Advertisement

Kittur Chennamma: ಚದುರಿದ ಚಿತ್ರಗಳಂತಾದ ಕಿತ್ತೂರು ರಾಣಿ ಚನ್ನಮ್ಮ ವಂಶಸ್ಥರು

10:32 AM Oct 14, 2023 | Team Udayavani |

ಧಾರವಾಡ: ನಾಡು-ನುಡಿ ಗಾಗಿ ಪ್ರಾಣ ತ್ಯಾಗ ಮಾಡಿ ತಮ್ಮ ಸಂಪತ್ತು, ರಾಜ ವೈಭೋಗವನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟು ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಿದ ಅನೇಕ ರಾಜಮನೆತನಗಳು ಕರ್ನಾಟಕದಲ್ಲಿವೆ. ಅವುಗಳ ಪೈಕಿ ಕೆಲವರು ಈಗಲೂ ಒಂದಿಷ್ಟು ಆಸ್ತಿಪಾಸ್ತಿ ವೈಭವ ಇಟ್ಟುಕೊಂಡಿದ್ದಾರೆ. ಆದರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನವೇ ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ್ದ ಕಿತ್ತೂರು ರಾಣಿ ಚನ್ನಮ್ಮನ ವಂಶಸ್ಥರು ಮಾತ್ರ ಸರಕಾರದ ದಿವ್ಯ ನಿರ್ಲಕ್ಷéಕ್ಕೆ ಒಳಗಾಗಿ ಬೇಸರಗೊಂಡಿದ್ದಾರೆ.

Advertisement

ಹೌದು, ಇಡೀ ದೇಶವೇ ತಿರುಗಿ ನೋಡುವಂಥ ಸ್ವಾತಂತ್ರ ಹೋರಾಟವನ್ನು ಮೊಟ್ಟಮೊದಲು ಆರಂಭಿಸಿದ ಕಿತ್ತೂರು ರಾಣಿ ಚನ್ನಮ್ಮನ ವಂಶಜರು ಬ್ರಿಟಿಷರ ದಾಳಿಯ ಬಳಿಕ ಚೆಲ್ಲಾಪಿಲ್ಲಿ

ಯಾಗಿ ಹೋಗಿರುವುದು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ರಾಜ ವೈಭೋಗ, ವಜ್ರ ವೈಢೂರ್ಯ, ಬಂಗಾರ-ಬೆಳ್ಳಿ ಮಾತ್ರವಲ್ಲದೆ, 10 ಲಕ್ಷ ಎಕ್ರೆಯಷ್ಟು ಉತ್ತಿ ಬಿತ್ತಿ ಬೆಳೆಯಬಲ್ಲ ಭೂಮಿ ಹೊಂದಿದ್ದ ಕಿತ್ತೂರು ನಾಡಿನ ಒಡೆಯರು ಈಗ ಸರಳ ಜೀವನ ನಡೆಸಿ ಮಾದರಿಯಾಗಿದ್ದಾರೆ. ಆದರೆ ಸರಕಾರ ಅವರನ್ನು ನಡೆಸಿಕೊಳ್ಳುವ ರೀತಿ ನಿಜಕ್ಕೂ ಚನ್ನಮ್ಮನ ಅಭಿಮಾನಿಗಳಿಗೂ ಬೇಸರ ತರಿಸಿದೆ.

ಕಿತ್ತೂರು ವಾಡೆಗೆ ಪ್ರತಿಯಾಗಿ ಅವ ರೆಲ್ಲ ಸಂಪತ್ತನ್ನು ಬಿಟ್ಟು ಭೂಗತರಾಗಿ ಹೋರಾಟ ಸಂಘಟಿಸುತ್ತ ಚದುರಿದ ಚಿತ್ರಗಳಾಗಿ ಹೋಗಿದ್ದ ಚನ್ನಮ್ಮಾಜಿ ವಂಶಸ್ಥರು ಈಗ ಬೆಳಗಾವಿ ಜಿಲ್ಲೆ ಖಾನಾಪುರ, ಬೆಳಗಾವಿ ನಗರ ಮತ್ತು ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ ಮುಂತಾದ ವಿವಿಧ ಕಡೆಗಳಲ್ಲಿ ವಾಸವಾಗಿದ್ದಾರೆ. ಆದರೆ ಸೌಜನ್ಯಕ್ಕೂ ಸರಕಾರ ಅವರನ್ನು ಮಾತನಾಡಿಸುತ್ತಿಲ್ಲ. ಈ ಬೇಸರ ಚನ್ನಮ್ಮನ ವಂಶದ ಕುಡಿಗಳಿಗೆ ತೀವ್ರ ಇರಿಸುಮುರುಸು ತಂದಿಟ್ಟಿದೆ.

