Advertisement

ಆರ್‌ಸಿಬಿ ಮೇಲೆ ರೈಡ್‌ ಮಾಡಿದ ಕೆಕೆಆರ್‌

11:18 PM Oct 11, 2021 | Team Udayavani |

ಶಾರ್ಜಾ: ಆರ್‌ಸಿಬಿಯ ಮತ್ತೊಂದು ಕಪ್‌ ಕನಸು ಸೋಮವಾರದ ಎಲಿಮಿನೇಟರ್‌ ಪಂದ್ಯದಲ್ಲಿ ಛಿದ್ರಗೊಂಡಿದೆ. ಸುನೀಲ್‌ ನಾರಾಯಣ್‌ ಅವರ ಸ್ಪಿನ್‌ ಸುಳಿಗೆ ಸಿಲುಕಿದ ಕೊಹ್ಲಿ ಪಡೆ ಕೆಕೆಆರ್‌ಗೆ 4 ವಿಕೆಟ್‌ಗಳಿಂದ ಶರಣಾಗಿ ಕೂಟದಿಂದ ಹೊರಬಿದ್ದಿದೆ.

Advertisement

ಇದರೊಂದಿಗೆ ವಿರಾಟ್‌ ಕೊಹ್ಲಿ ಅವರ ಆರ್‌ಸಿಬಿ ನಾಯಕತ್ವದ ನಂಟು ಬರಿಗೈಯಲ್ಲಿ ಕೊನೆಗೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದರೂ ಆರ್‌ಸಿಬಿಗೆ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ 138 ರನ್‌ ಮಾತ್ರ. ಜವಾಬು ನೀಡಿದ ಕೆಕೆಆರ್‌ 19.4 ಓವರ್‌ಗಳಲ್ಲಿ 6 ವಿಕೆಟಿಗೆ 139 ರನ್‌ ಬಾರಿಸಿ ವಿಜಯಿಯಾಯಿತು. ಬುಧವಾರ ಕೆಕೆಆರ್‌-ಡೆಲ್ಲಿ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಮುಖಾಮುಖೀಯಾಗಲಿವೆ.

ಚೇಸಿಂಗ್‌ ವೇಳೆ ಕೊನೆಯ ಹಂತದಲ್ಲಿ ಮಾರ್ಗನ್‌ ಪಡೆ ಒತ್ತಡಕ್ಕೆ ಸಿಲುಕಿದರೂ ಇದನ್ನು ಯಶಸ್ವಿಯಾಗಿ ನಿಭಾಯಿಸಿತು. ಗಿಲ್‌ ಮತ್ತು ಅಯ್ಯರ್‌ ಮೊದಲ ವಿಕೆಟಿಗೆ 41 ರನ್‌ ಗಳಿಸಿ ಉತ್ತಮ ಬುನಾದಿ ನಿರ್ಮಿಸಿದರು. ರಾಣಾ 23, ಬ್ಯಾಟಿಂಗಿನಲ್ಲೂ ಮಿಂಚಿದ ಸುನೀಲ್‌ ನಾರಾಯಣ್‌ 26 ರನ್‌ ಬಾರಿಸಿ ತಂಡವನ್ನು ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಾರಾಯಣ್‌ ಸ್ಪಿನ್‌ ದಾಳಿ
ಕೆರಿಬಿಯನ್‌ ಮಿಸ್ಟರಿ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ ಓವರಿಗೆ ಒಂದೊಂದರಂತೆ ವಿಕೆಟ್‌ ಬೇಟೆಯಾಡುತ್ತ ಹೋದರು. ಮೊದಲು ಭರತ್‌, ಬಳಿಕ ಕೊಹ್ಲಿ, ಅನಂತರ ಎಬಿಡಿ, ಕೊನೆಗೆ ಮ್ಯಾಕ್ಸ್‌ವೆಲ್‌… ಹೀಗೆ ದೊಡ್ಡ ದೊಡ್ಡ ವಿಕೆಟ್‌ ಉರುಳಿಸಿ ಕೆಕೆಆರ್‌ ಪಾಲಿನ ಬೌಲಿಂಗ್‌ ಹೀರೋ ಎನಿಸಿಕೊಂಡರು.

