Advertisement

ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

10:53 AM May 25, 2020 | mahesh |

ಧಾರವಾಡ: ಸುದೀರ್ಘ‌ ಸುಗ್ಗಿ, ಮಳೆಗಾಳಿ, ಕೋವಿಡ್ ಸೇರಿ ಅನೇಕ ತೊಂದರೆಗಳನ್ನು ಎದುರಿಸಿರುವ ಆಲ್ಫೊನ್ಸೋ ಮಾವು ಬೆಳೆಗಾರರಿಗೆ ಇದೀಗ ಕೆಟ್ಟ ನೊಣದ ಕಾಟ ಶುರುವಾಗಿದ್ದು, ಕೈಗೆ ಬಂದ ಮಾವಿನ ಹಣ್ಣನ್ನು ತಿಪ್ಪೆಗೆ ಎಸೆಯಲಾಗುತ್ತಿದೆ. ಹೌದು…, ಮಾವು ಬೆಳೆಗಾರರ ದುರ್ದೈವವೋ ಏನೋ ಈ ವರ್ಷಪೂರ್ತಿ ಒಂದಿಲ್ಲ ಒಂದು ಸಂಕಷ್ಟಕ್ಕೆ ಒಳಗಾಗಿರುವ ಅವರಿಗೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಅಳಿದುಳಿದ ಮಾವಿನ ಹಣ್ಣುಗಳನ್ನು ಕೂಡ ತಿಪ್ಪೆಗೆ ಎಸೆದು ಕೈ ತೊಳೆದುಕೊಳ್ಳುವ ಸ್ಥಿತಿ ಎದುರಾಗಿದೆ.

Advertisement

ಆಲ್ಫೊನ್ಸೋ ಮಾವಿಗೆ ಈ ಹಿಂದಿನ ದಿನಗಳಲ್ಲಿ ಮ್ಯಾಂಗೋ ಹ್ಯಾಪರ್ (ಮಾವು ಜಿಗಿ) ರೋಗ ಕಾಣಿಸಿಕೊಂಡಿತ್ತು. ಅದನ್ನು ಬಿಟ್ಟರೆ ಕಳೆದ ನಾಲ್ಕು ವರ್ಷಗಳಿಂದ ಮಳೆಗಾಳಿಯಲ್ಲಿ ಪಾರಾಗಿ ಬಂದ ಎಲ್ಲಾ ಕಾಯಿಗಳು ಉತ್ತಮವಾಗಿ ಮಾಗಿದ ಮೇಲೆ ಹಣ್ಣಿಗೆ ತಿರುಗಿ ರುಚಿ ಕಟ್ಟಾಗಿ ತಿನ್ನಲು ಬರುವಂತಿದ್ದವು. ರೈತರು ಅಷ್ಟೇ ಈ ಹಣ್ಣುಗಳನ್ನೇ ಮಾರಾಟ ಮಾಡಿ ಉಳಿದ ಹಾನಿಯನ್ನು ಇದರಲ್ಲಿ ಸರಿದೂಗಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಕೊನೆಯ ಘಟ್ಟದಲ್ಲಿ ಕೂಡ ನಿಸರ್ಗ ಮಾವು
ಬೆಳೆಗಾರರನ್ನು ಹನಿದು ಹಾಕಿದ್ದು ಅನ್ನದಾತರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಧಾರವಾಡ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತವಾಗಿ ಕಾಣಿಸಿಕೊಂಡಿರುವ ಈ ಹಸಿರು ನೊಣದ ಕಾಟಕ್ಕೆ ತೋಟಗಳ ಮಾಲೀಕರು ಮಾತ್ರ ಹೈರಾಣಾಗಿಲ್ಲ, ಅದನ್ನು ಗುತ್ತಿಗೆ ರೂಪದಲ್ಲಿ ಪಡೆದುಕೊಂಡು ವ್ಯಾಪಾರ ಮಾಡುವ ದಲ್ಲಾಳಿಗಳು ಕೂಡ ದಿಕ್ಕೆಟ್ಟು ಹೋಗಿದ್ದಾರೆ.

50 ಸಾವಿರ ಟನ್‌ ಹಾನಿ: 2020ರ ಮಾವು ಬೆಳೆ ಶೇ.65ರಷ್ಟು ಆರಂಭದಲ್ಲಿಯೇ ಹಾನಿ ಕಂಡಿದೆ. ಸುದೀರ್ಘ‌ ಸುಗ್ಗಿ ಮತ್ತು ಮಾವು ಈ ವರ್ಷ ಚಿಗುರು ಪ್ರಧಾನವಾಗಿದ್ದರಿಂದ ಹೆಚ್ಚು ಗಿಡಗಳಲ್ಲಿ ಮಾವಿನ ಕಾಯಿಗಳು ಆಗಿರಲೇ ಇಲ್ಲ. ಇನ್ನು ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಿನಲ್ಲಿ ಸುರಿದ ಭಾರೀ ಮಳೆಗಾಳಿಗೆ ಆಗಿರುವ ಶೇ.35ರಷ್ಟು ಮಾವಿನ ಕಾಯಿಗಳ ಪೈಕಿ ಶೇ.15ರಷ್ಟು ಕಾಯಿ ನೆಲಕ್ಕುರುಳಿಯಾಗಿದೆ. ಇನ್ನುಳಿದ ಶೇ.20ರಷ್ಟು ಕಾಯಿಗಳಿಗೂ ಇದೀಗ ಕೆಟ್ಟ ನೊಣದ ಕಾಟ ಶನಿಯಾಗಿ ಒಕ್ಕರಿಸಿದೆ.

