Advertisement
ಮಲ್ಲಸರ್ಜನ ರಾಜ್ಯದ ವಾರ್ಷಿಕ ಉತ್ಪನ್ನ ಸುಮಾರು ಐದು ಲಕ್ಷ ರೂ.ಗಳಾಗಿತ್ತು. ಅವನು 1000 ಕುದುರೆ, 4000 ಕಾಲಾಳುಗಳಸೈನ್ಯವನ್ನು ಇಟ್ಟುಕೊಂಡಿದ್ದನು.ಅವನು ಪೇಶ್ವೆಯರಿಗೆ ವರ್ಷಕ್ಕೆ 70000 ನಝರಾನಾ ಕೊಡುತ್ತಿದ್ದನು. ಎಲ್ಲವೂ ಸರಳವಾಗಿ ಸಾಗಿತ್ತು. ಕಿತ್ತೂರು ಆಂತರಿಕ ವ್ಯವಹಾರ ಹಾಗೂ ಆಡಳಿತ ಪೂರ್ಣ ಸ್ವತಂತ್ರವಾಗಿತ್ತೆಂದು ಇತಿಹಾಸ ಹೇಳುತ್ತದೆ.
ದೇಸಾಯಿ ಹಾಗೂ ನೀಲಾಂಬಿಕೆ ದಂಪತಿ ಮಗಳು ರುದ್ರಮ್ಮ. ರಾಣಿ ರುದ್ರಮ್ಮ ಚಿಕ್ಕವಳಿದ್ದಾಗ ಆಂಗ್ಲ, ಉರ್ದು, ಪಾರ್ಷಿ ಹಾಗೂ
ಮರಾಠಿ ಭಾಷೆಗಳನ್ನು ಮಾತನಾಡುತ್ತಿದ್ದಳು. ಕತ್ತಿ ವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಅವರ ತಂದೆಯವರಿಂದ ಕಲಿತು ಯುದ್ಧ ಮಾಡುವುದರಲ್ಲಿ ನಿಪುಣಳಾಗಿದ್ದಳು. ವೀರರಾಣಿ ಚನ್ನಮ್ಮ ಮತ್ತು ರುದ್ರಮ್ಮ ವೀರವನಿತೆಯರು ಅಷ್ಟೇ ಅಲ್ಲ ತಮ್ಮ ದಾಂಪತ್ಯ ಜೀವನದಲ್ಲಿ ಸುಖ-ದುಃಖಗಳನ್ನು ಮೈಗೂಡಿಸಿಕೊಂಡು ದೇಸಾಯಿಯವರಿಗೆ ತಕ್ಕ ಸತಿಯರಾಗಿದ್ದರು. ಮಲ್ಲಸರ್ಜ ದೇಸಾಯಿ ಅವರಿಗೆ ಇಬ್ಬರು ಹೆಂಡರಾದರೂ ಇಬ್ಬರೂ ಒಡಹುಟ್ಟಿದ ಅಕ್ಕತಂಗಿಯರಂತೆ ಅನೋನ್ಯವಾಗಿದ್ದರು. ಇತಿಹಾಸದಲ್ಲಿ ಯಾವ ರಾಣಿಯರಲ್ಲಿಯೂ ಸಹಿತ ಸಿಗಲಾರದ ಹೊಂದಾಣಿಕೆ ರಾಣಿ ರುದ್ರಮ್ಮ ಮತ್ತು ರಾಣಿ ಚನ್ನಮ್ಮಾಜಿಯ ಮಧ್ಯ ಮೇಳೈಸಿತ್ತು. ಇದು ರಾಜ ಮಲ್ಲಸರ್ಜನ ಮತ್ತು ಸಂಸ್ಥಾನದ ಏಳ್ಗೆಗೆ ಪ್ರಮುಖ ಕಾರಣವಾಗಿತ್ತು. ಕಿತ್ತೂರು ರಾಜ ಮಲ್ಲಸರ್ಜ ದೇಸಾಯಿ ಹಾಗೂ ರಾಣಿ ರುದ್ರಮ್ಮಾ ಮೈಸೂರು ಹುಲಿ ಟಿಪ್ಪು ಸುಲ್ತಾನನ ಸೈನ್ಯದೊಂದಿಗೆ ದೇಶನೂರಿನ ರಣಭೂಮಿಯಲ್ಲಿ ವೀರಾವೇಶದಿಂದ ಹೋರಾಡಿ ಘನಗೋರ ಯುದ್ಧದಲ್ಲಿ ಗೆಲುವು ಸಾಧಿಸುತ್ತಾಳೆ. ನಂತರ ಕೆಲ ದಿನಗಳ ನಂತರ ಬದ್ರುತ್ ಜಮಾನ್ ಖಾನ್ ನೇತೃತ್ವದಲ್ಲಿ ಟಿಪ್ಪು ಸುಲ್ತಾನನ ಸೈನ್ಯ ಯುದ್ಧಕ್ಕೆ ಮುಂದಾದಾಗ ಕಿತ್ತೂರು ಸಂಸ್ಥಾನದ ಸೈನ್ಯದ ಮೇಲೆ ದಾಳಿ ನಡೆದಾಗ ಮಲ್ಲಸರ್ಜನನ್ನು ಯುದ್ಧದಲ್ಲಿ ಸೋಲಿಸುವ ಮೂಲಕ ಪೆರಿಯಾಪಟ್ಟಣದ ಕಪಾಳದುರ್ಗದಲ್ಲಿರುವ ಕೋಟೆಯಲ್ಲಿ ಬಂಧಿಸಿಡುತ್ತಾರೆ.
