Advertisement

ಕಾಶಿ ಮಾದರಿಯಲ್ಲಿ ಕಿಷ್ಕಿಂದೆ ಬೆಳಗಲಿ; ಹನುಮನ ಜನ್ಮ ಸ್ಥಳ ಹೈಜಾಕ್‌ ಮಾಡಲು ಟಿಟಿಡಿ ಯತ್ನ

05:33 PM Feb 21, 2022 | Team Udayavani |

ಹುಬ್ಬಳ್ಳಿ: ಆಂಜನೇಯನ ಜನ್ಮಸ್ಥಳ ಕುರಿತ ವಿವಾದವನ್ನು ಆಂಧಪ್ರದೇಶ ಹುಟ್ಟು ಹಾಕತೊಡಗಿದ್ದು, ರಾಮಾಯಣ ಕಾಲದಿಂದಲೂ ಹನುಮನ ಜನ್ಮಸ್ಥಳವೆಂದೇ ನಂಬಿರುವ ಕೊಪ್ಪಳ ಜಿಲ್ಲೆಯಲ್ಲಿನ ಕಿಷ್ಕಿಂದೆಯನ್ನು ರಾಷ್ಟ್ರ-ಅಂತಾರಾಷ್ಟ್ರಮಟ್ಟದ ಗಮನ ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಯತ್ನ ತೋರಬೇಕಾಗಿದೆ.

Advertisement

ಕೇವಲ ಕಿಷ್ಕಿಂದೆಯಷ್ಟೇ ಅಲ್ಲದೆ, ಸುತ್ತಮುತ್ತಲಿರುವ ಐತಿಹಾಸಿಕ ದೇವಸ್ಥಾನ-ತಾಣಗಳ ಅಭಿವೃದ್ಧಿಗೂ ಮುಂದಾದಲ್ಲಿ ದೇಶ-ವಿದೇಶಗಳ ಭಕ್ತರು, ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಿಷ್ಕಿಂದೆ ಹನುಮನ ಜನ್ಮಸ್ಥಳವೆಂದು ಇಲ್ಲಿಯವರೆಗೂ ದೇಶ-ವಿದೇಶಗಳ ಜನರು ನಂಬಿದ್ದಾರೆ. ಅದೇ ನಂಬಿಕೆ ಹಾಗೂ ಭಕ್ತಿಯೊಂದಿಗೆ ಸಾವಿರಾರು ಜನರು ಕಿಷ್ಕಿಂದೆಗೆ ಭೇಟಿ ನೀಡಿ, ಹನುಮನ ದರ್ಶನ ಪಡೆಯುತ್ತಿದ್ದಾರೆ. ಆದರೆ, ಇತ್ತೀಚೆಗೆ ತಿರುಪತಿಯ ಟಿಟಿಡಿಯವರು ಹನುಮನ ನಿಜವಾದ ಜನ್ಮಸ್ಥಳ ತಿರುಪತಿ ಬೆಟ್ಟದ ಸಾಲಿನಲ್ಲಿರುವ ಅಂಜನಾದ್ರಿ ಬೆಟ್ಟವಾಗಿದ್ದು, ಅದನ್ನು ಅಭಿವೃದ್ಧಿಪಡಿಸುವುದಾಗಿ ಮುಂದಡಿ
ಇರಿಸುವ ಮೂಲಕ ಕಿಷ್ಕಿಂದೆಯ ಅಸ್ತಿತ್ವ, ನೂರಾರು ವರ್ಷಗಳ ನಂಬಿಕೆ, ಭಕ್ತರ ಭಾವನೆಯನ್ನೇ ಪ್ರಶ್ನಿಸುವಂತೆ ಮಾಡತೊಡಗಿದೆ.

