ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕಾದಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಇಲ್ಲಿನ ಕೃಷಿ ವಿಶ್ವವಿದ್ಯಾಲಯ ವಿಚಾರದಲ್ಲಿ ಮಾತ್ರ ಗಾಢ ಮೌನಕ್ಕೆ ಶರಣಾದಂತಿದೆ. ಆರು ಜಿಲ್ಲೆಗಳ ವ್ಯಾಪ್ತಿ ವಿಸ್ತರಿಸಿರುವ ವಿವಿಗೆ ನಿರೀಕ್ಷಿತ ಮಟ್ಟದ ಆದ್ಯತೆ ಸಿಗದಂತಾಗಿದೆ.
ಕಳೆದ ಮೂರು ವರ್ಷಗಳಿಂದ ವಿವಿಯಿಂದ ನಾನಾ ಉದ್ದೇಶಗಳಿಗೆ ಸುಮಾರು 229 ಕೋಟಿ ರೂ.ಗೂ ಅಧಿಕ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಒಂದೇ ಒಂದು ರೂ. ಕೂಡ ಬಂದಿಲ್ಲ ಎನ್ನುತ್ತಾರೆ ವಿವಿ ಅಧಿಕಾರಿಗಳು.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ, ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ರಾಯಚೂರುವಿಶ್ವವಿದ್ಯಾಲಯದಿಂದ ನಿರಂತರ ಚಟುವಟಿಕೆಹಮ್ಮಿಕೊಳ್ಳಲಾಗುತ್ತದೆ. ವಿವಿ ಸಂಶೋಧನಾ ಸಾಮರ್ಥ್ಯಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕೇಂದ್ರ ಆರಂಭಿಸುವುದು,ಹೊಸ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಸ್ತಾವನೆ ಸಲ್ಲಿಸುತ್ತಲೇ ಬರಲಾಗಿದೆ. ಅದರಲ್ಲಿ ಮುಖ್ಯವಾಗಿ ಒಂದುಕೋಟಿ ರೂ. ವೆಚ್ಚದಲ್ಲಿ ಮಾದರಿ ಬೋಧನಾ ಕ್ಷೇತ್ರದ ಆಧುನೀಕರಣ, ಒಂದು ಕೋಟಿ ರೂ. ವೆಚ್ಚದಲ್ಲಿ ನೀರು ತಂತ್ರಜ್ಞಾನ ಸಂಶೋಧನಾ ಕಾರ್ಯಕ್ರಮ, 5 ಕೋಟಿ ರೂ. ವೆಚ್ಚದಲ್ಲಿ ಕೃಷಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಕೇಂದ್ರ, 2.50 ಕೋಟಿ ರೂ.ವೆಚ್ಚದಲ್ಲಿ ಸಂಸ್ಕರಿಸಿದ ಆಹಾರದಲ್ಲಿ ಮಾಲಿನ್ಯಕಾರಕಕಲಬೆರಕೆ ಪತ್ತೆ ಘಟಕ, ಐದು ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಸಸ್ಯ, ಜಾನುವಾರು ಮತ್ತು ಮೀನುಗಾರಿಕೆ ಸಂಶೋಧನಾ ಅಭಿವೃದ್ಧಿ ಕೇಂದ್ರದ ಸ್ಥಾಪನೆ, 10 ಕೋಟಿ ರೂ. ವೆಚ್ಚದಲ್ಲಿ ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಸಂಶೋಧನಾ ಸಮುತ್ಛಯ ಕಟ್ಟಡ ನಿರ್ಮಾಣ,2.50 ಕೋಟಿ ರೂ. ವೆಚ್ಚದಲ್ಲಿ ಯಾದಗಿರಿ, ಬೀದರ,ರಾಯಚೂರಿನಲ್ಲಿ ಬಾನುಲಿ ಕೇಂದ್ರ ಸ್ಥಾಪಿಸುವುದುಸೇರಿದಂತೆ ಸುಮಾರು 229 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಯಾವುದೇ ಪ್ರಸ್ತಾವನೆಗೂ ಸರಿಯಾದ ಸ್ಪಂದನೆ ಸಿಗದಿರುವುದು ವಿಪರ್ಯಾಸ.
