Advertisement

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

07:33 PM Apr 30, 2024 | Team Udayavani |

ಮೊಣಗಂಟು ನೋವು ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ವೈಕಲ್ಯ ಕಾರಣಗಳಲ್ಲಿ ಒಂದಾಗಿದೆ. ಇದರಿಂದ ಬಳಲುತ್ತಿರುವ ಸಣ್ಣ ವಯಸ್ಸಿನವರು ಅಥವಾ ವೃದ್ಧರು ಪ್ರತೀ ಕುಟುಂಬದಲ್ಲಿಯೂ ಇರಬಹುದಾಗಿದೆ. ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಜ್ಞಾನವನ್ನು ಪಡೆಯಲು ಬಯಸುವವರಿಗೆ ಇಂಟರ್‌ನೆಟ್‌ ಅಪಾರವಾದ ಉಚಿತ ಮಾಹಿತಿ ಕಣಜವನ್ನು ಹೊಂದಿದೆ.

Advertisement

ಸಾಮಾಜಿಕ ಜಾಲತಾಣಗಳು ಈಗ ಜಾಹೀರಾತು ಮಾಧ್ಯಮವಾಗಿಯೂ ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ವಿದ್ಯಾಭ್ಯಾಸ ಇಲ್ಲದವರಿಗೂ ಈಗ ವಿವಿಧ ಚಿಕಿತ್ಸೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯ ಸಾಗರವೇ ಹರಿದುಬರುತ್ತಿದೆ. ಇಷ್ಟೆಲ್ಲ ಮಾಹಿತಿ ಲಭ್ಯವಿದ್ದರೂ ಮಧುಮೇಹ, ಹೃದ್ರೋಗಗಳು ಮತ್ತು ಇತರ ಅನಾರೋಗ್ಯಗಳು ತೀವ್ರ ತರಹದ ಹೆಚ್ಚಳ ಕಾಣುತ್ತಿರುವುದು ಎಚ್ಚರಿಕೆಯ ಕರೆಘಂಟೆಯಾಗಿದೆ.

ಆರೋಗ್ಯಯುತ ಸಂಧಿಯು ಕಾರ್ಟಿಲೇಜ್‌ ಎಂಬ ಪದರದಿಂದ ಆವೃತವಾದ ಎಲುಬುಗಳ ಜೋಡಣೆಯಾಗಿರುತ್ತದೆ. ಈ ಕಾರ್ಟಿಲೇಜ್‌ ಎಲುಬುಗಳ ಸಲೀಸಾದ ಚಲನೆಗೆ ಅನುವು ಮಾಡಿಕೊಡುತ್ತದೆ. ಈ ಕಾರ್ಟಿಲೇಜ್‌ ಕ್ಷಯಿಸಿದರೆ ಅಥವಾ ಅದಕ್ಕೆ ಹಾನಿಯಾದರೆ ಆರ್ಥೈಟಿಸ್‌ ಉಂಟಾಗುತ್ತದೆ.

ಆದರೆ ಮೊಣಗಂಟು ನೋವು ಕಾರ್ಟಿಲೇಜ್‌ ನಷ್ಟದಿಂದ ಎಲುಬುಗಳ ನಡುವೆ ಉಂಟಾಗುವ ಘರ್ಷಣೆಯಿಂದ ಮಾತ್ರವಲ್ಲದೆ ಇತರ ಕಾರಣಗಳಿಂದಲೂ ತಲೆದೋರಬಹುದಾಗಿದೆ. ಸ್ನಾಯುಗಳ ನೋವು, ಗಾಯಗಳು, ಅಂಗಾಂಶಗಳ ಉರಿಯೂತ, ನರಸಂಬಂಧಿ ಸಮಸ್ಯೆಗಳು ಇವುಗಳ ಪೈಕಿ ಪ್ರಧಾನ ಕಾರಣಗಳು.

