Advertisement

ಲಲಿತಮಹಲ್‌ ಅಂಗಳದಲ್ಲಿ ಗಾಳಿಪಟ ಉತ್ಸವ

11:31 AM Sep 29, 2018 | |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಗಾಳಿಪಟ ಉತ್ಸವ ಸೆ.29 ಮತ್ತು 30ರಂದು ನಗರದ ಲಲಿತಮಹಲ್‌ ಹೆಲಿಪ್ಯಾಡ್‌ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌ ತಿಳಿಸಿದರು. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಆಕರ್ಷಣೆ ಹೆಚ್ಚಿಸಲು ಪೂರ್ವ ಕಾರ್ಯಕ್ರಮವಾಗಿ ಮೊದಲಿಗೆ ಗಾಳಿಪಟ ಉತ್ಸವ ನಡೆಸಲಾಗುತ್ತಿದೆ. ಈ ಉತ್ಸವದಲ್ಲಿ ಗಾಳಿಪಟದ ಸಂಸ್ಕೃತಿಯನ್ನು ಪರಿಚಯಿಸುವ ಜತೆಗೆ ಮಕ್ಕಳು ಹಾಗೂ ಯುವಜನರಲ್ಲಿ ಸೃಜನಶೀಲತೆ, ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶವಿದೆ. ಗಾಳಿಪಟ ಉತ್ಸವದ ಜತೆಗೆ ಮಕ್ಕಳಿಗಾಗಿ ಕಾರ್ಯಾಗಾರ, ಮನರಂಜನಾ ಕಾರ್ಯಕ್ರಮಗಳ ಜತೆಗೆ ಫ‌ುಡ್‌ ಟ್ರಕ್‌ ಇರಲಿದೆ ಎಂದು ಹೇಳಿದರು. 

ಎರಡು ದಿನಗಳ ಉತ್ಸವ: ಟೀಮ್‌ ಮಂಗಳೂರು ನೇತೃತ್ವದಲ್ಲಿ ಎರಡು ದಿನಗಳವರೆಗೆ ಗಾಳಿಪಟ ಉತ್ಸವ ನಡೆಯಲಿದೆ. ಇದರಲ್ಲಿ ಮುಂಬೈನಿಂದ 4, ಅಹಮದಾಬಾದ್‌ 6, ಸೂರತ್‌ 5, ಹೈದರಾಬಾದ್‌ 3 ಮತ್ತು ಮಂಗಳೂರಿನ 10ಕ್ಕೂ ಹೆಚ್ಚು ವೃತ್ತಿನಿರತ ಕೈಟ್‌ ಫ್ಲೆಯರ್‌ಗಳು ಭಾಗವಹಿಸಲಿದ್ದಾರೆ.
 

ಸೆ.29ರಂದು ಸಂಜೆ 4 ಗಂಟೆಗೆ ನಡೆಯುವ ಗಾಳಿಪಟ ಉತ್ಸವಕ್ಕೆ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಲಿದ್ದಾರೆ. ಗಾಳಿಪಟ ಉತ್ಸವದಲ್ಲಿ ಲಲಿತಮಹಲ್‌ ಹೆಲಿಪ್ಯಾಡ್‌ ಮೈದಾನದ ಸುತ್ತಲಿನ ಎಲ್ಲಾ ಶಾಲೆಯ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಮೂಲಕ ಸುತ್ತೋಲೆ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಗಾಳಿಪಟಗಳ ಆಕರ್ಷಣೆ: ಟೀಮ್‌ ಮಂಗಳೂರು ತಂಡದ ಸರ್ವೇಶ್‌ ಮಾತನಾಡಿ, ಲಲಿತಮಹಲ್‌ ಹೆಲಿಪ್ಯಾಡ್‌ ಅಂಗಳದಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ವಿವಿಧ ಬಗೆಯ 25ಕ್ಕೂ ಹೆಚ್ಚು ಆಕರ್ಷಕ ಗಾಳಿಪಟಗಳ ಹಾರಾಟ ಮತ್ತು ಪ್ರದರ್ಶನ ನಡೆಯಲಿದೆ.

Advertisement

ಟೀಮ್‌ ಮಂಗಳೂರು ತಂಡ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಗಾಳಿಪಟಗಳನ್ನು ಉತ್ಸವದಲ್ಲಿ ಹಾರಾಟ ಮತ್ತು ಪ್ರದರ್ಶನಕ್ಕಿಡಲಾಗುವುದು.  ಪ್ರಮುಖವಾಗಿ ಕಥಕ್ಕಳಿ, ಯಕ್ಷಗಾನ, ಭರತನಾಟ್ಯ, ದುರ್ಗಾ, ಗಜೇಂದ್ರ, ಡ್ರ್ಯಾಗನ್‌, ಭೂತಕೋಲು, ಕೊರಿಯನ್‌ ಕೈಟ್‌ ಮತ್ತಿತರ ಗಾಳಿಪಟಗಳ ಹಾರಾಟ ನಡೆಯಲಿದೆ. ಈ ಎಲ್ಲಾ ಗಾಳಿಪಟಗಳನ್ನು ಪೇಪರ್‌ ಬಳಸದೆ, ಪ್ಯಾರಾಚೂಟ್‌ ಮತ್ತು ಬೋಟ್‌ ತಯಾರಿಸಲು ಬಳಸುವ ಬಟ್ಟೆ ಬಳಸಲಿದ್ದು,

