ್ರಗೊಂಡ ನಂತರ 1952ರಲ್ಲಿ ನಡೆದ ಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಬಲದೇವ್‌ ಸಿಂಗ್‌ ಸಂಸತ್‌(Indian National Congress) ಸದಸ್ಯರಾಗಿ ಆಯ್ಕೆಗೊಂಡಿದ್ದರು. 1957ರಲ್ಲಿ ನಡೆದ ಚುನಾವಣೆಯಲ್ಲಿಯೂ ಸಿಂಗ್‌ ಸಂಸತ್ತಿಗೆ ಪುನರಾಯ್ಕೆಗೊಂಡಿದ್ದರು.

ಭಾರತೀಯ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ಸರ್ದಾರ್‌ ಬಲದೇವ್‌ ಸಿಂಗ್‌ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ 1961ರಲ್ಲಿ ಇಹಲೋಕ ತ್ಯಜಿಸಿದ್ದರು. ಬಲದೇವ್‌ ಅವರು ಹರ್ ದೇವ್‌ ಕೌರ್‌ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರರು.

Advertisement

Udayavani is now on Telegram. Click here to join our channel and stay updated with the latest news.

Next