ರಾಜ್ಯ ಸರ್ಕಾರ ಕಿಷ್ಕಿಂದೆಯೇ ಹನುಮನ ಜನ್ಮಸ್ಥಳ ಎಂಬುದರ ಬಗ್ಗೆ ಧರ್ಮಗ್ರಂಥ, ಇತಿಹಾಸ ಇನ್ನಿತರೆ ದಾಖಲೆಗಳಲ್ಲಿ ಉಲ್ಲೇಖವಾಗಿರುವ ಮಾಹಿತಿಯನ್ನು ಸಮರ್ಪಕ ರೀತಿಯಲ್ಲಿ ಕ್ರೋಡೀಕರಿಸುವ, ಇತಿಹಾಸಕಾರರು, ತಜ್ಞರು ಹಾಗೂ ಧಾರ್ಮಿಕ ಪ್ರಮುಖರ ಜತೆ ಚರ್ಚಿಸಿ ಅಗತ್ಯ ಮಾಹಿತಿ ಸಂಗ್ರಹ ಜತೆಗೆ ಕಿಷ್ಕಿಂದೆ ಕುರಿತಾಗಿ ಪ್ರಚಾರಕ್ಕೆ ಇನ್ನಷ್ಟು ಒತ್ತು ನೀಡುವ ಅಗತ್ಯತೆ ಇದೆ.

ಮೂಲಸೌಲಭ್ಯಗಳ ಕೊರತೆ: ಕಿಷ್ಕಿಂದೆ ಮಹಾಕಾವ್ಯ ರಾಮಾಯಣ ಕಾಲದಿಂದಲೂ ಉಲ್ಲೇಖವಿದೆ. ದೇಶಾದ್ಯಂತ ಹನುಮನ ಭಕ್ತರು ಇಲ್ಲದ ಊರೇ ಇಲ್ಲ. ರಾಮಾಯಣ, ಪುರಾಣ ಇನ್ನಿತರೆ ಗ್ರಂಥಗಳಲ್ಲಿ ಇರುವಂತೆ ಹನುಮನ ಸ್ವಾಮಿ ಭಕ್ತಿ, ಶೌರ್ಯ-ಸಾಹಸಕ್ಕೆ ತಲೆದೂಗದವರೇ ಇಲ್ಲ. ಹನುಮನ ಜನ್ಮಸ್ಥಳ ಕಿಷ್ಕಿಂದೆಗೆ ದೇಶದ ನಾನಾ ಭಾಗಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ಆದರೆ ಪ್ರವಾಸೋದ್ಯಮ ದೃಷ್ಟಿಯಿಂದ, ಬರುವ ಭಕ್ತರ ನಿರೀಕ್ಷೆ ರೀತಿಯಲ್ಲಿ ಕಿಷ್ಕಿಂದೆಯಲ್ಲಿ ಮೂಲಸೌಲಭ್ಯಗಳು ಇಲ್ಲ. ಧಾರ್ಮಿಕ ಸ್ಥಳ ಇಲ್ಲವೇ ಪ್ರವಾಸಿ ತಾಣ ಎಷ್ಟೇ ಮಹತ್ವ ಪಡೆದಿದ್ದರೂ ಅದು ಪ್ರಸಿದ್ಧಿ ಪಡೆಯಬೇಕಾದರೆ ಅಗತ್ಯ ಮೂಲಸೌಲಭ್ಯಗಳು, ಸ್ಥಳಾಕರ್ಷಣೆ ಕುರಿತ ಪ್ರಚಾರ ಅಗತ್ಯವಾಗಿದೆ. ಇವೆರಡರ ಕೊರತೆಯನ್ನು ಕಿಷ್ಕಿಂದೆ ಅನುಭವಿಸುತ್ತಿದೆ.