36 ಅಡಿ ಎತ್ತರ ಮತ್ತು 10 ಅಡಿ ಅಗಲವಿರುವ ಕಥಕ್ಕಳಿ ಶೈಲಿಯ ಗಾಳಿಪಟ ಎಲ್ಲರ ಆಕರ್ಷಣೆಯಾಗಲಿದೆ. ಇದೇ ವೇಳೆ ನಡೆಯುವ ಕಾರ್ಯಾಗಾರದಲ್ಲಿ ಮಕ್ಕಳಿಗೆ ಸುಲಭವಾಗಿ ಗಾಳಿಪಟ ತಯಾರಿಕೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.  ಸುದ್ದಿಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪ ನಿದೇರ್ಶಕ ಜನಾರ್ದನ್‌, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಇನ್ನಿತರರಿದ್ದರು.

ನಾಳೆ ವಿಂಟೇಜ್‌ ಕಾರು ಉತ್ಸವ: ದಸರೆ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಫೆಡರೇಷನ್‌ ಆಫ್ ಹಿಸ್ಟಾರಿಕ್‌ ವೆಹಿಕಲ್ಸ್‌ ಆಫ್ ಇಂಡಿಯಾ ವತಿಯಿಂದ ಸೆ.30 ಮತ್ತು ಅ.1ರಂದು ವಿಂಟೇಜ್‌ ಕಾರ್‌ ಉತ್ಸವ ಏರ್ಪಡಿಸಿದೆ. ಭಾನುವಾರ ಬೆಳಗ್ಗೆ 8ಕ್ಕೆ ನಡೆಯುವ ವಿಂಟೇಜ್‌ ಕಾರು ಉತ್ಸವಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡುವರು.

ರ್ಯಾಲಿಯಲ್ಲಿ 1925ರಿಂದ 1975ರವರೆಗೆ ತಯಾರಾಗಿರುವ 50 ಬಗೆಯ ಕಾರುಗಳನ್ನು ಪ್ರದರ್ಶನದಲ್ಲಿ ನೋಡಬಹುದು. ಸೆ.30ರಂದು ಸಂಜೆ 4.15ಕ್ಕೆ ಆರಂಭವಾಗುವ ರ್ಯಾಲಿಯು ಪ್ರಮುಖ ರಸ್ತೆಗಳಲ್ಲಿ ವಿಂಟೇಜ್‌ ಕಾರು ಸಂಚರಿಸಲಿದ್ದು, ಅ.1ರಂದು  ವಿಂಟೇಜ್‌ ಕಾರುಗಳ ಪ್ರದರ್ಶನದ ಜತೆಗೆ ಇನ್ನಿತರ ಕಾರ್ಯಕ್ರಮ ನಡೆಯಲಿದೆ. 

ರ್ಯಾಲಿಯಲ್ಲಿ ಇಂಗ್ಲೆಂಡ್‌, ಯುಕೆ, ಶ್ರೀಲಂಕಾ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿಂಟೇಜ್‌ ಕಾರುಗಳು ಪಾಲ್ಗೊಳ್ಳಲಿದ್ದು, 1920ನೇ ಸಾಲಿನಲ್ಲಿ ತಯಾರಾಗಿರುವ ಇಂಗ್ಲೆಂಡ್‌ನ‌ ವಿಂಟೇಜ್‌ ಕಾರುಗಳು ನೋಡುಗರ ಗಮನ ಸೆಳೆಯಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದರು. 

ವಿವಿಧ ಕಾರ್ಯಕ್ರಮ: ನಾಡಹಬ್ಬ ದಸರಾ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಈ ವರ್ಷ ಶ್ವಾನ ಪ್ರದರ್ಶನ, ಮತ್ಸ ಮೇಳ, ನಿಧಿ ಶೋಧ, ಟ್ರಯಥ್ಲಾನ್‌ ನಡೆಯಲಿದೆ. ಏರ್‌ ಶೋ ಪ್ರದರ್ಶನಕ್ಕೆ ಪ್ರಾಥಮಿಕ ಕೆಲಸ ಈಗಾಗಲೇ ಆರಂಭವಾಗಿದೆ.

ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯರು ದಸರಾ ಮಹೋತ್ಸವದ ಆಕರ್ಷಣೆ ಕಣ್ತುಂಬಿಕೊಳ್ಳುವ ಜತೆಗೆ ದಸರೆಯ ಅನುಭವ ಪಡೆಯಬೇಕೆಂಬ ಉದ್ದೇಶದಿಂದ ಹಲವು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next