ಉತ್ಸವಕ್ಕಿಲ್ಲ ಗೌರವದ ಆಹ್ವಾನ:

Advertisement

15 ವರ್ಷಗಳಿಂದ ಪ್ರತಿ ಅ.23 ಮತ್ತು 24ರಂದು ಕಿತ್ತೂರಿನ ಮೊದಲ ಯುದ್ಧ ಗೆದ್ದ ಸಂಭ್ರಮಾಚರಣೆ ನಿಮಿತ್ತ ನಡೆಯುವ ಕಿತ್ತೂರು ಉತ್ಸವದಲ್ಲಿ ಕಿತ್ತೂರು ಕರ್ನಾಟಕದ ಜನರೆಲ್ಲ ಸಂಭ್ರಮ

ದಿಂದ ಪಾಲ್ಗೊಳ್ಳುತ್ತಾರೆ. ಸರಕಾರ ಒಂದಿಷ್ಟು ಹಣ ಖರ್ಚು ಮಾಡಿ ವಿವಿಧ ಸಾಂಸ್ಕೃತಿಕ ಮತ್ತು ಅರ್ಥ ಪೂರ್ಣ ಕಾರ್ಯಕ್ರಮಗಳನ್ನು ಕೂಡ ಮಾಡು

ತ್ತದೆ. ಆದರೆ ಇಂತಹ ಸಂಭ್ರಮಾಚರಣೆಗೆ ಚನ್ನಮ್ಮ ವಂಶಸ್ಥರನ್ನು ಇಂದಿಗೂ ಸರಿಯಾಗಿ ಆಹ್ವಾನಿಸದೆ ನಿರ್ಲಕ್ಷé ತೋರುತ್ತ ಬಂದಿದೆ. ಉತ್ಸವದ ಪೂರ್ವಭಾವಿ ಸಭೆಗೂ ಅವರಿಗೆ ಆಹ್ವಾನ ನೀಡುತ್ತಿಲ್ಲ.

ಕಿತ್ತೂರು ದೇಶಗತಿ ಪರವಾಗಿ ನಡೆ ಯುವ ಇದೊಂದು ಕಾರ್ಯಕ್ರಮಕ್ಕೂ ಚನ್ನಮ್ಮನ ವಂಶಸ್ಥರನ್ನು ಸಂಸ್ಕೃತಿ ಇಲಾಖೆ ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಹೋಗಿ ಒಮ್ಮೆಯೂ ಆಹ್ವಾನ ನೀಡಿಲ್ಲ. ಮೈಸೂರು ಮಹಾರಾಜರಿಗೆ ಸಿಗುವಂತಹ ಯಾವುದೇ ಗೌರವ ಇವರಿಗೆ ಸಿಗುತ್ತಿಲ್ಲ ಎನ್ನುವ ಕೊರಗು ವಂಶಸ್ಥರನ್ನು ಕಾಡುತ್ತಿದೆ.

ಸರಕಾರವೇ ನಿಯಮ ರೂಪಿಸಲಿ:

ಕಿತ್ತೂರು ಚನ್ನಮ್ಮನ ವಂಶಸ್ಥರನ್ನು ಅರಮನೆ ಚಟುವಟಿಕೆ, ಕಿತ್ತೂರು ಉತ್ಸವ, ಕಿತ್ತೂರು ಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳು, ಕಿತ್ತೂರು ಸೈನಿಕ ಶಾಲೆಯ ಆಡಳಿತ ಮಂಡಳಿ ವ್ಯವಹಾರ, ಚನ್ನಮ್ಮಾಜಿ ಜಯಂತಿ ಸಹಿತ ವರ್ಷದಲ್ಲಿ ಆಗಾಗ ನಡೆಯುವ ಸಭೆ, ಸಮಾರಂಭ, ಉತ್ಸವಗಳಿಗೆ ಶಿಷ್ಟಾಚಾರ ಬದ್ಧವಾಗಿ ಆಹ್ವಾನ ನೀಡಬೇಕು ಎನ್ನುವ ಕೂಗು ಚನ್ನಮ್ಮನ ವಂಶಸ್ಥರದ್ದು  ಹಾಗೂ  ಅಭಿಮಾನಿಗಳದ್ದಾಗಿದೆ.  ಇದಕ್ಕೆ ಸರಕಾರವೇ ನಿಯಮ ರೂಪಿಸಿ ಬೆಳಗಾವಿ ಜಿಲ್ಲಾಡಳಿತದ ಮೂಲಕ ಅದನ್ನು ಕಾನೂನು ಬದ್ಧಗೊಳಿಸಬೇಕಿದೆ ಎನ್ನುತ್ತಾರೆ ಚನ್ನಮ್ಮನ  ಮೊಮ್ಮಗ (8ನೇ ತಲೆಮಾರಿನ) ಬಾಳಾಸಾಹೇಬ ಶಂಕರರಾವ್‌ ದೇಸಾಯಿ.

