Advertisement

ಸಾವಿರಾರು ಮಂದಿಗೆ ಅನ್ನದಾತರಾಗಿದ್ದ ಕೆ.ಕೆ. ಪೈ

10:43 PM Jan 13, 2022 | Team Udayavani |

ಕೆ.ಕೆ. ಪೈ ವಿಧಿವಶರಾಗಿ ಇಂದಿಗೆ ಹದಿಮೂರು ವರ್ಷಗಳಾದವು. ತಾವು ಕೊನೆಯುಸಿರೆಳೆಯುವ ವರೆಗೂ ಎಲ್ಲ ವಿಷಯಗಳಲ್ಲಿ ಆಸಕ್ತಿ ವಹಿಸುತ್ತಿದ್ದ ಮತ್ತು ಎಲ್ಲರನ್ನು ಕರೆದು ಕರೆದು ಮಾತನಾಡಿಸುತ್ತಿದ್ದ  ಕೆ.ಕೆ. ಪೈ ಈಗಲೂ ಇದ್ದಾರೆ ಎಂದೆನಿಸುತ್ತದೆ. ಜನರೊಂದಿಗೆ ಯಾವಾಗಲೂ ಬೆರೆತು ಬದುಕುತ್ತಿದ್ದ  ಕೆ.ಕೆ. ಪೈ ಅವರನ್ನು ಮರೆಯಲು ಸಾಧ್ಯವಿಲ್ಲ.

Advertisement

ಕೆ.ಕೆ. ಪೈ ಸಿಂಡಿಕೇಟ್‌ ಬ್ಯಾಂಕ್‌ನ ಅಧ್ಯಕ್ಷರಾಗಿದ್ದಾಗ ನಾಡಿಗೆ ನೀಡಿದ ಬಹು ದೊಡ್ಡ ಕೊಡುಗೆಯೆಂದರೆ ಉದ್ಯೋಗ ಸೃಷ್ಟಿ. ಸಾವಿರಾರು ಕುಟುಂಬಗಳ ಪಾಲಿಗೆ ಬ್ಯಾಂಕ್‌ನಲ್ಲಿ ಉದ್ಯೋಗ ನೀಡುವ ಮೂಲಕ ಅವರು ಅನ್ನದಾತರಾದರು.

ಸಾವಿರಾರು ಮಂದಿಗೆ ಕೆ.ಕೆ. ಪೈ ಅನ್ನದಾತರಾದು ದರಿಂದ 1998ರಲ್ಲಿ ಉಡುಪಿಯಲ್ಲಿ  ನಡೆದ ಸಾರ್ವ ಜನಿಕ ಸಮ್ಮಾನ ಸಮಾರಂಭದಲ್ಲಿ  ಕೆ.ಕೆ. ಪೈಯವರಿಗೆ ಚಿನ್ನದ ಬಟ್ಟಲನ್ನು ಉಡುಗೊರೆಯಾಗಿ ನೀಡಿ ಸಮ್ಮಾನಿಸಲಾಯಿತು.

ವಂಚಿತರಿಗೆ ಅವಕಾಶ: ಕೆ.ಕೆ. ಪೈ ಸಿಂಡಿಕೇಟ್‌  :

ಬ್ಯಾಂಕ್‌ನಲ್ಲಿ  ತಾವು ಅಧ್ಯಕ್ಷರಾಗಿದ್ದಾಗ (1970 ರಿಂದ 1978) 14,000ಕ್ಕಿಂತಲೂ ಜಾಸ್ತಿ ಯುವಕ- ಯುವತಿಯರಿಗೆ ಬ್ಯಾಂಕ್‌ನಲ್ಲಿ ಉದ್ಯೋಗ ನೀಡಿ ದರು. ಆದರಿಂದ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆದವರಲ್ಲಿ ಹೆಚ್ಚಿನವರು ಎಸೆಸೆಲ್ಸಿವರೆಗೆ ಮಾತ್ರ ಕಲಿತಿದ್ದ ಬಡ ಕುಟುಂಬಗಳಿಗೆ ಸೇರಿದ ಯುವಕ- ಯುವತಿಯರಾಗಿದ್ದರು. ಉದ್ಯೋಗ ನೀಡುವಾಗ ಬಡ ಕುಟುಂಬಗಳಿಗೆ ಮತ್ತು ತಮ್ಮ ಜೀವನೋ

Advertisement

ಪಾಯಕ್ಕೆ  ನಿಜವಾಗಿ ಕೆಲಸ ಬೇಕಾದವರಿಗೆ ಕೆ.ಕೆ. ಪೈ ಆದ್ಯತೆ ನೀಡಿದ್ದರು. ವಂಚಿತರಿಗೆ ಅವಕಾಶ ಒದಗಿಸಿ ಆ ಮೂಲಕ ಅವರ ಕುಟುಂಬಗಳಿಗೆ ಜೀವನೋಪಾಯ ಒದಗಿಸಿದರು. ವಂಚಿತ ವರ್ಗಗಳಿಗೆ ಮತ್ತು ಬಡ ಕುಟುಂಬಗಳಿಗೆ ಸೇರಿದವರಿಗೆ ಉದ್ಯೋಗ ನೀಡಿದ ಫ‌ಲವಾಗಿ ಆ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿತು. ಈ ರೀತಿ ಉದ್ಯೋಗ ಪಡೆದವರಿಗೆಲ್ಲ  ಕೆ.ಕೆ. ಪೈ ಅನ್ನದಾತರಾದರು.

ಪ್ರತಿಭೆಗಳನ್ನು ಗುರುತಿಸಿ ಕೂಡ ಕೆ.ಕೆ. ಪೈ ಬ್ಯಾಂಕ್‌ನಲ್ಲಿ  ಉದ್ಯೋಗ ನೀಡುತ್ತಿದ್ದರು. ನಾನು ಕೂಡ 1971ರಲ್ಲಿ  ಕೆ.ಕೆ. ಪೈಯವರಿಂದ ಬ್ಯಾಂಕ್‌ನಲ್ಲಿ  ಅಧಿಕಾರಿ ಹುದ್ದೆ ಪಡೆದೆ. ನನಗೆ ನಿಜವಾಗಿಯೂ ಕೆಲಸದ ಆವಶ್ಯಕತೆಯಿತ್ತು. ನನಗೆ ವಿದ್ಯಾರ್ಥಿ ಯಾಗಿರುವಾಗಲೇ ಬರೆಯುವ ಅಭ್ಯಾಸವಿತ್ತು. ಬ್ಯಾಕಿಂಗ್‌ ಮತ್ತು ಆರ್ಥಿಕ ವಿಷಯಗಳ ಕುರಿತಂತೆ ನಾನು ಬರೆದ ಲೇಖನಗಳು ಪ್ರಕಟ ವಾಗಿದ್ದ ಪತ್ರಿಕೆಗಳ ಪ್ರತಿಗಳನ್ನು ಹಿಡಿದುಕೊಂಡು ಹೋಗಿ ಅವುಗಳ ಲ್ಲಿದ್ದ ನನ್ನ ಲೇಖನಗಳನ್ನು ಸಿಂಡಿ

