Advertisement

ಆಸ್ತಿ ನಗದೀಕರಣಕ್ಕೆ ಮುಂದಾದ ಕೆಕೆಆರ್‌ಟಿಸಿ

03:07 PM Aug 07, 2022 | Team Udayavani |

ಕಲಬುರಗಿ: ಕೋವಿಡ್‌ದಿಂದ ತೀವ್ರ ನಷ್ಟದಿಂದ ಹೊರ ಬರಲು ಇಲ್ಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಹತ್ತಾರು ನಿಟ್ಟಿನಲ್ಲಿ ಹೊಸ ಕಾರ್ಯಕ್ಕೆ ಮುಂದಾಗಿದ್ದು, ಅದರಲ್ಲಿ ಪ್ರಮುಖವಾಗಿ ಸಂಸ್ಥೆಯ ಆಸ್ತಿ ನಗದೀಕರಣಕ್ಕೆ ಯೋಜನೆ ರೂಪಿಸಲಾಗಿದೆ.

Advertisement

ಸಂಸ್ಥೆಯ ವ್ಯಾಪ್ತಿಯಡಿ 10 ಕಡೆ ತೈಲ ಬಂಕ್‌ ಗಳನ್ನು ಸ್ಥಾಪಿಸಲು ತೈಲ ಕಂಪನಿಗಳಿಗೆ ಸಂಸ್ಥೆಯ ಒಡಂಬಡಿಕೆ ಮುಂದಾಗಿ, ಈಗಾಗಲೇ ಬಂಕ್‌ ಗಳ ಕಾರ್ಯಾರಂಭ ಮೂಲಕ ಆದಾಯ ಕಂಡುಕೊಳ್ಳಲು ನಿರ್ಧರಿಸಲಾಗಿದೆ. ಅಂದರೆ ಕಲಬುರಗಿ ಸೇರಿದಂತೆ ಸಂಸ್ಥೆಯ ವ್ಯಾಪ್ತಿಯಲ್ಲಿ 10 ಬಂಕ್‌ಗಳು ಸ್ಥಾಪನೆಯಾಗಲಿವೆ. ಈ ಮೂಲಕ ಕೆಕೆಆರ್‌ಟಿಸಿಗೆ ಬಾಡಿಗೆ ರೂಪದಲ್ಲಿ ತಿಂಗಳ ಆದಾಯ ನಿಶ್ಚಿತವಾಗಲಿದೆ.

ಬಂಕ್‌ಗಳ ಸ್ಥಾಪನೆ ಜತೆಗೆ ಸಂಸ್ಥೆಯ ಜಾಗದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ದಲ್ಲಿ ವಿವಿಧ ಕಾರ್ಯ ಕೈಗೊಳ್ಳಲು ಡಿಪಿಆರ್‌ ರೂಪಿಸಲಾಗಿದೆ. ಕಲಬುರಗಿ ಮಹಾನಗರದ ಡಿಪೋ 1ರಲ್ಲಿನ 2.50 ಎಕರೆ ಜಾಗದಲ್ಲಿ ವಾಣಿಜ್ಯ ಚಟುವಟಿಕೆ ಸೇರಿದಂತೆ ಇತರೆ ಕಾರ್ಯಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಕೇಂದ್ರ ಕಚೇರಿ ಕಟ್ಟಡಕ್ಕೂ ಖಾಸಗಿ ಸಹಭಾಗಿತ್ವ

ಇಷ್ಟು ದಿನ ಸಂಸ್ಥೆಯ ಜಾಗ ಖಾಸಗಿಯವರಿಗೆ ಬಾಡಿಗೆ ನೀಡಲಾಗಿದ್ದರೆ ಜತೆಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮುಂದಾಗಿರುವ ನಡುವೆ ಸಂಸ್ಥೆಯ ಕೇಂದ್ರ ಕಚೇರಿ ಕಟ್ಟಡ ಕಾರ್ಯ ಸಹ ಪಿಪಿಪಿ ಅಡಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಂದರೆ ಈಗಿರುವ ಕಳೇ ಕಟ್ಟಡ ನೆಲಸಮಗೊಂಡು ಹೊಸ ಕಟ್ಟಡ ತಲೆ ಎತ್ತಲಿದೆ. ಹಗರಿಬೊಮ್ಮನಹಳ್ಳಿಯ ಬಸ್‌ ಡಿಪೋ ಘಟಕದ ಜಾಗದಲ್ಲಿ ಗಂಧದ ಗಿಡ ಬೆಳೆಯಲಾಗುತ್ತಿದೆ. ಇದರ ಮೂಲಕವೂ ಆದಾಯ ಕಂಡುಕೊಳ್ಳಲು ಮುಂದಾಗಿರುವುದನ್ನು ನೋಡಿದರೆ ಕೆಕೆಆರ್‌ ಟಿಸಿ ಒಟ್ಟಾರೆ ಯಾವುದೇ ಮೂಲಗಳಿಂದ ಹಣ ಗಳಿಸಬಹುದು ಎಂಬುದನ್ನು ನಿರೂಪಿಸಲು ಮುಂದಾಗಿರುವುದು ಕಂಡು ಬರುತ್ತಿದೆ.

