Advertisement

Kittur Utsav 2023: ಕಿತ್ತೂರು ಉತ್ಸವಕ್ಕೆ ಚಾಲನೆ

06:42 PM Oct 25, 2023 | Team Udayavani |

ಚನ್ನಮ್ಮನ ಕಿತ್ತೂರು: ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮ 1824ರಲ್ಲಿ ಬ್ರಿಟಿಷರೊಂದಿಗೆ ಹೋರಾಡಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಆಚರಿಸುವ ವಿಜಯೋತ್ಸವ ಸವಿನೆನಪಿಗಾಗಿ ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ರಾಜ್ಯಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವ-2023ಕ್ಕೆ ವಿಜಯ ಜ್ಯೋತಿ ಬರಮಾಡಿಕೊಂಡು ಸಂಸ್ಥಾನದ ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಅದ್ಧೂರಿ ಚಾಲನೆ ನೀಡಲಾಯಿತು.

Advertisement

ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಬೆಳಗ್ಗೆ ಚನ್ನಮ್ಮನ ಕಿತ್ತೂರಿಗೆ ಆಗಮಿಸಿದ ವಿಜಯ ಜ್ಯೋತಿಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ನಂತರ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ಶಾಸಕ ಬಾಬಾಸಾಹೇಬ್‌ ಪಾಟೀಲ, ಸಂಸದೆ ಮಂಗಲಾ ಅಂಗಡಿ, ಬೆಳಗಾವಿ ಉತ್ತರ ಶಾಸಕ ಆಸಿಫ್‌(ರಾಜು) ಸೇಠ್, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ರಾಜ್ಯಸಭಾ ಸದಸ್ಯ‌ ಈರಣ್ಣ ಕಡಾಡಿ ಸೇರಿದಂತೆ ಎಲ್ಲ ಗಣ್ಯರು ರಾಣಿ ಚನ್ಮಮ್ಮ ವೃತ್ತದಲ್ಲಿರುವ ರಾಣಿ ಚನ್ಮಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಇದಕ್ಕೂ ಮುಂಚೆ ಕಿತ್ತೂರಿನಲ್ಲಿರುವ ಗಡಾದ ಮರಡಿ ಮೇಲೆ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ ನೆರವೇರಿಸಿದರು. ವಿವಿಧ ಕಲಾತಂಡಗಳ ಕಲಾ ವಾಹಿನಿ ಮೆರವಣಿಗೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಚಾಲನೆ
ನೀಡಿದರು. ಕಲಾ ಮೇಳದಲ್ಲಿ ವಿವಿಧ ತಾಲೂಕುಗಳ ಆಡಳಿತದಿಂದ ಕಿತ್ತೂರು ಚನ್ನಮ್ಮ, ಕಿತ್ತೂರು ಕೋಟೆ, ಹಿಡಕಲ್‌ ಜಲಾಶಯಗಳ ಸಾಂಸ್ಕೃತಿಕ ರೂಪಕಗಳು ಗಮನ ಸೆಳೆದವು.

ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ: ಮೊದಲ ಬಾರಿ ಆವರಣದೊಳಗೆ ಕೋಟೆ ಸಂರಕ್ಷಣೆ ಗೋಡೆಗೆ ಹೊಂದಿಕೊಂಡು ಸ್ಥಾಪಿಸಿರುವ ವಸ್ತು ಪ್ರದರ್ಶನ ಮೇಳಕ್ಕೆ ಶಾಸಕ ಬಾಬಾಸಾಹೇಬ್‌ ಪಾಟೀಲ, ಜಿಲ್ಲಾಮಟ್ಟದ ಅಧಿಕಾರಿಗಳು ಚಾಲನೆ ನೀಡಿದರು. ತೋಟಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ಸಂಸದೆ ಮಂಗಲಾ ಅಂಗಡಿ ಉದ್ಘಾಟಿಸಿದರು. ಹಲವಾರು ಚಿತ್ರ ಕಲಾವಿದರು ವಿಶೇಷ ಕೌಶಲ ಬಳಸಿ ವಿಭಿನ್ನವಾಗಿ ಚಿತ್ರ ಬಿಡಿಸಿ ಗಮನ ಸೆಳೆದರು. ಕಿತ್ತೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ತುಂಬುಗೆರೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ದೋಣಿ ವಿಹಾರ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next