ಕೇಟ್‌ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಕೆ.ಕೆ. ಪೈಯವರಿಗೆ ತೋರಿಸಿದೆ. ಅವರು ಇವುಗಳನ್ನು ನೋಡಿ “ಉದಯವಾಣಿ’ಯಲ್ಲಿ ನಿಮ್ಮ ಲೇಖನ ಗಳನ್ನು ಓದುತ್ತಿರುತ್ತೇನೆ ಎಂದು ಹೇಳಿದರು. ಕೆಲಸಕ್ಕಾಗಿ ಕೆ.ಕೆ. ಪೈಯವರ ಕೈಯಲ್ಲೇ ಅರ್ಜಿಯನ್ನು ಕೊಟ್ಟು ಬಿಟ್ಟೆ. ಅವರು ಅದರ ಮೇಲೆ ಏನನ್ನೋ ಬರೆದರು. ನಾನು ಹಿಂದಿರುಗಿದ ಕೆಲವೇ ದಿನಗಳಲ್ಲಿ  ನನಗೆ ನೇಮಕಾತಿ ಆದೇಶ ಲಭಿಸಿತು. ಹೀಗೆ ಕೆ.ಕೆ. ಪೈ ನನಗೂ ಅನ್ನದಾತರಾದರು.

ಪ್ರತಿಭೆ ಆಧಾರಿತ ಆಯ್ಕೆ : ಕೆ.ಕೆ. ಪೈ  ಬ್ಯಾಂಕ್‌ನಲ್ಲಿ  ಕೆಲಸ ಕೊಡುವಾಗ ಅಭ್ಯರ್ಥಿಗಳ ಪ್ರತಿಭೆಗಳಿಗೂ ಮಹತ್ವ ನೀಡುತ್ತಿದ್ದರು. ಪ್ರತಿಭೆ ಆಧಾರಿತ ಆಯ್ಕೆಗೂ ಕೆ.ಕೆ.ಪೈ ಬಹಳಷ್ಟು ಮಹತ್ವ ನೀಡಿದರು. ಕ್ರಿಕೆಟರ್‌, ವೇಟ್‌ಲಿಫ್ಟರ್‌ ಮತ್ತಿತರ ಕ್ರೀಡಾಪಟುಗಳು, ಕನ್ನಡ – ಇಂಗ್ಲಿಷ್‌ ಲೇಖಕರು, ಸಾಹಿತಿಗಳ ಮಕ್ಕಳು, ಪತ್ರಕರ್ತರು, ಜಾದುಗಾರರು ಹೀಗೆ ಎಲ್ಲ ಕ್ಷೇತ್ರಗಳ ಪ್ರತಿಭಾವಂತರನ್ನು ಗುರುತಿಸಿ ಇವರಿಗೆಲ್ಲ ಕೆ.ಕೆ. ಪೈಯವರು ಉದ್ಯೋಗ ನೀಡಿದರು. ಹಾಗೆಯೇ ರೈತರ ಮಕ್ಕಳು, ವಿಧವೆಯರು, ಅಂಗವಿಕಲರು ಇವರಿಗೆಲ್ಲ  ಕೆ.ಕೆ. ಪೈ ಕೆಲಸ ನೀಡಿದರು. ಬ್ಯಾಂಕ್‌ನ ಕೆಲಸಕ್ಕೆ  ಕೆ.ಕೆ. ಪೈ ಸ್ವತಃ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದ್ದುದನ್ನು ನಾನಿಲ್ಲಿ ಉಲ್ಲೇಖೀಸಲೇಬೇಕು.

ಸ್ವಂತ ಉದ್ಯೋಗಗಳ ಸೃಷ್ಟಿ: ಸ್ವಂತ ಉದ್ಯೋಗ ಗಳ ಮೂಲಕವೂ ಕೆ.ಕೆ. ಪೈ ಸಾವಿರಾರು ಮಂದಿಗೆ ಅನ್ನದಾತರಾದರು. ಬ್ಯಾಂಕ್‌ನಲ್ಲಿ  ತಾನು ಹಮ್ಮಿ ಕೊಂಡಿದ್ದ ಸ್ವಂತ ಉದ್ಯೋಗ ಪ್ರಯತ್ನ (Self Emplayment Endavour)ವೆಂಬ ಯೋಜನೆಯ ಮೂಲಕ 1,400 ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗ ಆರಂಭಿಸಲು ಆರ್ಥಿಕ ನೆರವು ಮತ್ತು ತಾಂತ್ರಿಕ ಮಾರ್ಗದರ್ಶನ ನೀಡಿದರು. ಈ 1,400 ಸ್ವಂತ ಉದ್ಯೋಗಿಗಳಿಂದಾಗಿ 4,200 ಇತರ ಉದ್ಯೋಗಗಳು ಸೃಷ್ಟಿಯಾದವು.