Related Articles
ರುದ್ರಮ್ಮ ಸೈನ್ಯ ಕಟ್ಟುವ ವೆಚ್ಚಕ್ಕೆ ಸೇನಾಧಿಪತಿ ತಿಮ್ಮನಗೌಡನಿಗೆ ನೀಡುವ ಮೂಲಕ ಮೂರು ವರ್ಷಗಳ ಕಾಲ ಮಲ್ಲಸರ್ಜ ದೇಸಾಯಿ ಟಿಪ್ಪುವಿನ ಬಂಧನದಲ್ಲಿದ್ದಾಗ ಕಿತ್ತೂರು ಸಂಸ್ಥಾನವನ್ನು ಸುಸ್ಥಿತಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ರಾಣಿ ರುದ್ರಮ್ಮ ಹೊರುತ್ತಾಳೆ.
Advertisement
ಮಲ್ಲಸರ್ಜ ದೇಸಾಯಿ 1788ರಲ್ಲಿ ಟಿಪ್ಪು ಸುಲ್ತಾನನ ಕಪಾಳದುರ್ಗದ ಕೋಟೆಯಿಂದ ತಪ್ಪಿಸಿಕೊಂಡು ಕೊಯಿಮತ್ತೂರು,ತಂಜಾವೂರು, ಶ್ರೀಶೈಲ ಮಾರ್ಗವಾಗಿ ಬಿಜಾಪುರಕ್ಕೆ ಬಂದು ಬಿಜಾಪುರದಿಂದ ಕಾಲ್ನಡಿಗೆಯಲ್ಲಿ ರಾಣಿ ರುದ್ರಮ್ಮ ಅತ್ತೆಯ
ಮನೆಯಾದ ಬಬಲೇಶ್ವರಕ್ಕೆ ಬರುತ್ತಾರೆ. ದೇಸಾಯಿ ಅವರು ಬಂದ ಸುದ್ದಿ ತಿಳಿದು ರಾಣಿ ರುದ್ರಮ್ಮ ಕಿತ್ತೂರಿನಿಂದ ದಿವಾನ ಚಿಂತೂಪಂತನನ್ನು ಬಬಲೇಶ್ವರಕ್ಕೆ ಕಳುಹಿಸಿ ದುಂಡು ಪಲ್ಲಕ್ಕಿಯಲ್ಲಿ ನೌಬತ್ತು ಬಾರಿಸುತ್ತ ಸುರಕ್ಷಿತವಾಗಿ ಕಿತ್ತೂರಿಗೆ ಕರೆದುಕೊಂಡು ಬಂದ ಕೀರ್ತಿ ರಾಣಿ ರುದ್ರಮ್ಮನವರಿಗೆ ಸಲ್ಲುತ್ತದೆ. ರಾಣಿ ರುದ್ರಮ್ಮನಿಗೆ ಎರಡು ಜನ ಮಕ್ಕಳಿದ್ದರು. ಮೊದಲನೆಯ ಮಗ ಶಿವಲಿಂಗರುದ್ರಸರ್ಜ. ಇನ್ನೊಬ್ಬರು ವೀರಭದ್ರ ಸರ್ಜಾ. ಇವರನ್ನು ಸಂಸ್ಥಾನದಲ್ಲಿ ಪ್ರೀತಿಯಿಂದ ಶಿವಲಿಂಗರುದ್ರಸರ್ಜನನ್ನು ಬಾಪುಸಾಹೇಬ ವೀರಭದ್ರ ಸರ್ಜನನ್ನು ಭಾವುಸಾಹೇಬ ಎಂದು ರಾಣಿ ಚೆನ್ನಮ್ಮನ ಮಗ ಶಿವಬಸವರಾಜನನ್ನು ಬಾಳಾಸಾಹೇಬ ಎಂದು ಕರೆಯುತ್ತಿದ್ದರು. 1816 ರಲ್ಲಿ ಮಲ್ಲಸರ್ಜ ದೇಸಾಯಿ ನಿಧನಾ ನಂತರದಲ್ಲಿ ರಾಣಿ ಚೆನ್ನಮ್ಮಳೇ ಮುಂದೆ ನಿಂತು ಸಹೋದರಿ ರುದ್ರಮ್ಮನ ಮಗನಾಗಿರುವ