ಆದ್ದರಿಂದ ಕೂಲಂಕಷ ವಿಶ್ಲೇಷಣೆ, ತಪಾಸಣೆಯಿಂದ ಮಾತ್ರ ಸರಿಯಾದ ಚಿಕಿತ್ಸೆಯನ್ನು ಒದಗಿಸುವುದು ಸಾಧ್ಯ. ಕಾರಣವಾಗುವ ಪ್ರತೀ ಅಂಶಕ್ಕೂ ನಿರ್ದಿಷ್ಟವಾದ ಪರಿಹಾರವೊಂದು ಇದ್ದೇ ಇರುತ್ತದೆ. ಆದ್ದರಿಂದಲೇ ಮೊಣಗಂಟು ನೋವಿನ ಸರಿಯಾದ ವಿಶ್ಲೇಷಣೆಯು ಗುಣಪಡಿಸುವುದಕ್ಕೆ ಕೀಲಿಕೈಯಾಗಿರುತ್ತದೆ.

Advertisement

ಭಾರತದಲ್ಲಿ ಸಾಮಾನ್ಯವಾಗಿ ತಜ್ಞ ವೈದ್ಯರನ್ನು ಹುಡುಕುವುದಕ್ಕೆ ಮುಂದಾದರೆ ಆರ್ಥೊಸ್ಕೊಪಿ/ ಸ್ಪೋರ್ಟ್ಸ್ ಇಂಜುರಿ/ ಜಾಯಿಂಟ್‌ ರಿಪ್ಲೇಸ್‌ ಮೆಂಟ್‌/ ಪೈನ್‌ ಸ್ಪೆಶಲಿಸ್ಟ್‌ ಸಿಗುತ್ತಾರೆ ಅಥವಾ ಹೊಸ ಸಂಶೋಧನೆಯಿಂದ ಯಶಸ್ಸು ಸಿಕ್ಕಿದೆ ಎಂದು ಹೇಳಿಕೊಳ್ಳುವ ಅಥವಾ ಉಪವೈದ್ಯಕೀಯ ಉತ್ಪನ್ನಗಳ ಜಾಹೀರಾತುಗಳು ಕಣ್ಣಿಗೆ ಬೀಳುತ್ತವೆ.

ರೋಗಿಗಳು ಸಾಮಾನ್ಯವಾಗಿ ಅಡ್ಡಪರಿಣಾಮಗಳು ಇಲ್ಲ ಎಂದು ಹೇಳಿಕೊಳ್ಳುವ ಹೊಸ ಉತ್ಪನ್ನಗಳ ಜಾಹೀರಾತುಗಳಿಗೆ ಬಲಿಬೀಳುತ್ತಾರೆ, ಆದರೆ ಪ್ರಯೋಜನ ಹೊಂದುವುದಿಲ್ಲ. ಇಷ್ಟಲ್ಲದೆ ವೈದ್ಯರಿಂದ ವೈದ್ಯರಲ್ಲಿಗೆ ಸುತ್ತಾಡಿ ಎಕ್ಸ್‌ರೇ, ಎಂಆರ್‌ಐಯಂತಹ ಪರೀಕ್ಷೆಗಳನ್ನು ಪದೇಪದೆ ಮಾಡಿಸಿಕೊಂಡು ಜೇಬನ್ನೂ ಕರಗಿಸಿಕೊಳ್ಳುತ್ತಾರೆ. ನಮ್ಮ ಆರೋಗ್ಯ ಸೇವೆ ಮತ್ತು ಮಾಹಿತಿ ವ್ಯವಸ್ಥೆಗಳಲ್ಲಿ ಅನಾರೋಗ್ಯವನ್ನು ಸರಿಯಾದ ತಜ್ಞರ ಜತೆಗೆ ಹೊಂದಿಸಿಕೊಡುವ ತುರ್ತು ಅಗತ್ಯ ಇದೆ.

ಆದ್ದರಿಂದ ಸಮಸ್ಯೆಗೆ ಸಮರ್ಪಕವಾದ ಪರಿಹಾರ ಪ್ರಯತ್ನ ಎಂದರೆ ಸಮಗ್ರ ಆರೈಕೆಗಾಗಿ ಸಾಮೂಹಿಕ ಪ್ರಯತ್ನ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸುವುದು ಆಗಿದೆ. ರೋಗಿಯ ವಿವರಣೆಯನ್ನು ತಾಳ್ಮೆಯಿಂದ ಆಲಿಸುವ, ಕೂಲಂಕಷವಾಗಿ ಪರೀಕ್ಷಿಸುವ ಮತ್ತು ಅಗತ್ಯವಾದ ಪರೀಕ್ಷೆಗಳನ್ನಷ್ಟೇ ಶಿಫಾರಸು ಮಾಡುವ ತಜ್ಞ ವೈದ್ಯರ ಅಗತ್ಯ ಇಂದು ಇದೆ. ಪರೀಕ್ಷೆಗಳು ಅಗತ್ಯವಾಗಿರುವುದು ಸಮಸ್ಯೆಯನ್ನು ಹುಡುಕುವುದಕ್ಕಾಗಿ ಅಲ್ಲ; ಬದಲಾಗಿ ಉಂಟಾಗಿರುವ ಸಂದೇಹವನ್ನು ದೃಢಪಡಿಸಿಕೊಳ್ಳುವುದಕ್ಕಾಗಿ ಅಥವಾ ಊಹೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ.

