Advertisement

ಕಿಷ್ಕಿಂಧಾ ಆನೆಗೊಂದಿ ಡ್ರಗ್ ಮಾಫಿಯಾಗಳಿಂದ ಕೂಡಿದೆ: ರಾಯರೆಡ್ಡಿ ಹೇಳಿಕೆಗೆ ವ್ಯಾಪಕ ಖಂಡನೆ

04:34 PM Jul 10, 2023 | Team Udayavani |

ಗಂಗಾವತಿ : ತಾಲೂಕಿನ ಆನೆಗೊಂದಿ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶ ವ್ಯಾಪಕವಾದ ಡ್ರಗ್ ಮಾಫಿಯಾ ಗಳಿಂದ ಕೂಡಿದೆ ಎಂದು ವಿಧಾನ ಸಭೆಯ ಅಧಿವೇಶನದಲ್ಲಿ ಯಲಬುರ್ಗಾ ಶಾಸಕ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

ಆನೆಗೊಂದಿ ಭಾಗದಲ್ಲಿ ಹಲವು ದಶಕಗಳಿಂದ ಹೋಟೆಲ್,ರೆಸಾರ್ಟ್ ಮೂಲಕ ಸ್ಥಳೀಯರು ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ಮಧ್ಯೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ನಿಯಮ ಉಲ್ಲಂಘನೆ ನೆಪದಲ್ಲಿ‌ ಹೊಟೇಲ್, ರೆಸಾರ್ಟ್ ಗಳನ್ನ ತೆರವುಗೊಳಿಸಿದೆ.ತಡೆಯಾಜ್ಞೆ ಇರುವ ಹೊಟೇಲ್ ಗಳನ್ನು ಸೀಜ್ ಮಾಡಿದೆ.

ಸೋಮವಾರ ಜರುಗಿದ ವಿಧಾನಸಭೆಯ ಅಧಿವೇಶನದಲ್ಲಿ ಗಂಗಾವತಿಯ ಶಾಸಕ ಗಾಲಿ ಜನಾರ್ದನರೆಡ್ಡಿ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮದ ಅನುಕೂಲಕ್ಕಾಗಿ ರೆಸಾರ್ಟ್ ,ಹೋಟೆಲ್ ತೆರವು ಕಾರ್ಯಾಚರಣೆ ನಿಲ್ಲಿಸಬೇಕು . ಅಕ್ರಮ ಸಕ್ರಮಗೊಳಿಸಬೇಕು .ಜತೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದ 15 ಗ್ರಾಮಗಳನ್ನು ಕೈಬಿಡಬೇಕು ಮತ್ತು ರೈತರ ಭೂಮಿಯಲ್ಲಿ ಶೇ.5 ರಷ್ಟು ಭೂಮಿಯನ್ನು ಫಾರ್ಮ್ ಹೌಸ್ ನಿರ್ಮಾಣ ಮಾಡಲು ನಿಯಮಗಳನ್ನು ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಆನೆಗೊಂದಿ ಕಿಷ್ಕಿಂಧಾ ಅಂಜನಾದ್ರಿ ಸುತ್ತಮುತ್ತ ಡ್ರಗ್ ಮಾಫಿಯಾ ಹೆಚ್ಚಾಗಿದೆ ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿಕೆ ನೀಡಿದರು.

ಇದರಿಂದ ಆನೆಗೊಂದಿ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶದ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತವಾದ ಪರಿಣಾಮವಾಗುವ ಸಂಭವವಿದ್ದು ಅಕ್ರಮ ತಡೆಯಲು ಹಲವು ಏಜೆನ್ಸಿಗಳಿದ್ದು ಅವುಗಳ ಮೂಲಕ ಅಕ್ರಮ ತಡೆಯಬೇಕು.ಅದು ಬಿಟ್ಟು ಇಡೀ ಜಗತ್ತಿಗೆ ತಿಳಿಯುವಂತೆ ಆನೆಗೊಂದಿ ಕಿಷ್ಕಿಂಧಾ ಅಂಜನಾದ್ರಿ ಸುತ್ತಲಿನ ಗ್ರಾಮಗಳು ರೈತರ ಕುರಿತು ರಾಯರೆಡ್ಡಿ ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆನೆಗೊಂದಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಂಡನೆ
ಆನೆಗೊಂದಿ ಭಾಗದ ಜನರು ಹಂಪಿ ಅಭಿವೃದ್ಧಿ ಪ್ರಾಧಿಕಾರ ಪದೇ ಪದೇ ಹೊಟೇಲ್ ಗಳ ತೆರವು ಕಾರ್ಯಾಚರಣೆಯಿಂದ ಪ್ರವಾಸೋದ್ಯಮ ನೆಲಕಚ್ಚಿದ್ದು ಇದರಿಂದ ಬದುಕು ಸಾಗಿಸಲು ಸೆಣಸಾಡುವ ಸಂದರ್ಭದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ತಮ್ಮದಲ್ಲದ ಕ್ಷೇತ್ರದ ವಿಚಾರದಲ್ಲಿ ತಲೆ ಹಾಕಿ ಇತಿಹಾಸ ಪ್ರಸಿದ್ದ ಪ್ರದೇಶವನ್ನು ಡ್ರಗ್ ಮಾಫಿಯಾ ಎಂದು ಕರೆಯುವ ಮೂಲಕ ಆನೆಗೊಂದಿ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶದ ಜನರನ್ನು ಅವಮಾನಿಸಿರುವುದು ಖಂಡನೀಯ ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀ ನಾಥ ಹಾಗೂ ಸುಗ್ರೀವ ಸೇನೆ ಮತ್ತು ಬಿಜೆಪಿ ಮುಖಂಡ ಸಂಗಮೇಶ ಸುಗ್ರೀವ ಖಂಡಿಸಿದ್ದಾರೆ. ಕೂಡಲೇ ಹೇಳಿಕೆ ವಾಪಸ್ ಪಡೆದು ಆನೆಗೊಂದಿ ಭಾಗದ ಜನರ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ‌.

Advertisement

ಟೀಕೆ ಮಾಡಿಲ್ಲ
ಉದಯವಾಣಿ ಜತೆ ಮಾತನಾಡಿದ ಯಲಬುರ್ಗಾ ಶಾಸಕ ಬಸರಾಜರಾಯರೆಡ್ಡಿ, ನಾನು ರೆಸಾರ್ಟ್ ಹೋಟೆಲ್ ಗಳ ವಿರುದ್ಧ ಇಲ್ಲ ಡ್ರಗ್ ಮಾಫಿಯಾ ವಿರುದ್ಧ ಇದ್ದೇನೆ. ಆನೆಗುಂದಿ ಭಾಗದಲ್ಲಿ ನಡೆಯುವ ಡ್ರಗ್ ಮಾಫಿಯಾ ನಿಯಂತ್ರಣ ಮಾಡಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡುವಂತೆ ಸರ್ಕಾರವನ್ನು ನಾನು ಸಹ ಮನವಿ ಮಾಡಿದ್ದೆ ಹೊರತು ಆನೆಗೊಂದಿ ಭಾಗವನ್ನು ಡ್ರಗ್ ಮಾಫಿಯಾ ಎಂದು ಟೀಕೆ ಮಾಡಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next