ಶಿವಲಿಂಗರುದ್ರಸರ್ಜನಿಗೆ 1816ರಲ್ಲಿ ಕಿತ್ತೂರಿನ ದೊರೆಯ ಪಟ್ಟ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಸಂಸ್ಥಾನದ ಮೂರೂ ಜನ ಮಕ್ಕಳನ್ನು ರಾಣಿ ಚೆನ್ನಮ್ಮ ಬಹಳಷ್ಟು ಪ್ರೀತಿಯ ಉದಾರತೆಯಿಂದ ನೋಡಿಕೊಳ್ಳುತ್ತಿರುವ ಸಂದರ್ಭದಲ್ಲಿ ರುದ್ರಮ್ಮ ಸಂಸ್ಥಾನದಿಂದ ದೂರವಾಗಿ ಸಂಗೊಳ್ಳಿಯಲ್ಲಿ ಒಂದು ಕೋಟೆ ಕಟ್ಟಿಕೊಂಡು ತನ್ನ ಜೀವನದ ಕೊನೆಯ ದಿನಗಳನ್ನು ಕಳೆಯುತ್ತಾಳೆ. ಇಷ್ಟಲಿಂಗ ಪೂಜೆ, ಅಧ್ಯಾತ್ಮದ ಜೀವನ ಸಾಗಿಸುತ್ತ ಸಂಗೊಳ್ಳಿಯಲ್ಲಿ ಲಿಂಗೈಕ್ಯಳಾಗುತ್ತಾಳೆ. ಇವತ್ತಿಗೂ ಸಹಿತ ರಾಣಿ ರುದ್ರಮ್ಮನ ಸಮಾ ಧಿಯನ್ನು ಮಲಪ್ರಭಾ ನದಿಯಲ್ಲಿ ನೋಡಬಹುದು. ಮಲಪ್ರಭಾ ನದಿಯ ನದಿ ನೀರು ಪೂರ್ಣವಾಗಿ ಖಾಲಿಯಾದ ಸಂದರ್ಭದಲ್ಲಿ ಮಾತ್ರ ಸಮಾಧಿ ನೋಡಲು ಸಿಗುತ್ತದೆ. ಸವದತ್ತಿ ನವಿಲುತೀರ್ಥದಲ್ಲಿ ಅಣೆಕಟ್ಟು ಕಟ್ಟಿದ ಕಾರಣ ರಾಣಿ ರುದ್ರಮ್ಮನ ಸಮಾ ಧಿ ಮಲಪ್ರಭಾ ನದಿಯಲ್ಲಿ ಮುಳುಗಿ ಹೋಗಿದೆ .ಇವತ್ತಿಗೂ ಸಹಿತ ಅತ್ಯಂತ ಸುಸ್ಥಿತಿಯಲ್ಲಿ ರಾಣಿ ರುದ್ರಮ್ಮನ ಸಮಾಧಿ ಮಲಪ್ರಭಾ ನದಿಯಲ್ಲಿರುವುದು ಅದನ್ನು ರಕ್ಷಿಸಿಕೊಳ್ಳಬೇಕಾದ ಕೆಲಸ ನಮ್ಮ ಸರಕಾರಗಳು ಮತ್ತು ಜನಪ್ರತಿನಿಧಿಗಳು ಮಾಡಬೇಕಿದೆ. *ಭಾವನಾ ಕಂಬಿ