Advertisement

1619 ಹುದ್ದೆಗಳ ಭರ್ತಿಗೆ ಚಾಲನೆ

ಕೆಕೆಆರ್‌ ಟಿಸಿಯಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆಗಳ ಖಾಲಿ ಇರುವುದರಿಂದ ಸಮಸ್ಯೆಯಾಗುತ್ತಿರುವುದನ್ನು ತಕ್ಕಮಟ್ಟಿಗೆ ನಿಭಾಯಿಸಲು ಸಂಸ್ಥೆ ಮುಂದಾಗಿದ್ದು, ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿಗೆ ಈ ಕ್ರಮಕ್ಕೆ ದೃಢ ಹೆಜ್ಜೆ ಇಡಲಾಗಿದೆ. ಪ್ರಸಕ್ತ ಆಗಸ್ಟ್‌ ತಿಂಗಳ ಮಾಸಾಂತ್ಯಕ್ಕೆ ಅರ್ಜಿಗಳ ಪರಿಶೀಲನಾ ಕಾರ್ಯ ಕೈಗೆತ್ತಿಕೊಂಡು ಚಾಲನೆ ನೀಡಲಾಗುತ್ತಿದೆ. 2020ರಲ್ಲಿಯೇ 38 ಸಾವಿರ ಅರ್ಜಿಗಳು ಬಂದಿದ್ದು, ಮೀಸಲಾತಿ ಅನ್ವಯ ನೇಮಕಾತಿ ನಡೆಯಲಿದೆ. ಅರ್ಜಿಗಳ ಪರಿಶೀಲನೆ ನಡೆದ ನಂತರ ತರಬೇತಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಹುಮನಾಬಾದ್‌ದಲ್ಲಿರುವ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು. ಒಟ್ಟಾರೆ ಆರೇಳು ತಿಂಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಲಾಗಿದೆ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ತಿಳಿಸಿದ್ದಾರೆ.

ಅದೇ ರೀತಿ 35 ಬ್ಯಾಕ್‌ಲಾಗ್‌ ಹುದ್ದೆಗಳಿಗೂ ಅಧಿಸೂಚನೆ ಹೊರಡಿಸಲು ಮುಂದಾಗಲಾಗಿದೆ. 150 ಕಂಡಕ್ಟರ್‌ ಲೆಸ್‌ ಬಸ್‌ಗಳನ್ನು ನಿರ್ವಹಿಸಲು ತಕ್ಷಣಕ್ಕೆ ಮುಂದಾಗಲಾಗಿದೆ. ಶ್ರೀನಿವಾಸ ಆಯೋಗದ ಶಿಫಾರಸ್ಸಿನಂತೆ ಹತ್ತಾರು ಕ್ರಮಕ್ಕೆ ಮುಂದಾಗುವುದರ ಮೂಲಕ ಸಂಸ್ಥೆ ಹತ್ತಾರು ವಿನೂತನ ಯೋಜನೆಗಳನ್ನು ರೂಪಿಸಲಾಗಿದೆ.

ಗುಜರಿ ಬಸ್‌ಗಳ ವಿಲೇವಾರಿಗೆ ಮುಂದಾಗಲಾಗಿದೆ. ತುರ್ತಾಗಿ 300 ಬಸ್‌ಗಳ ವಿಲೇವಾರಿಗೆ ಟೆಂಡರ್‌ ಕರೆಯಲಾಗಿದೆ. ಅದೇ ರೀತಿ 10 ವೋಲ್ವೋ, 30 ನಾನ್‌ ಎಸಿ ಬಸ್‌ಗಳ ಖರೀದಿಗೆ ನಿರ್ಧರಿಸಲಾಗಿದೆ. ಈ ಸಂಬಂಧ ಪ್ರಸ್ತಾವನೆ ಸಚಿವ ಸಂಪುಟಕ್ಕೆ ಕಳುಹಿಸಿ ಕೊಡಲಾಗಿದೆ. ಎಂ. ರಾಚಪ್ಪ, ಎಂಡಿ, ಕೆಕೆಆರ್ಟಿಸಿ

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next