ಹೈದರಾಬಾದ್: ಐಡೆನ್ ಮಾರ್ಕ್‌ರಮ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಉತ್ತಮ ಆಟದ ಹೊರತಾಗಿಯೂ ಸನ್‌ರೈಸರ್ ಹೈದರಾಬಾದ್ ತಂಡವು ಗುರುವಾರದ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡದೆದುರು 5 ರನ್ನುಗಳಿಂದ ಸೋಲನ್ನು ಕಂಡಿದೆ.
ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಅವರ ಆಕರ್ಷಕ ಆಟದಿಂದಾಗಿ ಕೋಲ್ಕತಾ ನೈಟ್‌ರೈಡರ್ ತಂಡವು 9 ವಿಕೆಟಿಗೆ 171 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಹೈದರಾಬಾದ್ ತಂಡವು ಕೊನೆ ಹಂತದಲ್ಲಿ ಎಡವಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟಿಗೆ 166 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಹೈದರಾಬಾದ್‌ನ ಆರಂಭ ಉತ್ತಮವಾಗಿರಲಿಲ್ಲ. 54 ರನ್ ಗಳಿಸುವಷ್ಟರಲ್ಲಿ ಆರಂಭದ ನಾಲ್ವರು ಆಟಗಾರರು ಔಟಾಗಿ ಆಘಾತಕ್ಕೆ ಒಳಗಾಗಿತ್ತು. ಆಬಳಿಕ ಮಾರ್ಕ್‌ರಮ್ ಮತ್ತು ಕ್ಲಾಸೆನ್ ಅವರು ಐದನೇ ವಿಕೆಟಿಗೆ 70 ರನ್ ಪೇರಿಸಿ ತಂಡವನ್ನು ಆಧರಿಸಿದರಲ್ಲದೇ ತಂಡ ಗೆಲುವು ಸಾಧಿಸುವ ಸಾಧ್ಯತೆಯನ್ನು ಹೆಚ್ಚಿಸಿದರು. ಕ್ಲಾಸೆನ್ 20 ಎಸೆತಗಳಿಂದ 36 ರನ್ ಗಳಿಸಿದರೆ ಮಾರ್ಕ್‌ರಮ್ 41 ರನ್ ಹೊಡೆದರು.
ಕ್ಲಾಸೆನ್ ಔಟಾದ ಬಳಿಕ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು. ಕೊನೆ ಹಂತದಲ್ಲಿ ವರುಣ್ ಚಕ್ರವರ್ತಿ, ಶಾದೂìಲ್ ಠಾಕೂರ್ ವೈಭವ್ ಅರೋರ ಬಿಗು ದಾಳಿ ಸಂಘಟಿಸಿದ್ದರಿಂದ ಹೈದರಾಬಾದ್ ರನ್ ಗಳಿಸಲು ಒದ್ದಾಡಿ ಅಂತಿಮವಾಗಿ 5 ರನ್ನುಗಳಿಂದ ಸೋಲನ್ನು ಕಾಣುವಂತಾಯಿತು.
ಕೆಕೆಆರ್‌ನ ಆರಂಭ ಉತ್ತಮವಾಗಿರಲಿಲ್ಲ. ಮಾರ್ಕೊ ಜಾನ್ಸೆನ್ ದಾಳಿಗೆ ಕೆಕೆಆರ್‌ನ ಗುರ್ಬಜ್ ಮತ್ತು ವೆಂಕಟೇಶ್ ಅಯ್ಯರ್ ಬೇಗನೇ ಔಟಾದ ಕಾರಣ ಕೆಕೆಆರ್
ಒತ್ತಡಕ್ಕೆ ಬಿತ್ತು.
ಇದರಿಂದಾಗಿ ಪವರ್‌ಪ್ಲೇಯಲ್ಲಿ ಕೆಕೆಆರ್‌ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. 49 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಈ ಹಂತ
ದಲ್ಲಿ ನಿತೀಶ್ ರಾಣಾ ಅವರನ್ನು ಸೇರಿಕೊಂಡ ರಿಂಕು ಸಿಂಗ್ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು.
Related Articles
ಹೈದರಾಬಾದ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅವರಿಬ್ಬರು ನಾಲ್ಕನೇ ವಿಕೆಟಿಗೆ 61 ರನ್ನುಗಳ ಜತೆಯಾಟ ನಡೆಸಿದರು. 31 ಎಸೆತಗಳಿಂದ 42 ರನ್ ಗಳಿಸಿದ ರಾಣಾ 12ನೇ ಓವರಿನಲ್ಲಿ ಔಟಾದರು. ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿದ್ದರು. ರಿಂಕು ಸಿಂಗ್ ಕ್ರೀಸ್‌ನ ಒಂದು ಕಡೆ ಗಟ್ಟಿಯಾಗಿ ನಿಂತರೂ ಇನ್ನೊಂದು ಕಡೆಯಿಂದ ವಿಕೆಟ್‌ಗಳು ಉರುಳುತ್ತಿದ್ದವು. ಸ್ಫೋಟಕ ಖ್ಯಾತಿಯ ಆ್ಯಂಡ್ರೆ ರಸೆಲ್, ಸುನೀಲ್ ನಾರಾಯಣ್ ಈ ಪಂದ್ಯದಲ್ಲೂ ಬ್ಯಾಟಂಗ್ ವೈಫಲ್ಯ ಅನುಭವಿಸಿದರು. ರಸೆಲ್ 15 ಎಸೆತಗಳಿಂದ 24 ರನ್ ಹೊಡೆದರೆ ನಾರಾಯಣ್ ಗಳಿಕೆ 1 ರನ್ ಮಾತ್ರ.
ರಿಂಕು ಸಿಂಗ್ ಕೊನೆಯ ಓವರಿನಲ್ಲಿ ಔಟಾಗುವಾಗ 46 ರನ್ ಗಳಿಸಿದ್ದರು. 35 ಎಸೆತ ಎದುರಿಸಿದ್ದ ಅವರು 4 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದ್ದರು.
ವೇಗಿ ಭುವನೇಶ್ವರ ಕುಮಾರ್ ಮತ್ತು ಜಾನ್ಸೆನ್ ಆರಂಭದಲ್ಲಿ ಬಿಗು ದಾಳಿ ಸಂಘಟಿಸಿದ್ದರು. ಭುವನೇಶ್ವರ್ ಮೊದಲ ಎರಡು ಓವರ್‌ಗಳಲ್ಲಿ ಕೇವಲ 12 ರನ್ ಬಿಟ್ಟುಕೊಟ್ಟಿದ್ದರೆ ಜಾನ್ಸೆನ್ ಎರಡು ವಿಕೆಟ್ ಹಾರಿಸಿದ್ದರು.