Advertisement

ವಿರಾಟ್‌ ಕೊಹ್ಲಿ-ದೇವದತ್ತ ಪಡಿಕ್ಕಲ್‌ ಆರ್‌ಸಿಬಿಗೆ ಭರವಸೆಯ ಆರಂಭ ಒದಗಿಸಿದರು. ಪವರ್‌ ಪ್ಲೇಯಲ್ಲಿ ರನ್‌ ಸರಾಗವಾಗಿ ಹರಿದು ಬರತೊಡಗಿತು. ಕೆಕೆಆರ್‌ ಮೊದಲ 4 ಓವರ್‌ಗಳಲ್ಲಿ ನಾಲ್ವರು ಬೌಲರ್‌ಗಳನ್ನು ದಾಳಿಗಿಳಿಸಿದರೂ ವಿಶೇಷ ಲಾಭವಾಗಲಿಲ್ಲ. ಮೊದಲ ವಿಕೆಟಿಗೆ 5.1 ಓವರ್‌ಗಳಿಂದ 49 ರನ್‌ ಒಟ್ಟುಗೂಡಿತು. ಆಗ ಫ‌ರ್ಗ್ಯುಸನ್‌ ಎಡಗೈ ಆಟಗಾರ ಪಡಿಕ್ಕಲ್‌ ಅವರನ್ನು ಬೌಲ್ಡ್‌ ಮಾಡಿ ಕೆಕೆಆರ್‌ಗೆ ಮೊದಲ ಯಶಸ್ಸು ತಂದಿತ್ತರು. ಪಡಿಕ್ಕಲ್‌ ಗಳಿಕೆ 18 ಎಸೆತಗಳಿಂದ 21 ರನ್‌ (2 ಬೌಂಡರಿ).

ಪವರ್‌ ಪ್ಲೇಯಲ್ಲಿ ಆರ್‌ಸಿಬಿ ಒಂದು ವಿಕೆಟಿಗೆ 53 ರನ್‌ ಒಟ್ಟುಗೂಡಿತು. ಮತ್ತು ಆರ್‌ಸಿಬಿ ಬ್ಯಾಟಿಂಗ್‌ ಆರ್ಭಟ ಈ ಹಂತಕ್ಕೇ ಸೀಮಿತಗೊಂಡಿತು. ವನ್‌ಡೌನ್‌ನಲ್ಲಿ ಬಂದ ಕಳೆದ ಪಂದ್ಯದ ಹೀರೋ ಶ್ರೀಕರ್‌ ಭರತ್‌ ಇಲ್ಲಿ ತೀರಾ ನಿಧಾನಿಯಾಗಿದ್ದರು (16 ಎಸೆತ, 9 ರನ್‌). 10 ಓವರ್‌ ಅಂತ್ಯಕ್ಕೆ ಆರ್‌ಸಿಬಿ 2 ವಿಕೆಟಿಗೆ 70 ರನ್‌ ಮಾಡಿತ್ತು. ಅರ್ಥಾತ್‌, ಪವರ್‌ ಪ್ಲೇ ಮುಗಿದ ಬಳಿಕ 4 ಓವರ್‌ಗಳಲ್ಲಿ ಬಂದದ್ದು 17 ರನ್‌ ಮಾತ್ರ.

