ಮೋರಿಗಾಂವ್, ಅಸ್ಸಾಂ : ತನ್ನಲ್ಲಿ ಅತೀಂದ್ರಿಯ ಚುಂಬಕ ಶಕ್ತಿ ಇದೆ ಎಂದು ಹೇಳಿ, ಮಹಿಳೆಯರನ್ನು ತಬ್ಬಿಕೊಂಡು ಮುತ್ತಿಕ್ಕುವ ಮೂಲಕ ಅವರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಿವಾರಿಸುವುದಾಗಿ ನಂಬಿಸಿ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ‘ಕಿಸ್ಸಿಂಗ್ ಬಾಬಾ’ ಎಂದೇ ತನ್ನ ಅನುಯಾಯಿಗಳಲ್ಲಿ ಕುಖ್ಯಾತನಾಗಿದ್ದ ಸ್ವಘೋಷಿತ ದೇವಮಾನವ ರಾಮ್ ಪ್ರಕಾಶ್ ಚೌಹಾಣ್ ನನ್ನು ಪೊಲೀಸರು ಬಂಧಿಸಿದ್ದಾರೆ.
ತಾನು ಅಪ್ಪಿಕೊಂಡು ಮುತ್ತಿಕ್ಕಿದರೆ ಮಹಿಳೆಯರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಸ್ವಘೋಷಿತ ದೇವಮಾನವ ಚೌಹಾಣ್ ಅಮಾಯಕ ಮಹಿಳೆಯರನ್ನು ನಂಬಿಸಿ ವಂಚಿಸುತ್ತಿದ್ದ ಎಂದು ಎಎನ್‌ಐ ವರದಿ ತಿಳಿಸಿದೆ.
ಚೌಹಾಣ್ ಭೋರಾಲ್‌ತುಪ್ ಗ್ರಾಮದಲ್ಲಿ ಇದ್ದಾನೆಂಬ ಮಾಹಿತಿಯನ್ನು ಪಡೆದ ಪೊಲೀಸರು ಆತನನ್ನು ಆಗಸ್ಟ್ 22ರಂದು ಬಂಧಿಸಿದರು.
ಸ್ಥಳೀಯರಲ್ಲಿ ತುಂಬಾ ಜನಪ್ರಿಯನಾಗಿದ್ದ ಚೌಹಾಣ್ ನ ನಕಲಿ ಮಂದಿರಕ್ಕೆ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದರು. ಕಳೆದ ಮೂರು ತಿಂಗಳಿಂದ ಆತ ತನ್ನಲ್ಲಿ ಅತೀಂದ್ರಿಯ ಶಕ್ತಿಗಳಿವೆ ಎಂದು ಮಹಿಳೆಯರನ್ನು ನಂಬಿಸಿ ವಂಚಿಸುತ್ತಿದ್ದ.
ಪೊಲೀಸರು ಚೌಹಾಣ್ ನನ್ನು ಮಾತ್ರವಲ್ಲದೆ ಆತನ ತಾಯಿಯನ್ನು ಕೂಡ ಪ್ರಶ್ನಿಸುವುದಕ್ಕಾಗಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.