ಚಿಕಿತ್ಸೆಯ ಪ್ರತೀ ಆಯಾಮವನ್ನು ಸಮರ್ಪಕವಾದ ತಜ್ಞರು ನಿರ್ವಹಿಸುವ ತಂಡವನ್ನು ವೈದ್ಯರು ಹೊಂದಿರಬೇಕಾಗುತ್ತದೆ. ಮೊಣಗಂಟಿನ ವಿಷಯವಾಗಿ ಹೇಳುವುದಾದರೆ, ನಮ್ಮ ವಂಶವಾಹಿಗಳ ಕಾರಣದಿಂದ ನಮ್ಮಲ್ಲಿ ಅನೇಕರಿಗೆ ಎಲುಬುಗಳ ಆಕಾರಕ್ಕೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮವಾದ ಅಸಹಜತೆಗಳಿರುತ್ತವೆ.

ಇವುಗಳು ಕಳಪೆ ಜೀವನ ಶೈಲಿ ಮತ್ತು ದೇಹಭಂಗಿಗಳ ಜತೆಗೆ ಸಂಯೋಜನೆಗೊಂಡು ನಮ್ಮ ಯುವಜನರು ಕೂಡ ಮೊಣಗಂಟು ರೋಗ ಲಕ್ಷಣಗಳನ್ನು ಅನುಭವಿಸುವಂತಾಗಿದೆ. ಈ ಅಂಶಗಳ ಬಗ್ಗೆ ತರಬೇತಾದ ಸಿಬಂದಿಯಿಂದ ರೋಗಿಗಳಿಗೆ ಆಪ್ತಸಮಾಲೋಚನೆ, ಶಿಕ್ಷಣ, ಮಾಹಿತಿ ಒದಗಿಸಬೇಕಾಗಿರುತ್ತದೆ. ಸರಿಯಾದ ಮತ್ತು ಆವಶ್ಯಕವಾದ ಸಂದರ್ಭದಲ್ಲಿ ಮಾತ್ರ ಶಸ್ತ್ರಚಿಕಿತ್ಸೆಯನ್ನು ಮುಂದಿಡಬೇಕಿದೆ. ಇದರ ಬದಲಾಗಿ ಒಂದು ಆಯ್ಕೆಯಾಗಿ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಿದರೆ ಅದರಿಂದ ಭಯ ಮೂಡಿ ಗಾಯವನ್ನು ನಿರ್ಲಕ್ಷಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಸರಳವಾದ ಕೀ ಹೋಲ್‌ ಶಸ್ತ್ರಚಿಕಿತ್ಸೆ ಅಥವಾ ಸಂಕೀರ್ಣವಾದ ಸಂಧಿ ಬದಲಾವಣೆಯ ಶಸ್ತ್ರಚಿಕಿತ್ಸೆಯೇ ಆಗಿರಲಿ – ಯಾರಾದರೂ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದರೆ, ಎಷ್ಟು ಸಾಧ್ಯವೋ ಅಷ್ಟು ಬೇಗನೆ ಗುಣ ಹೊಂದುವುದು ಸಾಧ್ಯವಾಗುವಂತೆ ಅದನ್ನು ಜಾಗತಿಕ ಗುಣಮಟ್ಟ ಮತ್ತು ದರ್ಜೆಯಲ್ಲಿ ನಡೆಸಬೇಕಿದೆ. ಪುನರ್ವಸತಿ ತಜ್ಞ ವೈದ್ಯರು ಕೂಡ ಚಿಕಿತ್ಸಾ ತಂಡದ ಅವಿಭಾಜ್ಯ ಅಂಗವಾಗಿರುತ್ತಾರೆ; ಇದರಿಂದ ಶಸ್ತ್ರಚಿಕಿತ್ಸೆಗೆ ಶಿಫಾರಸುಗೊಂಡಿರುವ ರೋಗಿ ಉತ್ತಮವಾದ ಚಿಕಿತ್ಸೆಯನ್ನು ಪಡೆದ ಬಳಿಕ ಕ್ರೀಡೆ ಅಥವಾ ಗುಣಮಟ್ಟದ ಜೀವನ ಚಟುವಟಿಕೆಗಳಿಗೆ ಆದಷ್ಟು ಬೇಗನೆ ಮರಳುವುದು ಸಾಧ್ಯವಾಗುತ್ತದೆ.