ಮುಖ್ಯವಾಗಿ ದೂರದ ಭಕ್ತರು ಬಂದರೆ ಅಲ್ಲಿಯೇ ಉಳಿಯಬೇಕೆಂದು ಬಯಸಿದರೆ ಇರುವುದಕ್ಕೆ ಒಂದು ವಸತಿ ನಿಲಯ, ಯಾತ್ರಿ ನಿವಾಸ ಎಂಬುದಿಲ್ಲ. ದೇವಸ್ಥಾನ ಇರುವ ಬೆಟ್ಟದ ಮೇಲೆ ವಸತಿ ನಿಲಯ, ವಾಣಿಜ್ಯ ಸಂಕೀರ್ಣದಂತಹ ಕಟ್ಟಡಗಳಿಗೆ ಅವಕಾಶವಿಲ್ಲ. ಇದ್ದರೂ ಭವಿಷ್ಯದ ದೃಷ್ಟಿಯಿಂದ ಅದು ಸಾಧುವಲ್ಲ. ಆದರೆ ಬೆಟ್ಟದ ಕೆಳಗಡೆ ಇಂತಹ ಸೌಲಭ್ಯ ಕಲ್ಪಿಸಬಹುದಾಗಿದೆ. ಇದರಿಂದ ಭಕ್ತರು ಅಲ್ಲಿ ತಂಗಲು ಅನುಕೂಲವಾಗುತ್ತದೆ. ವ್ಯಾಪಾರ-ವಹಿವಾಟು ಹೆಚ್ಚುತ್ತದೆ. ದೇವಸ್ಥಾನಕ್ಕೆ ಆದಾಯದ ಜತೆಗೆ ಸ್ಥಳೀಯ ಆರ್ಥಿಕಾಭಿವೃದ್ಧಿ, ಉದ್ಯೋಗವಕಾಶ ಚೇತರಿಕೆ ಪಡೆದುಕೊಳ್ಳುವಂತಾಗುತ್ತದೆ.

Advertisement

ದೇವಸ್ಥಾನದಲ್ಲಿ ನಿತ್ಯ ಮಧ್ಯಾಹ್ನದ ಪ್ರಸಾದ ಬಿಟ್ಟರೆ ಪ್ರವಾಸರಿಗೆ ಉಪಾಹಾರ-ಊಟಕ್ಕೆ ಹೆಚ್ಚಿನ ಸೌಲಭ್ಯ ಇಲ್ಲದಂತಾಗಿದೆ. ನಿತ್ಯ ಮಧ್ಯಾಹ್ನ 1:30ರಿಂದ 2:30ವರೆಗೆ ಅನ್ನ-ಸಾಂಬಾರು ಪ್ರಸಾದ ಇದ್ದರೆ, ಶನಿವಾರ ಸಿಹಿ ಜತೆಗೆ ಅನ್ನ-ಸಾಂಬಾರು ಪ್ರಸಾದ ನೀಡಲಾಗುತ್ತದೆ. ಜತೆಗೆ ಶನಿವಾರ ಬೆಳಿಗ್ಗೆ ವಿಶೇಷ ಪೂಜೆ ಹಿನ್ನೆಲೆಯಲ್ಲಿ ಸುಮಾರು 25-30 ಜನರಿಗೆ ಆಗುವಷ್ಟು ಉಪಾಹಾರ ನೀಡಲಾಗುತ್ತದೆ. ದೇವಸ್ಥಾನಕ್ಕೆ ಬೆಟ್ಟದ ಮೇಲೆ ಹೋಗುವ ಮಾರ್ಗ ಕಿರಿದಾಗಿದ್ದು,
ಪರ್ಯಾಯ ವ್ಯವಸ್ಥೆಗೆ ಚಿಂತಿಸಬೇಕಾಗಿದೆ.

ವೃದ್ಧರು, ಮಕ್ಕಳು, ಅಂಗವಿಕಲರು ಬೆಟ್ಟವೇರಲು ಅನುಕೂಲವಾಗುವಂತೆ ರೋಪ್‌ ವೇ ಯೋಜನೆ ಕೇವಲ ಕಡತ-ಚರ್ಚೆ, ಭರವಸೆಗಳಿಗೆ ಸೀಮಿತವಾಗಿದೆ. ಮುಖ್ಯವಾಗಿ ದೇವಸ್ಥಾನದ ದುರಸ್ತಿ ಇಲ್ಲವೇ ಜೀರ್ಣೋದ್ಧಾರ ಕಾರ್ಯ ಆಗಬೇಕಾಗಿದೆ.