ಈ ರೀತಿ  ಸ್ವಂತ ಉದ್ಯೋಗ ಸೃಷ್ಟಿಗಾಗಿ ನೀಡಿದ ಅಪೂರ್ವ ಕೊಡುಗೆಗಾಗಿ ಕೆ.ಕೆ. ಪೈ ಯವರಿಗೆ ಅಂತಾರಾಷ್ಟ್ರೀಯ ಜೇಸಿ ಸಂಸ್ಥೆಯು ಮೆರಿ ಟೋರಿಯಸ್‌ ಸರ್ವಿಸ್‌ ಪ್ರಶಸ್ತಿ  (Meritorious Service Award) ನೀಡಿ ಗೌರವಿಸಿತು. ಈ ಪ್ರಶಸ್ತಿ ಸತತವಾಗಿ ಎರಡು ವರ್ಷ ಅಂದರೆ 1975 ಮತ್ತು 1976ರಲ್ಲಿ  ಕೆ.ಕೆ. ಪೈಯವರಿಗೆ ಲಭಿಸಿತು.

ಅಷ್ಟೇ ಅಲ್ಲದೆ ಸ್ವಂತ ಉದ್ಯೋಗ ಸೃಷ್ಟಿಗಾಗಿ ಕೆ.ಕೆ. ಪೈಯವರಿಗೆ “ನಯೇ ಪ್ರಶಸ್ತಿ’  (NAYE AWARD) ಕೂಡ ದೊರೆಯಿತು.

1970ರ ದಶಕದಲ್ಲಿ  ಉಡುಪಿಯ ಎರಡು ಮಠಗಳ ಯುವ ಯತಿಗಳು ಪೀಠ ತ್ಯಾಗ ಮಾಡಿ ಉದ್ಯೋಗಿಗಳಾಗಲು ಬಯಸಿದರು. ಅವರಿಗೆ ಗೌರವಯುತ ಜೀವನ ನಡೆಸಲು ಉದ್ಯೋಗದ ಆವಶ್ಯಕತೆಯಿತ್ತು. ಆಗ ಕೆ.ಕೆ. ಪೈ ಅವರ ನೆರವಿಗೆ ಬಂದರು. ಅವರಿಗೆ ಬ್ಯಾಂಕ್‌ನಲ್ಲಿ  ಕೆಲಸ ನೀಡಿ ಅವರ ಪಾಲಿಗೂ ಕೆ.ಕೆ. ಪೈ ಅನ್ನದಾತರಾದರು.

ಈ ರೀತಿ ಬಡ ಕುಟುಂಬಗಳಿಗೆ ಮತ್ತು ಸಮಾಜದ ವಂಚಿತ ವರ್ಗಗಳಿಗೆ ಮತ್ತಿತರ ಉದ್ಯೋಗದ ನಿಜವಾದ ಆವಶ್ಯಕತೆಯಿದ್ದವರಿಗೆ ಕೆಲಸ ನೀಡಿ ಅವರ ಕುಟುಂಬಗಳ ಆರ್ಥಿಕ ಬಲವರ್ಧನೆಗೆ ಕಾರಣರಾದರು. ಮತ್ತು ಅವರೆಲ್ಲರ ಹೃದಯಗಳಲ್ಲಿ  ಸ್ಥಾನ ಪಡೆದ ನಿಜವಾದ ಅನ್ನದಾತರಾದರು.

-ಡಾ| ಕೆ.ಕೆ. ಅಮ್ಮಣ್ಣಾಯ

Advertisement

Udayavani is now on Telegram. Click here to join our channel and stay updated with the latest news.

Next