Advertisement

Kittur: ಕಿತ್ತೂರು ಉತ್ಸವಕ್ಕೆ ಬರೆ ಎಳೆದ ಬರ; ಈ ಬಾರಿ ಸಂಭ್ರಮ ಡೌಟ್‌?

05:53 PM Sep 25, 2023 | Team Udayavani |

ಚನ್ನಮ್ಮನ ಕಿತ್ತೂರು: ಬರದ ಹಿನ್ನೆಲೆಯಲ್ಲಿ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವ ಆಚರಣೆ ಈ ಬಾರಿ ಅನುಮಾನ! ಪ್ರತಿವರ್ಷವೂ ಈ ಹೊತ್ತಿಗಾಗಲೇ ಕನಿಷ್ಠ ಒಂದೆರಡಾದರೂ ಪೂರ್ವಭಾವಿ ಸಭೆಗಳು ಜರುಗಿ, ಉತ್ಸವದ ಆಚರಣೆಗೆ ಅಗತ್ಯವಿರುವ ಸಿದ್ಧತೆಗಳು ಚಾಲ್ತಿಯಲ್ಲಿರುತ್ತಿದ್ದವು. ಆದರೆ ಉತ್ಸವದ ದಿನಾಂಕ ಕೆಲವೇ ದಿನಗಳ ಅಂತರದಲ್ಲಿದ್ದರೂ ಉತ್ಸವದ ಬಗ್ಗೆ ಅಧಿಕಾರಿಗಳು, ಶಾಸಕರು ಉತ್ಸಾಹವನ್ನೇ ತೋರಿಸುತ್ತಿಲ್ಲ. ಒಂದೂ ಸಭೆ ನಡೆದಿಲ್ಲ. ಪೂರ್ವ ಸಿದ್ಧತೆಯೂ ಚುರುಕಾಗಿಲ್ಲ.
ಹೀಗಾಗಿ ಉತ್ತರ ಕರ್ನಾಟಕದ ದಸರಾ ಎಂದೇ ಹೆಸರಾಗಿರುವ ಕಿತ್ತೂರು ಉತ್ಸವದ ಆಚರಣೆ ಈ ಬಾರಿ ಅನುಮಾನ ಎನ್ನುವ
ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Advertisement

ಕಳೆದ ಬಾರಿ ಮಾಜಿ ಶಾಸಕ ಮಹಾಂತೇಶ ದೊಡಗೌಡರ, ನಿಕಟಪೂರ್ವ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ, ಸ್ಥಳೀಯ
ಮಠಾಧೀಶರು, ಚೆನ್ನಮ್ಮಳ ಅಭಿಮಾನಿಗಳು ಒಟ್ಟುಗೂಡಿ ರಾಜ್ಯ ಮಟ್ಟದ ಉತ್ಸವ ಆಚರಣೆಗೆ ಶ್ರಮಿಸಿದ್ದರು. ಮುಖ್ಯ ವೇದಿಕೆಯೊಂದಿಗೆ ಸಮಾನಾಂತರ ಮೂರು ಭವ್ಯ ವೇದಿಕೆಗಳನ್ನು ನಿರ್ಮಿಸಿ ‘ಸ್ವಾತಂತ್ರ್ಯದ ಬೆಳ್ಳಿಚುಕ್ಕಿ’ಯ ಸಾಹಸಗಾಥೆಯನ್ನು ಸ್ಮರಿಸಿಕೊಳ್ಳಲಾಗಿತ್ತು. ಆದರೆ ಈ ಬಾರಿ ಬರದ ಹಿನ್ನೆಲೆಯಲ್ಲಿ ಸರಳ ಉತ್ಸವ ಆಗುವುದೂ ಅನುಮಾನವೇ ಎನ್ನುವಂತಾಗಿದೆ.

ಬೈಲಹೊಂಗಲ ಉಪ ವಿಭಾಗಾಧಿಕಾರಿ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ ಫಕೀರಪುರ ಈ ಕುರಿತು
ಮಾತನಾಡಿ, ಈಗಾಗಲೇ ಹಂಪಿ ಉತ್ಸವವನ್ನು ತಡೆಹಿಡಿಯಲಾಗಿದೆ. ಸದ್ಯಕ್ಕೆ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ, ಇನ್ನಿತರ ಸಿದ್ಧತೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಯಾವುದೇ ಮುನ್ಸೂಚನೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಆದರೂ ಕೋಟೆ ಆವರಣದಲ್ಲಿ ಸಹಜ ಸ್ವಚ್ಛತೆ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

ಸೆ. 26 ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಆಡಳಿತ ಯಾವ ತೀರ್ಮಾನಕ್ಕೆ ಬರುತ್ತದೆ ಎಂದು ಈ ಭಾಗದ ಸಾರ್ವಜನಿಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೆ. 26 ರಂದು ಕಿತ್ತೂರು ಉತ್ಸವ ಆಚರಣೆ ಕುರಿತು ಚರ್ಚಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಉತ್ಸವದ ಆಚರಣೆ ಕುರಿತು, ಯಾವಾಗ ಪೂರ್ವಭಾವಿ ಸಭೆ ಕರೆಯಬೇಕು ಮತ್ತು ಎಲ್ಲಿ ಕರೆಯಬೇಕು ಎಂಬುದರ ಕುರಿತು ಚರ್ಚೆಗಳಾಗುತ್ತವೆ.
ಪ್ರಭಾವತಿ ಫಕೀರಪುರ, ಉಪ ವಿಭಾಗಾಧಿಕಾರಿ ಮತ್ತು ಆಯುಕ್ತರು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ.

Advertisement

*ಬಸವರಾಜ ಚಿನಗುಡಿ

Advertisement

Udayavani is now on Telegram. Click here to join our channel and stay updated with the latest news.

Next