ಕಿಷ್ಕಿಂದೆ ಜತೆಯಲ್ಲಿಯೇ ಸುತ್ತುಮುತ್ತಲ ದೇವಸ್ಥಾನ, ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಪಂಪಾ ಸರೋವರದ ವಿಜಯಲಕ್ಷ್ಮೀ ದೇವಸ್ಥಾನ, ದುರ್ಗಮ್ಮ ದೇವಸ್ಥಾನ, ಋಷಿಮುನಿ ಪರ್ವತ, ವಾಲಿ ಪರ್ವತ, ಸಾಣಾಪುರ ಕೆರೆ ಹೀಗೆ ಒಂದು ದಿನದ ಪಿಕ್‌ನಿಕ್‌ಗೆ ಹೇಳಿ ಮಾಡಿಸಿದಂತಿದ್ದು, ಕಿಷ್ಕಿಂದೆಗೆ ಹೋದರೆ ಇವೆಲ್ಲವನ್ನು ಒಂದು ದಿನದಲ್ಲಿಯೇ ನೋಡಬಹುದು ಎಂಬ ವ್ಯವಸ್ಥೆ ಕಲ್ಪಿಸಿದರೆ ಪ್ರವಾಸಿಗರು, ಭಕ್ತರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಲಿದೆ.

ಕಿಷ್ಕಿಂದೆಗೆ ಪ್ರತಿ ಶನಿವಾರ ಸುಮಾರು 10-12 ಸಾವಿರ ಭಕ್ತರು ಬಂದರೆ, 2ನೇ, 4ನೇ ಶನಿವಾರ 15-20 ಸಾವಿರ ಭಕ್ತರು ಬರುತ್ತಾರೆ. ಹಂಪಿಗೆ ಬರುವ ದೇಶದ ಪ್ರವಾಸಿಗರಲ್ಲಿ ಶೇ.80ಕ್ಕಿಂತ ಹೆಚ್ಚಿನವರು ಕಿಷ್ಕಿಂದೆಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ಹಂಪಿಗೆ ಆಗಮಿಸುವ ವಿದೇಶಿಯರು
ಸಹ ಸ್ವಲ್ಪ ಪ್ರಮಾಣದಲ್ಲಿ ಕಿಷ್ಕಿಂದೆಗೆ ಆಗಮಿಸಲು ಆರಂಭಿಸಿದ್ದಾರೆ. ಹಂಪಿಗೆ ಪ್ರತಿ ವರ್ಷ ಸರಾಸರಿ 2 ಲಕ್ಷಕ್ಕೂ ಅಧಿಕ ವಿದೇಶಿಯರು ಭೇಟಿ ನೀಡುತ್ತಿದ್ದು, ಇದರಲ್ಲಿ ಅರ್ಧದಷ್ಟು ಪ್ರವಾಸಿಗರು ಕಿಷ್ಕಿಂದೆಗೆ ಭೇಟಿ ನೀಡಿದರೂ ಪ್ರವಾಸೋದ್ಯಮ ನೆಗೆತ ಕಾಣಲಿದೆ. ಜತೆಗೆ ಕಿಷ್ಕಿಂದೆ ಬೆಟ್ಟದಲ್ಲಿನ ಸನ್‌ ಸೆಟ್‌ ವಿದೇಶಿಯರು ಸೇರಿದಂತೆ ಅನೇಕರನ್ನು ಆಕರ್ಷಿಸುತ್ತಿದೆ.