ಸೋಲಾರ್ ಯೋಜನೆಗೂ ಕೊಕ್ಕೆ :ವಿದ್ಯುತ್ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಯಚೂರು ಕೃಷಿ ವಿವಿ ಆವರಣ ಸೇರಿ ಗಂಗಾವತಿ- ಭೀಮರಾಯನಗುಡಿಯಲ್ಲಿ ಸೋಲಾರ್ ವ್ಯವಸ್ಥೆ ಮಾಡಲು2.75 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆಅದಕ್ಕೂ ಯಾವುದೇ ಪೂರಕ ಪ್ರತಿಕ್ರಿಯೆ ಸಿಕ್ಕಿಲ್ಲ. ರಾಯಚೂರು ಕೃಷಿ ವಿವಿಯಲ್ಲಿ 11 ಕಟ್ಟಡ ಹಾಗೂ ಗಂಗಾವತಿಯಲ್ಲಿ ಮೂರು,ಭೀಮರಾಯನಗುಡಿ ಆವರಣದಲ್ಲಿ ಮೂರು ಕಟ್ಟಡ ಸೇರಿ 18ಕಡೆ ಸೋಲಾರ್ ಅಳವಡಿಕೆಗೆ ಯೋಜನೆ ರೂಪಿಸಲಾಗಿತ್ತು.ಈಗ ತಿಂಗಳಿಗೆ ಏನಿಲ್ಲವೆಂದರೂ 15-20 ಲಕ್ಷ ರೂ. ವಿದ್ಯುತ್‌ಬಿಲ್ ಪಾವತಿಸಲಾಗುತ್ತಿದೆ. ಅದರ ಬದಲು ವಿವಿ ಆವರಣದಲ್ಲಿ ಕಟ್ಟಡಗಳ ಮೇಲೆಯೇ ಸೋಲಾರ್ ಅಳವಡಿಸಿದರೆ ಉಚಿತ ಬಳಕೆ ಜತೆಗೆ ವಿದ್ಯುತ್ ಮಾರಾಟ ಮಾಡಲು ಅವಕಾಶವಿದೆ. ಈ ಪ್ರಸ್ತಾವನೆಗೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ .
ಜನಪ್ರತಿನಿಧಿಗಳಿಗಿಲ್ಲ ಇಚ್ಛಾಶಕ್ತಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ 1500 ಕೋಟಿ ರೂ. ಅನುದಾನ ಬರುತ್ತದೆ. ಆದರೆ ಈವರೆಗೂ ಪೂರ್ಣ ಪ್ರಮಾಣದಲ್ಲಿ ಈ ಹಣ ಬಳಕೆ ಆದ ಉದಾಹರಣೆಯೇ ಇಲ್ಲ. ಇದಕ್ಕೆ ಈ ಭಾಗದ ಜನಪ್ರತಿನಿ ಧಿಗಳಲ್ಲಿರುವ ಇಚ್ಛಾಶಕ್ತಿಕೊರತೆಯೇ ಕಾರಣ ಎನ್ನುವುದರಲ್ಲಿ ಸಂಶಯ ಬೇಡ. ಕೆಕೆಆರ್‌ಡಿಬಿಗೆ ಸಲ್ಲಿಸಿರುವ ಪ್ರಸ್ತಾವನೆಗಳ ಬಗ್ಗೆಈ ಭಾಗದ ಬಹುತೇಕ ಶಾಸಕರಿಗೆ ಕುಲಪತಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೂ ಯಾವೊಬ್ಬ ಜನಪ್ರತಿನಿಧಿ ಕೂಡ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ.ಮಂಡಳಿಯಲ್ಲಿ ಅನುದಾನ ಲಭ್ಯವಿದ್ದಾಗ್ಯೂ ಈಭಾಗದ ಶೈಕ್ಷಣಿಕ ಪ್ರಗತಿ, ಕೃಷಿ ಸಂಶೋಧನೆಗಳಿಗೆ ಸಿಕ್ಕಿಲ್ಲ.
ಯಾವುದೇ ಪ್ರಸ್ತಾವನೆಗಳು ಜಿಲ್ಲಾಡಳಿತದ ಮುಖೇನ ಸಲ್ಲಿಕೆಯಾಗಿದ್ದರೆ ಕೂಡಲೇ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಆ ರೀತಿ ಸಾಕಷ್ಟು ಹಣ ಬಿಡುಗಡೆ ಮಾಡಿದ ನಿದರ್ಶನಗಳಿವೆ.ರಾಯಚೂರು ಕೃಷಿ ವಿವಿ ಸಲ್ಲಿಸಿದ ಪ್ರಸ್ತಾವನೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. –
ವೆಂಕಟೇಶಕುಮಾರ್, ಕಾರ್ಯದರ್ಶಿ, ಕೆಕೆಆರ್‌ಡಿಬಿ
-ಸಿದ್ಧಯ್ಯಸ್ವಾಮಿ ಕುಕನೂರು