ಉತ್ತರ ಕರ್ನಾಟಕ ಮಾವು ಮಾರಾಟ ವ್ಯಾಪಾರಿಗಳ ಸಂಘದವರು ಅಂದಾಜು ಮಾಡಿದಂತೆ ಈ ವರ್ಷ ಧಾರವಾಡ, ಬೆಳಗಾವಿ, ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 50 ಸಾವಿರ ಟನ್‌ನಷ್ಟು ಉತ್ತಮ ಮಾವು ಪ್ರಕೃತಿ ವಿಕೋಪ ಮತ್ತು ರೋಗ ರುಜಿನಕ್ಕೆ ತುತ್ತಾಗಿ ಹೋಗಿದೆ. ಕಳೆದ ವರ್ಷ ಅಂದರೆ 2019ರಲ್ಲಿ ಈ ಮೂರು ಜಿಲ್ಲೆಗಳಲ್ಲಿ ಬರೊಬ್ಬರಿ 87 ಸಾವಿರ ಟನ್‌ ಆಲ್ಫೊನ್ಸೋ ಮಾವು ಉತ್ಪಾದನೆಯಾಗಿತ್ತು.

Advertisement

ಹಣ್ಣಿನ ಮಾವು ಉಪ್ಪಿನ ಕಾಯಿಗೆ: ಏಪ್ರಿಲ್‌ ಮೊದಲ ವಾರದಲ್ಲಿ ಮಾವಿನ ಕಾಯಿ ಕಿತ್ತು ಹಣ್ಣಿಗೆ ಹಾಕಿದವರ ಮಾವು ಕೊಳೆತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಮಾವು ಬೆಳೆಗಾರರು ಹಣ್ಣಿನ ಬದಲು ಅದನ್ನು ಉಪ್ಪಿನ ಕಾಯಿ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದಾರೆ. ಹಣ್ಣಾಗಿ ಹೆಚ್ಚಿನ ದರ ಪಡೆದುಕೊಳ್ಳುತ್ತಿದ್ದ ರೈತರು ಅನಿವಾರ್ಯವಾಗಿ ಇದೀಗ ಮಾವಿನ ಕಾಯಿಯನ್ನು ನೇರವಾಗಿ ತೋಟಗಳಿಂದ ಮಾವು ದಲ್ಲಾಳಿಗಳ ಅಂಗಡಿಗಳಿಗೆ ಸಾಗಿಸುತ್ತಿದ್ದಾರೆ.

ಪ್ರತಿ ಕೆ.ಜಿ.ಗೆ 20 ರೂ.ನಂತೆ ಆಲ್ಫೊನ್ಸೋ , ಕಲಮಿ, ರತ್ನಾಗಿರಿ ಸೇರಿ ಎಲ್ಲಾ ಹಣ್ಣಿನ ಮಾವುಗಳನ್ನು ಮಾವು ದಲ್ಲಾಳಿಗಳು ಕೊಂಡುಕೊಂಡು ದೊಡ್ಡ
ದೊಡ್ಡ ಉಪ್ಪಿನಕಾಯಿ ಮತ್ತು ಜ್ಯೂಸ್‌ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕ್ವಿಂಟಲ್‌ ಲೆಕ್ಕದಲ್ಲಿ ಹಣ್ಣು ಮಾಡಿ ಮಾರಾಟ ಮಾಡಿದ್ದರೆ ಕನಿಷ್ಠ ಐದು
ಸಾವಿರ ರೂ.ಗಳ ವರೆಗೂ ಹಣ ಲಭಿಸುತ್ತಿತ್ತು. ಇದೀಗ ಒಂದು ಕ್ವಿಂಟಲ್‌ ಮಾವಿಗೆ ಬರೀ ಎರಡು ಸಾವಿರ ರೂ. ಲಭಿಸುತ್ತಿದೆ. ಅದರಲ್ಲಿ ಮಾವು
ಕೀಳುವುದು ಸಾಗಿಸುವ ಖರ್ಚು ಕೂಡ ರೈತರ ಹೆಗಲಿಗೆ ಬೀಳುತ್ತಿದೆ.


ಇಡೀ ಮಾವು ಹಣ್ಣಿಗೆ ಹಾಕಿದಾಗ ಕೊಳೆತಿರುವುದು.