ಕಾಶಿ ಮಾದರಿಯಾಗಲಿ
ಕಾಶಿ ಪುಣ್ಯಕ್ಷೇತ್ರವಾದರೂ ದೊಡ್ಡ ನಿರೀಕ್ಷೆ ಇರಿಸಿಕೊಂಡು ಹೋದ ಭಕ್ತರಿಗೆ ಅಲ್ಲಿನ ಸೌಲಭ್ಯ, ಇಕ್ಕಟ್ಟಾದ ರಸ್ತೆಗಳು, ಇನ್ನಿತರೆ ವ್ಯವಸ್ಥೆ ನಿರಾಸೆ ತರಿಸುವಂತಿತ್ತು. ಪ್ರಧಾನಿ ನರೇಂದ್ರ ಮೋದಿ ಇಚ್ಛಾಶಕ್ತಿಯಿಂದ ಇಂದು ಕಾಶಿ ಕ್ಷೇತ್ರ ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ದೇಶ-ವಿದೇಶಗಳ ಭಕ್ತರು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಕಾಶಿಯಷ್ಟೇ ಅದ್ಧೂರಿತನದಲ್ಲಿ ಇಲ್ಲವಾದರೂ, ಕನಿಷ್ಟ ಅದರ ಮಾದರಿಯಲ್ಲಾದರೂ ಕಿಷ್ಕಿಂದೆ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಭವ್ಯಕಾಶಿ, ದಿವ್ಯ ಕಾಶಿ ಹೆಸರಿನ ಪ್ರಚಾರ ದೇಶವ್ಯಾಪ್ತಿಯಾಗಿ ತನ್ನದೇ ಪ್ರಭಾವ ಬೀರತೊಡಗಿದೆ. ಕಾಶಿ ವಿಶ್ವನಾಥನ ದರ್ಶನ ಜತೆಗೆ ಆಧುನಿಕ ರೀತಿಯಲ್ಲಿ ಶೃಂಗಾರಗೊಂಡ ಕಾಶಿ ನೋಡುವುದಕ್ಕಾಗಿಯೇ ಅನೇಕರು ಅಲ್ಲಿಗೆ ತೆರಳುತ್ತಿದ್ದಾರೆ. ದೇಶದ ವಿವಿಧ ಭಾಗಗಳಿಂದ ಕಾಶಿಗೆ ತೆರಳುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಅದೇ ರೀತಿ ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಜನರು ಕಿಷ್ಕಿಂದೆಯ ಅಭಿವೃದ್ಧಿ, ಪ್ರವಾಸೋದ್ಯಮ ದೃಷ್ಟಿಯಿಂದ ಸುತ್ತಮುತ್ತಲ ಪ್ರದೇಶದ ವೀಕ್ಷಣೆಗಾಗಿಯೇ ಹೆಚ್ಚು ಹೆಚ್ಚು ಪ್ರವಾಸಿಗರು ಬರುವಂತಾಗಬೇಕು. ಆ ನಿಟ್ಟಿನಲ್ಲಿ ಅಭಿವೃದ್ಧಿ ಮಾಡುವ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ತೋರಬೇಕಾಗಿದೆ.

ಹಿಂದೂ ಪರಂಪರೆಯಲ್ಲಿ ಆಂಜನೇಯನಿಗೆ ಮಹತ್ವದ ಸ್ಥಾನವಿದೆ. ದೇಶದಲ್ಲಿ ಹನುಮನ ದೇವಸ್ಥಾನ, ಹನುಮನ ಭಕ್ತರು ಇಲ್ಲದ ಊರೇ ಇಲ್ಲ ಎಂಬ ಪ್ರತೀತಿ ಇದೆ. ಅಷ್ಟರ ಮಟ್ಟಿಗೆ ಆಂಜನೇಯ ತನ್ನ ಪ್ರಭಾವ ಬೀರಿದ್ದು, ಹನುಮನ ಜನ್ಮಸ್ಥಳ ಕಿಷ್ಕಿಂದೆಯನ್ನು ಮಹತ್ವದ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಭಕ್ತರು-ಪ್ರವಾಸಿಗರ ಹೆಚ್ಚಿನ ಆಕರ್ಷಣೆಗೆ ಒತ್ತು ನೀಡಬೇಕಾಗಿದೆ.

ರಾಜ್ಯದಲ್ಲಿ ಕಿಷ್ಕಿಂದೆ, ಧರ್ಮಸ್ಥಳ ಸೇರಿದಂತೆ ವಿವಿಧ ಪೂಜ್ಯಸ್ಥಳ ಹಾಗೂ ಪ್ರವಾಸಿತಾಣದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಸಿದ್ಧನಿದ್ದೇನೆ. ಕರ್ನಾಟಕದಲ್ಲಿ ಪ್ರವಾಸೋದ್ಯಮದ ದೊಡ್ಡ ಸಂಪತ್ತು ಇದೆ. ಅದರ ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ವಿಶ್ವದ ಗಮನ ಸೆಳೆಯುವ ತಾಣಗಳು ಇವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಡಿ ಇರಿಸಿದರೆ ಖಂಡಿತಾಗಿಯೂ ಕೇಂದ್ರ ಮಟ್ಟದಲ್ಲಿ ನೆರವಿಗೆ ಪ್ರಾಮಾಣಿಕ ಯತ್ನ ತೋರುವೆ.
ಪ್ರಹ್ಲಾದ ಜೋಶಿ,
ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next