Advertisement

ಅಡಿಕೆ ರೋಗಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ: ಕಿಶೋರ್‌ ಕುಮಾರ್‌ ಕೊಡ್ಗಿ

11:18 PM Feb 09, 2023 | Team Udayavani |

ಮಂಗಳೂರು: ಅಡಿಕೆಯ ವಿವಿಧ ರೋಗಗಳಿಗೆ ಪರಿಹಾರ ಹುಡುಕಲು ಅಡಿಕೆ ಸಂಶೋಧನಾ ಕೇಂದ್ರದ ಸಹಕಾರದಲ್ಲಿ ಕ್ಯಾಂಪ್ಕೋ ಪ್ರತ್ಯೇಕ ಸಂಶೋಧನಾ ಸಮಿತಿಯನ್ನು ರಚಿಸಲಿದೆ.

Advertisement

ಕ್ಯಾಂಪ್ಕೋವಿನ ಸುವರ್ಣ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಉದಯ ವಾಣಿಯೊಂದಿಗೆ ಮಾತನಾಡಿದ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ಎಲೆಚುಕ್ಕಿ ರೋಗ, ಹಳದಿ ಎಲೆ ರೋಗಗಳಿಂದಾಗಿ ಅಡಿಕೆ ಬೆಳೆಗೆ, ಬೆಳೆಗಾರರಿಗೆ ಸಮಸ್ಯೆಯಾಗಿದೆ. ಇದರ ಬಗ್ಗೆ ಸರಕಾರ ಸಂಶೋಧನೆ ನಡೆಸುತ್ತಿದೆ. ನಾವು ಕೂಡ ಅಡಿಕೆ ಸಂಶೋಧನ ಕೇಂದ್ರದ ಸಹಕಾರದೊಂದಿಗೆ ಪ್ರತ್ಯೇಕ ವಿಜ್ಞಾನಿಗಳ ಸಮಿತಿ ರಚಿಸಿ ಕಾರ್ಯತತ್ಪರವಾಗಲು ಅನುದಾನ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.

ಕ್ಯಾಂಪ್ಕೋವಿನ ಭವಿಷ್ಯದ ಆಲೋಚನೆಗಳ ಬಗ್ಗೆ ವಿವರಿಸಿ, ಇದುವರೆಗೆ ನಾವು ಚಾಕೋಲೆಟ್‌ ಪೌಡರ್‌ ಮಾತ್ರ ರಫ್ತು ಮಾಡುತ್ತಿದ್ದೆವು. ಈಗ ಬಾಂಗ್ಲಾದೇಶದ ಸಂಸ್ಥೆಯೊಂದು ನಮ್ಮ ಚಾಕೋಲೆಟ್‌ ಖರೀದಿಗೆ ಆಸಕ್ತಿ ತೋರಿದೆ. ಮಾತುಕತೆ ಅಂತಿಮ ಹಂತದಲ್ಲಿದೆ. ಡೆಲ್ಲಿ ಡೈರಿ ಸಂಸ್ಥೆಯ 2,800 ಮಳಿಗೆ ಗಳಲ್ಲಿ ನಮ್ಮ ಚಾಕೋಲೆಟ್‌ ಉತ್ಪನ್ನಗಳನ್ನು ಮಾರಲು ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.

ಚಾಕೋಲೆಟ್‌ ಘಟಕದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿ ಸಿದ್ದೇವೆ. ಮುಂದಿನ 5 ವರ್ಷಗಳಲ್ಲಿ 100 ಕೋಟಿ ರೂ. ವಿನಿಯೋಗಿಸಿ ಸುಸಜ್ಜಿತಗೊಳಿಸಲಾಗುವುದು. ಕೃಷಿಕರಿಂದ ಅಡಿಕೆ ಹಾಳೆ ಖರೀದಿ ಕುರಿತು ಆಗ್ರಹ ಬರುತ್ತಿದ್ದು, ಆ ಬಗ್ಗೆ ಆಲೋಚಿಸಿಲ್ಲ ಎಂದರು.