ಏನಿದು ಕೆಟ್ಟ ನೊಣ?
ನೊಣಗಳ ಜಾತಿಯಲ್ಲಿ ಅನೇಕ ರೀತಿಯ ನೊಣಗಳಿವೆ. ಮಾವಿನ ಹಣ್ಣಿನ ಮೇಲೆ ಕೂರುವ ನೊಣ ಕೂಡ ಈ ವರ್ಷ ಅತೀಯಾದ ಮಳೆಯಾಗಿದ್ದರಿಂದ ಕಾಣಿಸಿಕೊಂಡಿದೆ ಎಂದು ರೈತ ವಿಜ್ಞಾನಿಗಳು ಹೇಳುತ್ತಿದ್ದಾರೆ. ನೋಡಲು ನೊಣದಂತೆ ಇದ್ದರೂ, ಸೊಳ್ಳೆಯಂತೆ ಕಾಣುವ ಈ ವಿಚಿತ್ರ ನೊಣ ಮಾವಿನ ಕಾಯಿಯ ಮೇಲೆ ಕುಳಿತು ಅದಕ್ಕೆ ತನ್ನ ಮುಳ್ಳಿನಿಂದ ಚುಚ್ಚಿ ತಿನ್ನುವ ಪ್ರಯತ್ನ ಮಾಡುತ್ತದೆ. ಆಗ ಮಾವಿನ ಕಾಯಿಯ ಮೇಲೆ ಕೊಂಚ ಕರಿ ಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಮೂಡುತ್ತವೆ. ಗಿಡದಲ್ಲಿರುವಾಗ ಈ ಕಾಯಿ ಪರಿಪೂರ್ಣ ಬಣ್ಣ ಬಂದು ನೋಡಲು ಚೆನ್ನಾಗಿಯೇ ಕಾಣುತ್ತದೆ. ಆದರೆ ಮಾವು ಕಿತ್ತ ಮೂರು ದಿನಕ್ಕೆ ಅದು ಮೆತ್ತಗಾಗಿ
ಅದರ ತುಂಬ ಹುಳಗಳೇ ತುಂಬಿರುತ್ತವೆ.

ಗ್ರಾಹಕರಿಗೂ ಬರೆ
ಕೆಟ್ಟ ನೊಣದ ಕಾಟಕ್ಕೆ ಬರಿ ಮಾವು ಬೆಳೆಗಾರರು ಮಾತ್ರ ಸಂಕಷ್ಟ ಅನುಭವಿಸುತ್ತಿಲ್ಲ. ಬದಲಿಗೆ ಇದು ಗ್ರಾಹಕರಿಗೂ ಕೂಡ ಬರೆ ಕೊಟ್ಟಂತಾಗಿದೆ. ಇಲ್ಲಿ ಉತ್ತಮ
ಮಾವಿನ ಹಣ್ಣುಗಳು ಗ್ರಾಹಕರ ಮನೆ ಸೇರುತ್ತಿಲ್ಲ. ಒಂದು ಡಜನ್‌ ಮಾವಿನ ಹಣ್ಣಿನಲ್ಲಿ ಕನಿಷ್ಠ ಅರ್ಧ ಮಾವು ತೀವ್ರ ಹುಳಿ ಮತ್ತು ಹುಳಬಿದ್ದ ಮಾವುಗಳೇ
ಇರುತ್ತವೆ. ಭರಪೂರ ಬಣ್ಣ, ವಾಸನೆ ಮಾತ್ರ ಮಾರುಕಟ್ಟೆ ಆವರಿಸಿದೆ. ಆದರೆ ಹಣ್ಣು ತಿಂದ ತೃಪ್ತಿ ಗ್ರಾಹಕರಿಗೂ ಇಲ್ಲವಾಗಿದೆ.

ತೋಟದಿಂದ ನೇರವಾಗಿ ತಂದ ಮಾವಿನ ಕಾಯಿಗಳನ್ನು ಮಾತ್ರ ಕೊಳ್ಳುತ್ತೇವೆ. ಸದ್ಯಕ್ಕೆ ಉತ್ತಮ  ಮಾವಿನ ಕಾಯಿಗಳಿಗೆ ಕ್ವಿಂಟಲ್‌ಗೆ 2,100 ರೂ.ಗಳ ವರೆಗೂ ಬೆಲೆ ಇದೆ. ಮಾವು ಕಿತ್ತು ಮೂರು ದಿನಗಳ ನಂತರ ತಂದ ಮಾವಿಗೆ ಬೆಲೆ ಕಡಿಮೆ.
ಶಾಂತಯ್ಯ ಗುಡ್ಡದಮಠ, ಮಾವು ವ್ಯಾಪಾರಿ.

ಮಾವು ಬೆಳೆಗಾರರಿಗೆ ಈ ವರ್ಷಪೂರ್ತಿ ಅನೇಕ ಕಂಟಕಗಳು ಎದುರಾಗಿವೆ. ಇದೀಗ ಕೆಟ್ಟನೊಣದ ಕಾಟ, ಇದರಿಂದ ಮಾವು ಬೆಳೆಗಾರರು ಈ ರ್ಷ ಸಂಪೂರ್ಣ ನಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಮಾವು ಬೆಳೆಗಾರರ ನೆರವಿಗೆ ಬರಬೇಕು.
ಮಹಾವೀರ ಜೈನರ್‌, ಮಾವು ಬೆಳೆಗಾರರ ಸಂಘದ ಅಧ್ಯಕ್ಷ

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next