“ಆ ದಿನಗಳು’ ಚಿತ್ರ ನಿರ್ದೇಶನ ಮಾಡಿರುವ ಕೆ.ಎಂ. ಚೈತನ್ಯ ಈಗ ಮತ್ತೂಂದು ದಿನಗಳನ್ನು ತೋರಿಸಲು ಹೊರಟಿದ್ದಾರೆ. ಈ ಬಾರಿ ಮತ್ತೂಮ್ಮೆ ಭೂಗತಲೋಕದ ಕಥೆಯನ್ನೇ ಆಯ್ಕೆ ಮಾಡಿಕೊಂಡಿರುವ ಚೈತನ್ಯ ಅವರ ಚಿತ್ರಕ್ಕೆ ವಿನೋದ್ ಪ್ರಭಾಕರ್ ನಾಯಕರಾಗಿದ್ದಾರೆ.
ಈ ಚಿತ್ರವನ್ನು ಶ್ರೇಯಸ್ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭಕೋರಿದರು. ಚಿತ್ರಕ್ಕೆ “ಬಲರಾಮನ ದಿನಗಳು’ ಎಂದು ಟೈಟಲ್ ಇಡಲಾಗಿದೆ.
“ಸಿನಿಮಾ ನಿರ್ಮಾಣ ಮಾಡಬೇಕೆಂಬುದು ನನ್ನ ಕನಸು. ಆ ಕನಸಿಗೆ ನನ್ನ ತಂದೆ, ತಾಯಿ ಮತ್ತು ಸಹೋದರ ಶಕ್ತಿ ತುಂಬುತ್ತಿದ್ದಾರೆ. ವಿನೋದ್ ಪ್ರಭಾಕರ್ ಅವರು ನನ್ನ ಚಿತ್ರರಂಗದ ಗುರುಗಳು. ಅವರ ಸಹಕಾರದಿಂದ ನಾನು ಪದ್ಮಾವತಿ ಫಿಲಂಸ್ ಎಂಬ ಸಂಸ್ಥೆ ಹುಟ್ಟುಹಾಕಿ ಈ ಚಿತ್ರ ನಿರ್ಮಿಸುತ್ತಿದ್ದೇನೆ’ ಎಂದರು ನಿರ್ಮಾಪಕ ಶ್ರೇಯಸ್.
ನಟ ವಿನೋದ್ ಪ್ರಭಾಕರ್ ಮಾತನಾಡಿ, “ನನಗೆ ಈ ಸಂಸ್ಥೆಯವರು ಟೈಗರ್ ಎಂಬ ಬಿರುದು ಕೊಟ್ಟಿದ್ದಾರೆ. ನನ್ನ ಅಭಿನಯದ ಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿದೆ. ಚೈತನ್ಯ ಅವರ “ಆ ದಿನಗಳು’ ಚಿತ್ರ ನೋಡಿದಾಗಿನಿಂದ ನಾನು ಅವರ ಅಭಿಮಾನಿ. ಅವರ ಜೊತೆಗೆ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ. ಅವರು ಸೃಷ್ಟಿ ಮಾಡಿರುವ ಬಲರಾಮನ ಪಾತ್ರಕ್ಕೆ, ಪ್ರಾಣ ಒತ್ತೆಯಿಟ್ಟು, ಬೆವರು-ರಕ್ತ ಹರಿಸಿ ಅದಕ್ಕೆ ನ್ಯಾಯ ಸಲ್ಲಿಸುತ್ತೇನೆ’ ಎಂದರು ನಾಯಕ ವಿನೋದ್ ಪ್ರಭಾಕರ್.
ನಿರ್ದೇಶಕ ಕೆ.ಎಂ.ಚೈತನ್ಯ ಮಾತನಾಡಿ, “ನಾನು ನಿರ್ದೇಶಿಸಿರುವ ಸಿನಿಮಾಗಳಲ್ಲಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಸಂದೇಶ ಹೇಳಿದ್ದೇನೆ. ಇದರಲ್ಲೂ ಅದು ಮುಂದುವರೆಯುತ್ತದೆ. ಈ ಚಿತ್ರ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಶ್ರೇಯಸ್. ಈ ಕಥೆ ಆಯ್ಕೆ ಮಾಡಿದ್ದು ಅವರು. ಭೂಗತಲೋಕದ ಬಗ್ಗೆ ಸಾಕಷ್ಟು ಕಥೆಗಳನ್ನು ಮಾಡಿದ್ದೆ. ಅದರಲ್ಲಿ ಯಾವ ಕಥೆ ಮಾಡಬೇಕು ಅಂತ ಹೇಳಿದ್ದು ಅವರೆ. ಜೊತೆಗೆ ಬಹಳ ವರ್ಷಗಳಿಂದ ವಿನೋದ್ ಪ್ರಭಾಕರ್ ಜೊತೆಗೆ ಚಿತ್ರ ಮಾಡುವ ಆಸೆ ಇತ್ತು. ಅದಕ್ಕೆ ಪೂರಕವಾಗಿ ಕಥೆ ಸಿಕ್ಕಿದೆ. ಈ ಚಿತ್ರಕ್ಕೆ ಅವರು ಬಹಳ ಅತ್ಯುತ್ತಮ ಆಯ್ಕೆ. ಇದು ಭೂಗತ ಲೋಕದ ಸಿನಿಮಾ. ಭೂಗತ ಲೋಕದ ಜೊತೆಗೆ ಸಮಾಜ, ರಾಜಕೀಯ ಹೀಗೆ ಎಲ್ಲಾ ಆಯಾಮಗಳು ಇರುತ್ತವೆ. ಚಿತ್ರದ ಬಗ್ಗೆ ಈಗಲೇ ಹೆಚ್ಚು ಹೇಳುವುದು ಕಷ್ಟ. ನಿಜಜೀವನದ ಕಥೆ ಆಧರಿಸಿದ ಕಾಲ್ಪನಿಕ ಚಿತ್ರ. ಇದು ಯಾವುದೇ ವ್ಯಕ್ತಿಯ ಕುರಿತಾದ ಚಿತ್ರ ಅಲ್ಲ. ಇದರಲ್ಲಿ ಮನರಂಜನೆ ಇರುತ್ತದೆ. ಇಡೀ ಕುಟುಂಬ ನೋಡುವ ಚಿತ್ರ’ ಎನ್ನುವುದು ಚೈತನ್ಯ ಮಾತು