ನಾರಾಯಣ್‌ ತಮ್ಮ ದ್ವಿತೀಯ ಓವರ್‌ನಲ್ಲಿ ದೊಡ್ಡದೊಂದು ಬೇಟೆಯಾಡಿ ಕಪ್ತಾನ ಕೊಹ್ಲಿ ಅವರನ್ನು ಬೌಲ್ಡ್‌ ಮಾಡಿದರು. ಕೊಹ್ಲಿ ಗಳಿಕೆ 33 ಎಸೆತಗಳಿಂದ 39 ರನ್‌ (5 ಬೌಂಡರಿ). ಎಬಿಡಿ ವೈಫ‌ಲ್ಯ ಮತ್ತೆ ಮುಂದುವರಿಯಿತು (11). ನಾರಾಯಣ್‌ ಅವರ ಆಫ್-ಬ್ರೇಕ್‌ ಎಸೆತವೊಂದು ಡಿ ವಿಲಿಯರ್ ಅವರನ್ನು ವಂಚಿಸಿತು. ಅವರು ಬೌಲ್ಡ್‌ ಆಗಿ ನಿರ್ಗಮಿಸಿದರು. ಯುಎಇ ಆವೃತ್ತಿಯ 8 ಪಂದ್ಯಗಳಿಂದ ಎಬಿಡಿ ಬ್ಯಾಟಿನಿಂದ ಹರಿದು ಬಂದದ್ದು ಬರೀ 106 ರನ್‌! 15 ಓವರ್‌ ಅಂತ್ಯಕ್ಕೆ ಆರ್‌ಸಿಬಿ ಸ್ಕೋರ್‌ 4ಕ್ಕೆ 108 ರನ್‌ ಆಗಿತ್ತು.

ಡೆತ್‌ ಓವರ್‌ನಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮ್ಯಾಜಿಕ್‌ ಮಾಡುವುದು ಅನಿವಾರ್ಯವಾಗಿತ್ತು. ಆದರೆ ನಾರಾಯಣ್‌ ಇದಕ್ಕೂ ಅವಕಾಶ ಕೊಡಲಿಲ್ಲ. ತಮ್ಮ ಅಂತಿಮ ಓವರ್‌ನಲ್ಲಿ ಈ ಬಹುಮೂಲ್ಯ ವಿಕೆಟ್‌ ಉಡಾಯಿಸಿದರು.

ಇದನ್ನೂ ಓದಿ:ಚೀನಾ ಉದ್ಧಟತನ: ಮಾತುಕತೆ ವಿಫ‌ಲ ; ಪರಿಹಾರ ನಿಟ್ಟಿನಲ್ಲಿ ನಡೆದಿದ್ದ 13ನೇ ಸುತ್ತಿನ ಮಾತುಕತೆ