ರೋಗಿಯ ಮೊಣಗಂಟು ನೋವಿನ ಕಾರಣವು ದೇಹದ ಇತರ ಭಾಗದಲ್ಲಿ/ ಇತರ ಕಾರಣದಿಂದ ಉಂಟಾಗಿದ್ದ ಸಂದರ್ಭದಲ್ಲಿ ತಪಾಸಣೆ ಮಾಡಿಸಿಕೊಳ್ಳುವುದಕ್ಕಾಗಿ ಸಮಗ್ರವಾದ ಮೊಣಗಂಟು ಅಥವಾ ಕೆಳಕಾಲಿನ ಆರೈಕೆ ಕೇಂದ್ರವು ಸಮರ್ಪಕವಾದ ಇತರ ತಜ್ಞ ವೈದ್ಯರ ಸುಲಭ ಲಭ್ಯತೆಯನ್ನೂ ಹೊಂದಿರಬೇಕಾಗುತ್ತದೆ. ಈ ಬಗ್ಗೆ ಹೆಚ್ಚುವರಿ ಅರಿವು ಮತ್ತು ಇಂತಹ ಸಮಗ್ರ ಕೇಂದ್ರಗಳನ್ನು ರೋಗಿ ಕೇಂದ್ರಿತ ಮತ್ತು ವೈಜ್ಞಾನಿಕ ಕಾರ್ಯವಿಧಾನ ಜತೆಗೆ ಉತ್ಕೃಷ್ಟ ದರ್ಜೆಯವಾಗಿ ವಿಸ್ತರಿಸುವುದು ಈ ಸಮಯದ ಅಗತ್ಯವಾಗಿದೆ.

ತಮ್ಮ ಆರೋಗ್ಯ ಸಮಸ್ಯೆಯ ಜವಾಬ್ದಾರಿ ಹೊರಬಲ್ಲ ಮತ್ತು ನೀಡಲಾಗುವ ಸಲಹೆಗಳನ್ನು ಪಾಲಿಸಬಲ್ಲ ರೋಗಿಗಳು ವೈದ್ಯರ ಸಮಯವನ್ನು ಗೌರವಿಸಬೇಕಾಗುತ್ತದೆ ಮತ್ತು ಪೂರ್ವ ನಿಗದಿಯಾದ ಸಮಯದಲ್ಲಿ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ. ಅವರು ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ, ತಮ್ಮ ಪೂರ್ವ ಗುಣಮಟ್ಟದ ಜೀವನಕ್ಕೆ ಮರಳುವುದಕ್ಕಾಗಿ ಶಿಫಾರಸು ಮಾಡಲಾಗಿರುವ ವ್ಯಾಯಾಮಗಳನ್ನು ತಪ್ಪದೆ ಮಾಡುವ, ಪ್ರಯತ್ನಗಳನ್ನು ಬಿಡದೆ ನಡೆಸುವ ಬದ್ಧತೆಯನ್ನು ಪ್ರದರ್ಶಿಸಬೇಕಾಗುತ್ತದೆ.

-ಡಾ| ಯೋಗೀಶ್‌ ಡಿ. ಕಾಮತ್‌

ಜಾಯಿಂಟ್‌ ರಿಪ್ಲೇಸ್‌ಮೆಂಟ್‌ ಮತ್ತು ಸ್ಪೋರ್ಟ್ಸ್ ಇಂಜುರಿ ಸ್ಪೆಶಲಿಸ್ಟ್‌

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ,

ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next