Advertisement
ಶ್ಯಾಮಾ ಪವಾರ್‌ರ ಕನಸು
Related Articles
Advertisement
ಎಲ್ಲರೂ ಮಾಸ್ಟರ್ ಆರ್ಟಿಸ್ಟ್‌ಗಳೇ!:
ಇಲ್ಲಿ 25-30 ಮಹಿಳೆಯರು ಮಾಸ್ಟರ್ ಆರ್ಟಿಸ್ಟ್ ಗಳಿದ್ದಾರೆ. ಬಾಳೆಯ ನಾರು, ತೊಗಟೆಯನ್ನು ನೀರಲ್ಲಿ ನೆನೆಸಿ ಒಣಗಿಸುವ, ರೂಫ್, ಲೈನಿಂಗ್, ಡೆಕೋರೇಷನ್ ಸೇರಿದಂತೆ ವಿವಿಧ ಹಂತದ ಪ್ರಕ್ರಿಯೆಗಳಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ದುಡಿಯುತ್ತಿದ್ದಾರೆ. ಇವರೆಲ್ಲ ಹಿಂದೊಮ್ಮೆ ಕೃಷಿ ಕಾರ್ಮಿಕರು ಇಲ್ಲವೆ ಮನೆವಾರ್ತೆಗೆ ಸೀಮಿತವಾಗಿದ್ದವರು! ಇಂಥವರೀಗ ತರೇಹವಾರಿ ಡಿಸೈನ್‌ನ ಉತ್ಪನ್ನಗಳನ್ನು ಏಕಾಂಗಿಯಾಗಿ ತಯಾರಿಸುವಷ್ಟು ನಿಪುಣರು. ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಇಲ್ಲಿರುವ ಸೀನಿಯರ್‌ಗಳೇ ತರಬೇತಿ ಕೊಡುವುದು ವಿಶೇಷ. ನವನವೀನ ಡಿಸೈನ್ ರೂಪಿಸುವುದರ ಬಗ್ಗೆ ಆಗಾಗ್ಗೆ ನುರಿತವರಿಂದ ತರಬೇತಿ ಶಿಬಿರ ನಡೆಸಿ ಕಾರ್ಮಿಕರು ಸದಾ ಅಪ್ಡೆàಟ್ ಆಗಿರುವಂತೆ ನೋಡಿಕೊಳ್ಳುವುದು ಇಲ್ಲಿನ ಮತ್ತೂಂದು ಹೆಗ್ಗಳಿಕೆ. ಅತ್ಯುತ್ತಮ ಗುಣಮಟ್ಟ ಆನೆಗೊಂದಿಯಲ್ಲಿ ತಯಾರಾಗುವ ಪ್ರತಿ ಉತ್ಪನ್ನಗಳ ವೈಶಿಷ್ಟ್ಯ. ಇಲ್ಲಿನ ಉತ್ಪನ್ನಗಳಿಗೆ ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ವೇದಿಕೆ, ಬೇಡಿಕೆ, ಮನ್ನಣೆ ಸಿಗುತ್ತಿದೆ.
