ಧಾರವಾಡ: ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಸ್ವೀಪ್ ಸಮಿತಿ ಮೂಲಕ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಏ. 23ರಂದು ತಪ್ಪದೇ ಎಲ್ಲ ಮತದಾರರು ಮತ ಚಲಾಯಿಸಿ ತಮ್ಮ ಜವಾಬ್ದಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ದೀಪಾ ಚೋಳನ್ ಹೇಳಿದರು.
ನಗರದ ಸೋಮೇಶ್ವರ ದೇವಸ್ಥಾನ ಬಳಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ಆಯೋಜಿಸಿದ್ದ
ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಏ. 23ರಂದು ಪ್ರತಿಯೊಬ್ಬರು ತಮ್ಮ ವ್ಯಾಪ್ತಿಯ ಮತಗಟ್ಟೆಗೆ ಹೋಗಿ ತಪ್ಪದೇ ಮತ ಚಲಾಯಿಸಬೇಕು. ಧಾರವಾಡ ಸುಸಂಸ್ಕೃತರ, ಶಿಕ್ಷಣವಂತರ ಜಿಲ್ಲೆ. ಅದಕ್ಕೆ ತಕ್ಕಂತೆ ಜಿಲ್ಲೆಯ ಪ್ರತಿಯೊಬ್ಬ ನಾಗರಿಕ ಮತದಾನದ ಹಕ್ಕು ಚಲಾಯಿಸಿ ಪ್ರಬುದ್ಧತೆ ತೋರಿಸಬೇಕು ಎಂದರು. ಉತ್ಸವದಲ್ಲಿ ಭಾಗವಹಿಸಿದ್ದ ಮಕ್ಕಳ ಪಾಲಕರಿಗೆ ಹಾಗೂ ಸಾರ್ವಜನಿಕರಿಗೆ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಡಾ|ಬಿ.ಸಿ. ಸತೀಶ, ಡಿಡಿಪಿಐ ಗಜಾನನ ಮನ್ನಿಕೇರಿ, ಎ.ಎ. ಖಾಜಿ ಎಸ್
.ಸಿ. ಕರಿಕಟ್ಟಿ, ಎಸ್.ಎಂ. ಹುಡೇದಮನಿ, ಎಂ.ಎಲ್.ಹಂಚಾಟೆ, ಕೆ.ಎಂ. ಶೇಖ್, ಜಿ.ಎನ್. ನಂದನ ಇದ್ದರು. ಕರ್ನಾಟಕ ಕಾಲೇಜು: ಸಂಜೆ ವೇಳೆ ಕರ್ನಾಟಕ ಕಾಲೇಜು ಮೈದಾನದಲ್ಲಿ ದೀಪಗಳೊಂದಿಗೆ ಗಾಳಿಪಟಗಳನ್ನು ಹಾರಿಸಿ ಮತದಾರ ಜಾಗೃತಿ ಅಭಿಯಾನಕ್ಕೆ ಜಿಪಂ ಸಿಇ ಡಾ| ಬಿ.ಸಿ. ಸತೀಶ ಚಾಲನೆ ನೀಡಿದರು. ಯುವಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದರು.