Advertisement

ಮಹಿಳಾ ನೀತಿಗೆ ಶೀಘ್ರ ಸಂಪುಟ ಒಪ್ಪಿಗೆ: ಉಮಾಶ್ರೀ

06:20 AM Mar 09, 2018 | |

ಬೆಂಗಳೂರು: ಮಹಿಳೆಯರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮಹಿಳಾ ನೀತಿಯನ್ನು ಜಾರಿಗೆ ತರಲಿದ್ದು ಈ ಸಂಬಂಧ ಕರಡು ಕೆಲ ದಿನಗಳಲ್ಲೇ ಸಿದ್ಧವಾಗಲಿದೆ. ಇದಕ್ಕೆ ಸದ್ಯದಲ್ಲೇ ಸಚಿವ ಸಂಪುಟದ ಒಪ್ಪಿಗೆ ಪಡೆದು ಮಹಿಳಾ ನೀತಿ ಅನುಷ್ಠಾನಗೊಳಿಸಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದರು.

Advertisement

ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿ ಇತರೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ನೀತಿ ರೂಪಿಸಲಾಗುತ್ತಿದ್ದು, ಶೀಘ್ರವೇ ಅನುಮೋದನೆ ಪಡೆಯಲಾಗುವುದು. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯ ರನ್ನು ಸಬಲರನ್ನಾಗಿಸಲು ಪೂರಕವಾಗಿ ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.

ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ: ಈ ಹಿಂದೆ ಒಂದರಿಂದ 10ನೇ ತರಗತಿವರೆಗಿನ ಉಚಿತ ಶಿಕ್ಷಣ ಜತೆಗೆ ಪದವಿ ಪೂರ್ವದಿಂದ ಸ್ನಾತಕೋತ್ತರವರೆಗೆ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ. ಮಹಿಳೆಯರ ಉದ್ಯಮ ಶೀಲತೆಗೂ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಲೈಂಗಿಕ ಕಾರ್ಯಕರ್ತೆಯರು ಸಂಕಷ್ಟದ ಜೀವನ ನಡೆಸುತ್ತಿದ್ದು, ಅವರ ಆ ಸ್ಥಿತಿಗೆ ಪುರುಷರು, ವ್ಯವಸ್ಥೆಯೇ ಕಾರಣ. ಮಹಿಳೆಯರೂ ಅವರನ್ನು ಅಗೌರವದಿಂದ ಕಾಣುವುದು ನೋವಿನ ಸಂಗತಿ. ಇಲಾಖೆ ವತಿಯಿಂದ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಸುಧಾರಣೆಗೆ ಪೂರಕ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.

Advertisement

ವಿಶ್ರಾಂತಿ: ಕೇಂದ್ರ ಸರ್ಕಾರದ “ನಿರ್ಭಯಾ ನಿಧಿ’ಯಡಿ ಬಿಎಂಟಿಸಿ ಬಸ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಬಸ್‌
ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ
ತುರ್ತು ಚಿಕಿತ್ಸೆಗಾಗಿ 176 ತಾಲೂಕುಗಳಲ್ಲೂ ವಿಶೇಷ ಚಿಕಿತ್ಸಾ ಘಟಕ ಸ್ಥಾಪಿಸಲಾಗುತ್ತಿದೆ ಒಟ್ಟಾರೆ ಮಹಿಳಾ
ಸಬಲೀಕರಣಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂದರು.

ಮಹಿಳಾ ಅಭಿವೃದ್ಧಿಗೆ ಶ್ರಮಿಸಿದ ಸಂಸ್ಥೆಗಳು, ವ್ಯಕ್ತಿಗಳು, ಕಲೆ, ಸಾಹಿತ್ಯ, ಕ್ರೀಡೆ, ಶಿಕ್ಷಣ ಕ್ಷೇತ್ರದ ಸಾಧಕಿಯರು,
ವೀರಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಗೆಯೇ ಜಿಲ್ಲೆ, ತಾಲೂಕು
ಹಾಗೂ ಕಂದಾಯ ವಿಭಾಗವಾರು ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳಿಗೂ ಪ್ರಶಸ್ತಿ ನೀಡಲಾಯಿತು. ಇದೇ
ಸಂದರ್ಭದಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ತರಬೇತಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
ನೆರವೇರಿಸಲಾಯಿತು.

ಬೈಕ್‌ಗಳಲ್ಲಿ ಊಟ ವಿತರಣೆ
ರಾಜ್ಯದ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ “ಮಾತೃಪೂರ್ಣ’ ಯೋಜನೆ ಯಶಸ್ವಿಯಾಗಿದೆ. ಘಟ್ಟ ಪ್ರದೇಶಗಳಲ್ಲಿ ಕೆಲವೆಡೆ ತುಸು ತೊಂದರೆ ಎದುರಾಗಿತ್ತು. ಹೊನ್ನಾವರದಲ್ಲಿ ಬೈಕ್‌ನಲ್ಲಿ ಬಿಸಿಯೂಟ ತಲುಪಿಸುವ ಪ್ರಯೋಗ ಶುರುವಾಗಿದೆ. ಈ ಪ್ರಯತ್ನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಫ‌ಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ.

– ಉಮಾಶ್ರೀ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next