ಅಡಿಕೆ ತೋಟಗಳಲ್ಲಿ ಅಂತರ್‌ ಬೆಳೆಯಾಗಿ ಔಷಧ ಸಸ್ಯಗಳನ್ನು ಬೆಳೆಸಲು ಅನುಕೂಲವಾಗುವಂತೆ ರೈತರಿಗೆ ಮಾಹಿತಿ – ತರಬೇತಿ ನೀಡಲು ತೋಟಗಾರಿಕೆ ವಿಷಯದಲ್ಲಿನ ಪದವೀಧರರನ್ನು ನೇಮಿಸಿಕೊಳ್ಳಲು ನಿರ್ಣಯಿಸಲಾಗಿದೆ. ತೋಟದಲ್ಲಿ ಕೊಕ್ಕೊ, ಬಾಳೆಯ ರೀತಿಯಲ್ಲೇ ಔಷಧ ಗಿಡ ಬೆಳೆಯಲು ವಿಜ್ಞಾನಿ ಗಳು, ಅರಣ್ಯಾಧಿಕಾರಿಗಳ ಜತೆ ಸಮಾಲೋಚಿಸಲಾಗಿದೆ. ಸಂಸ್ಥೆಯ ಬೈಲಾ ತಿದ್ದುಪಡಿ ಮಾಡಿ ಕಾರ್ಯಗತ ಗೊಳಿಸುವುದಾಗಿ ಕಿಶೋರ್‌ ಕುಮಾರ್‌ ಕೊಡ್ಗಿ ತಿಳಿಸಿದರು.

Advertisement

ಆಮದು ದರ ಏರಿಕೆ ಸಾಧ್ಯತೆ
ಅಡಿಕೆಯ ಕನಿಷ್ಠ ಆಮದು ದರ ಕಿಲೋಗೆ 251 ರೂ. ಇರುವುದು 350 ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಸುವರ್ಣ ಮಹೋತ್ಸವ ಉದ್ಘಾಟನೆಗೆ ಕೇಂದ್ರ ಸಚಿವ ಅಮಿತ್‌ ಶಾ ಆಗಮಿಸುವ ಸಂದರ್ಭದಲ್ಲೇ ಈ ಘೋಷಣೆ ಹೊರಹೊಮ್ಮಲೂಬಹುದು. ವರ್ಷದ ಹಿಂದೆ ಕ್ಯಾಂಪ್ಕೊ ನೇತೃತ್ವದಲ್ಲಿ ಸಹಕಾರಿ ಸಂಸ್ಥೆಗಳ ಮುಖಂಡರೆಲ್ಲರೂ ಕೇಂದ್ರ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಪೀಯೂಷ್‌ ಗೋಯಲ್‌, ಪ್ರಹ್ಲಾದ ಜೋಷಿ ಅವರನ್ನು ಭೇಟಿಯಾಗಿ ಕನಿಷ್ಠ ಆಮದು ಬೆಲೆಯನ್ನು 360 ರೂ.ಗೆ ಏರಿಸುವಂತೆ ಕೋರಿದ್ದೆವು. ಆ ಪ್ರಸ್ತಾವಕ್ಕೆ ವಾಣಿಜ್ಯ ಸಚಿವರ ಒಪ್ಪಿಗೆ ಸಿಗಬೇಕಿದೆ. ಈ ಉತ್ಸವದ ಸಂದರ್ಭದಲ್ಲೇ 350 ರೂ. ಕನಿಷ್ಠ ಆಮದು ಬೆಲೆಗೆ ಅನುಮೋದನೆ ಸಿಗುವ ನಿರೀಕ್ಷೆ ಬೆಳೆಗಾರರದ್ದು ಎಂದು ಕೊಡ್ಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next