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ದೇವದತ್ತ ಪಡಿಕ್ಕಲ್‌ ಬಿ ಫ‌ರ್ಗ್ಯುಸನ್‌ 21
ವಿರಾಟ್‌ ಕೊಹ್ಲಿ ಬಿ ನಾರಾಯಣ್‌ 39
ಎಸ್‌. ಭರತ್‌ ಸಿ ಅಯ್ಯರ್‌ ಬಿ ನಾರಾಯಣ್‌ 9
ಮ್ಯಾಕ್ಸ್‌ವೆಲ್‌ ಸಿ ಫ‌ರ್ಗ್ಯುಸನ್‌ ಬಿ ನಾರಾಯಣ್‌ 15
ಡಿ ವಿಲಿಯರ್ ಬಿ ನಾರಾಯಣ್‌ 11
ಶಾಬಾಜ್‌ ಅಹ್ಮದ್‌ ಸಿ ಮಾವಿ ಬಿ ಫ‌ರ್ಗ್ಯುಸನ್‌ 13
ಡೇನಿಯಲ್‌ ಕ್ರಿಸ್ಟಿಯನ್‌ ರನೌಟ್‌ 9
ಹರ್ಷಲ್‌ ಪಟೇಲ್‌ ಔಟಾಗದೆ 8
ಜಾರ್ಜ್‌ ಗಾರ್ಟನ್‌ ಔಟಾಗದೆ 0
ಇತರ 13
ಒಟ್ಟು (7 ವಿಕೆಟಿಗೆ) 138
ವಿಕೆಟ್‌ ಪತನ:1-49, 2-69, 3-88, 4-102, 5-112, 6-126, 7-134.
ಬೌಲಿಂಗ್‌:ಶಕಿಬ್‌ ಅಲ್‌ ಹಸನ್‌ 4-0-24-0
ಶಿವಂ ಮಾವಿ 4-0-36-0
ವರುಣ್‌ ಚಕ್ರವರ್ತಿ 4-0-20-0
ಲಾಕಿ ಫ‌ರ್ಗ್ಯುಸನ್‌ 4-0-30-2
ಸುನೀಲ್‌ ನಾರಾಯಣ್‌ 4-0-21-4
ಕೋಲ್ಕತಾ ನೈಟ್‌ ರೈಡರ್
ಶುಭಮನ್‌ ಸಿ ವಿಲಿಯರ್ ಬಿ ಹರ್ಷಲ್‌ 29
ವಿ. ಅಯ್ಯರ್‌ ಸಿ ಭರತ್‌ ಬಿ ಹರ್ಷಲ್‌ 26
ರಾಹುಲ್‌ ತ್ರಿಪಾಠಿ ಎಲ್‌ಬಿಡಬ್ಲ್ಯು ಬಿ ಚಹಲ್‌ 6
ನಿತೀಶ್‌ ರಾಣಾ ಸಿ ವಿಲಿಯರ್ ಬಿ ಚಹಲ್‌ 23
ನಾರಾಯಣ್‌ ಬಿ ಸಿರಾಜ್‌ 26
ದಿನೇಶ್‌ ಕಾರ್ತಿಕ್‌ ಸಿ ಭರತ್‌ ಬಿ ಸಿರಾಜ್‌ 10
ಇಯಾನ್‌ ಮಾರ್ಗನ್‌ ಔಟಾಗದೆ 5
ಶಕಿಬ್‌ ಅಲ್‌ ಹಸನ್‌ ಔಟಾಗದೆ 9
ಇತರ 5
ಒಟ್ಟು (19.4 ಓವರ್‌ಗಳಲ್ಲಿ 6ವಿಕೆಟಿಗೆ) 139
ವಿಕೆಟ್‌ ಪತನ:1-41, 2-53, 3-79, 4-110, 5-125, 6-126.
ಬೌಲಿಂಗ್‌;ಮೊಹಮ್ಮದ್‌ ಸಿರಾಜ್‌ 4-0-19-2
ಜಾರ್ಜ್‌ ಗಾರ್ಟನ್‌ 3-0-29-0
ಹರ್ಷಲ್‌ ಪಟೇಲ್‌ 4-019-2
ಯಜುವೇಂದ್ರ ಚಹಲ್‌ 4-0-16-2
ಗ್ಲೆನ್‌ ಮ್ಯಾಕ್ಸ್‌ವೆಲ್‌ 3-0-25-0
ಡೇನಿಯಲ್‌ ಕ್ರಿಸ್ಟಿಯನ್‌ 1.4-029-0

ಆರ್‌ಸಿಬಿ ತೊರೆದ ಲಂಕಾ ಆಟಗಾರರು
ದುಬಾೖ: ಆರ್‌ಸಿಬಿ ತಂಡದ ಇಬ್ಬರು ಶ್ರೀಲಂಕಾ ಆಟಗಾರರಾದ ವನಿಂದು ಹಸರಂಗ ಮತ್ತು ದುಷ್ಮಂತ ಚಮೀರ ಪ್ಲೇ ಆಫ್ ಹಂತದಲ್ಲಿಯೇ ಆರ್‌ಸಿಬಿ ತಂಡ ತೊರೆದಿದ್ದಾರೆ.

ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ತೆರಳುವಂತೆ ಶ್ರೀಲಂಕಾ ಮಂಡಳಿ ನೀಡಿದ ಸೂಚನೆ ಮೇರೆಗೆ ಹಸರಂಗ ಮತ್ತು ಚಮೀರ ಬಯೋಬಬಲ್‌ ತೊರೆದಿದ್ದಾರೆ ಎಂದು ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ.

ಶ್ರೀಲಂಕಾ ತಂಡದ ಈ ಆಟಗಾರರನ್ನು ಐಪಿಎಲ್‌ ಯುಎಇ ಚರಣಕ್ಕಾಗಿ ಬದಲಿ ಆಟಗಾರರನ್ನಾಗಿ ತಂಡಕ್ಕೆ ಸೇರಿಸಲಾಗಿತ್ತು. ಹಸರಂಗ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿದರೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫ‌ಲರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next