ಗಂಗಾವತಿ : ಮಳೆಗಾಲ ಸಂದರ್ಭದಲ್ಲಿ ಜೋಕ್ ಫಾಲ್ಸ್ ನ ನೀರು ಬೀಳುವುದನ್ನು ನೋಡಲು ದೇಶ ವಿದೇಶದಿಂದ ಜನರು ಆಗಮಿಸುತ್ತಾರೆ ಅಂತಹುದ್ದೇ ಒಂದು ದೃಶ್ಯ ಗಂಗಾವತಿ ತಾಲೂಕಿನ ಕಿಷ್ಕಿಂದ ಅಂಜನಾ ಬೆಟ್ಟದ ಸಮೀಪವಿರುವ ಚಂಚಲ ಜಂಜೀರ್ ಗುಡ್ಡ ಪ್ರದೇಶದಲ್ಲಿ ಮಳೆಯಿಂದ ಸೃಷ್ಟಿಯಾಗಿರುವ ನೀರಿನ ಝರಿಯೊಂದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಆನೆಗೊಂದಿ ಪ್ರದೇಶದ ಗುಡ್ಡ ಪ್ರದೇಶದಲ್ಲಿ ನೀರಿನ ಫಾಲ್ಸ್ ಸೃಷ್ಟಿಯಾಗಿದೆ. ಜಂಜೀರ್ ಗುಡ್ಡದಲ್ಲಿ ಮೇಲಿನಿಂದ ಬೀಳುವ ನೀರು ಜೋಕ್ ಫಾಲ್ಸ್ ನ್ನು ನೆನಪಿಸುತ್ತದೆ. 3ಕಡೆ ನೀರು ಝರಿಯಾಗಿ ಹರಿಯುವ ಮೂಲಕ ಈ ಪ್ರಕೃತಿಯನ್ನು ಇನ್ನಷ್ಟು ಸೌಂದರ್ಯದಿಂದ ಕಾಣುವಂತೆ ಮಾಡಿದೆ. ಇಲ್ಲಿ ಬೆಳಿಗ್ಗೆ ಮತ್ತು ಸಂಜೆ ನವಿಲುಗಳ ಹಾರಾಟ ಇನ್ನಷ್ಟು ಮುದ ನೀಡುತ್ತಿದೆ.
ಸದ್ಯ ಕೊರೋನಾ ಮಹಾಮಾರಿಯ ಪರಿಣಾಮವಾಗಿ ಈ ಪ್ರದೇಶದಲ್ಲಿರುವ ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದೆ ಆದರೂ ಕೆಲವರು ತಮ್ಮ ಕುಟುಂಬ ಸಮೇತ ಸ್ವಂತ ವಾಹನದಲ್ಲಿ ಈ ಪ್ರದೇಶದಲ್ಲಿ ಆಗಮಿಸಿ ಇಂಥ ನಯನಮನೋಹರ ದೃಶ್ಯಗಳನ್ನು ಸವಿಯುತ್ತಿದ್ದಾರೆ.
ಇದನ್ನೂ ಓದಿ :ತುಮಕೂರಿನ ಚಂದನ್ ಕುಟುಂಬಸ್ಥರಿಗೆ ಶಿಕ್ಷಣ ಸಚಿವರಿಂದ ಸಾಂತ್ವನ: 1ಲಕ್ಷ ರೂ. ಪರಿಹಾರ ವಿತರಣೆ
ಸಾಣಾಪುರ ಹತ್ತಿರ ತುಂಗಭದ್ರಾ ನದಿಯಲ್ಲಿ ಸಹ ಒಂದು ನೀರಿನ ಪಾಲ್ಸ್ ರಭಸದ ನೀರಿನಿಂದ ಸೃಷ್ಟಿಯಾಗುತ್ತಿದೆ. ಇಲ್ಲಿಯ ಸಾಣಾಪುರ ಕೆರೆ ತುಂಗಭದ್ರ ನದಿಯ ದಡದ ವಿರುಪಾಪುರಗಡ್ಡಿ ಪುರಾತನ ಸೇತುವೆ. ಋಷ್ಯಮೂಕ ಪರ್ವತದ ವಾಣಿ ಭದ್ರೇಶ್ವರ ಬೆಟ್ಟ ದೇವು ಘಟ್ಟದ ಅಮೃತೇಶ್ವರ ದೇವಾಲಯ ಭಾಗದಲ್ಲಿ ಪ್ರಕೃತಿ ಸೌಂದರ್ಯನೋಡಲು ಸುಂದರ . ಮಳೆಗಾಲದಲ್ಲಿ ಈ ಭಾಗ ಸಂಪೂರ್ಣವಾಗಿ ಸುಂದರವಾಗಿ ಕಾಣುತ್ತದೆ. ಪ್ರಕೃತಿ ಪ್ರಿಯರು ಒಂದು ಬಾರಿ ಈ ಭಾಗಕ್ಕೆ ಬಂದು ಈ ಸವಿಯನ್ನ ಸವಿಯಲೇಬೇಕು.