 110 ಕೋ. ರೂ. ಪರಿಹಾರ ಕೊಡಿ:

ಕಿತ್ತೂರು ಚನ್ನಮ್ಮನ ವಂಶಸ್ಥರಿಗೆ ಸರಕಾರ 1968ರಲ್ಲಿ ಬೆಳಗಾವಿ ಸಮೀಪದ ನಿಟ್ಟೂರು ಗ್ರಾಮದ ಬಳಿ 108 ಎಕ್ರೆ ಅರಣ್ಯ ಪ್ರದೇಶ ನೀಡಿತ್ತು. ಆದರೆ ಇದು ಉಚಿತವಾಗಿ ಅಲ್ಲ, ಪ್ರತಿ ಎಕ್ರೆಭೂಮಿಗೂ ಇಂತಿಷ್ಟು ಎಂದು ಹಣ  ಕಟ್ಟಿಸಿಕೊಂಡಿತ್ತು. ಆದರೆ ಸೂಕ್ತ ಪರಿಹಾರ ನೀಡಬೇಕು ಎಂದು ಅಂದಿನ ಕಾಲಕ್ಕೆ 11 ಕೋಟಿ ರೂ.ಗಳಷ್ಟು ಒಂದೇ ಸಮಯಕ್ಕೆ ಪರಿಹಾರ ಭರ್ತಿ ಮಾಡಿಕೊಡುವಂತೆ ಸರಕಾರಕ್ಕೆ ಚನ್ನಮ್ಮನ ವಂಶಸ್ಥರು ಕೇಳಿದ್ದರು. ಈಗ ಅದು 110 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಆದರೆ ಆ ಬಾಕಿ ಇನ್ನು ಸರಕಾರದಲ್ಲಿಯೇ ಉಳಿದುಕೊಂಡಿದೆ. ಇದನ್ನಾದರೂ ಸರಕಾರ ಹಂತ ಹಂತವಾಗಿ ಕೊಡಬೇಕು ಎನ್ನುತ್ತಿದ್ದಾರೆ ಚನ್ನಮ್ಮಾಜಿಯ ವಂಶಸ್ಥರು.

ದೇಶಕ್ಕಾಗಿ ನಮ್ಮ ಪೂರ್ವಜರು ಕೊಟ್ಟ ಕೊಡುಗೆಯನ್ನೊಮ್ಮೆ ಸರಕಾರಗಳು ನೆನಪಿಸಿಕೊಳ್ಳಬೇಕು. ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ನಿರ್ಲಕ್ಷé ಒಳ್ಳೆಯದಲ್ಲ. ಮೈಸೂರು ದಸರಾಕ್ಕೆ ಸ್ವತಃ ಸಿಎಂ, ಸಚಿವರೇ ಹೋಗಿ ಅಲ್ಲಿನ ರಾಜರಿಗೆ ಆಮಂತ್ರಣ ಕೊಡುತ್ತಾರೆ. ಇದು ಇಲ್ಲೇಕೆ ಇಲ್ಲ? ನಮ್ಮ ಪೂರ್ವಜರ ತ್ಯಾಗಕ್ಕೆ ಸರಕಾರ ಕೊಡುವ ಗೌರವ ಇದೇನಾ?

– ಉದಯ ದೇಸಾಯಿ, ಚನ್ನಮ್ಮಾಜಿ ಮೊಮ್ಮಗ (9ನೇ ತಲೆಮಾರು) 

-ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next