ವರ್ಷವಿಡೀ ಕೆಲಸ! :
“ನನ್ನ ಗಂಡನ ಆರೋಗ್ಯ ಸರಿ ಇಲ್ಲ. ಸಂಸಾರದ ಜವಾಬ್ದಾರಿ ಸಂಪೂರ್ಣ ನನ್ನ ಮೇಲೆ. ಬೇರೆಡೆ ಕೆಲಸ ಸಿಕ್ಕರೂ ಅದು ಪೂರ್ಣಾವಧಿಯದಲ್ಲ. ಹೀಗಾಗಿ ಬದುಕು ಸಂಕಷ್ಟದಲ್ಲಿತ್ತು. ಪರ್ಮನೆಂಟ್ ಉದ್ಯೋಗದ ಹುಡುಕಾಟದಲ್ಲಿದ್ದೆ. ಇಲ್ಲಿ ಬಂದು ಸೇರಿದೆ. ಈಗ ಬದುಕು ಸುಧಾರಿಸಿದೆ’ ಎನ್ನುವಾಗ್ಗೆ ತಾಜುನ್‌ರವರ ಮೊಗದಲ್ಲಿ ಸಂತೃಪ್ತಭಾವ ಇತ್ತು. ತಾಜುನ್‌ರಂತೆ ಅಪ್ಸರಾ, ಪುಷ್ಪ, ಲಕ್ಷಿ¾.. ಹೀಗೆ ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಲ್ಲೂ ಹೆಚ್ಚುಕಮ್ಮಿ ಇಂಥ ಕತೆ-ವ್ಯಥೆಗಳಿವೆ. ಅವರೆಲ್ಲ ಇಂದು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ದಿನಕ್ಕೆ 250-300 ರೂ ಗಳಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ವಾಭಿಮಾನಿ, ಸ್ವಾವಲಂಬಿ, ಸ್ವತಂತ್ರವಾಗಿ ಬದುಕುತ್ತಿದ್ದಾರೆ ಎನ್ನುತ್ತಾರೆ ಟ್ರಸ್ಟ್‌ನ ವ್ಯವಸ್ಥಾಪಕಿ ನಂದಿನಿ.
ಯಂತ್ರಗಳ ಬಳಕೆ ಇಲ್ಲ…
ಬಾಳೆ ನಾರು ಮತ್ತು ತೊಗಟೆ ಬಳಸಿ ತಯಾರಿಸುವ ಉತ್ಪನ್ನಗಳಿಗೆ ತಮಿಳುನಾಡು ಮತ್ತು ಕೇರಳ ಹೆಸರುವಾಸಿ. ಆದರೆ ಅಲ್ಲಿಗಿಂತ ಗ್ರಾಹಕರು ಹೆಚ್ಚು ಆಕರ್ಷಿತರಾಗೋದು ಆನೆಗೊಂದಿಯಲ್ಲಿ ತಯಾರಾಗುವ ಉತ್ಪನ್ನಗಳಿಗೆ! ಕಾರಣ ಇಷ್ಟೆ- ಈ ಉತ್ಪನ್ನಗಳ ಬಳಕೆಯಲ್ಲಿ ಯಂತ್ರಗಳನ್ನು ಬಳಸುವುದಿಲ್ಲ. ಸಂಪೂರ್ಣವಾಗಿ ಮಾನವ ಶ್ರಮದಿಂದ ತಯಾರಾಗುತ್ತವೆ. ಸೀಜನ್‌ನಲ್ಲಿ ಪ್ರವಾಸಿಗರು ಈ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದರೆ, ಅನ್ ಸೀಜನ್‌ನಲ್ಲಿ ಆನ್ ಲೈನ್ ಮೂಲಕ ಕೊಳ್ಳುತ್ತಾರೆ. ಒಂದು ಉತ್ಪನ್ನದ ಕನಿಷ್ಠ ಬೆಲೆ 200 ರೂ., ಗರಿಷ್ಠ ಬೆಲೆ 3 ಲಕ್ಷಕ್ಕೂ ಮಿಕ್ಕು ಇದೆ! ವಿಶೇಷವೇನೆಂದರೆ ಇದುವರೆಗೂ ಸರಕಾರ, ಸರಕಾರೇತರ ಸಂಸ್ಥೆಗಳ ನಯಾಪೈಸೆ ಧನಸಹಾಯವಿಲ್ಲದೇ ಸ್ವಂತ ಪರಿಶ್ರಮದಿಂದ ಈ ವರ್ಕ್ ಶಾಪ್ ಎದ್ದು ನಿಂತಿದೆ! ಆನೆಗೊಂದಿ ಸೀಮೆಯ 300ಕ್ಕೂ ಹೆಚ್ಚು ಕುಟುಂಬಗಳಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ ನೀಡಿದ ಹೆಗ್ಗಳಿಗೆ, ಅಗ್ಗಳಿಕೆ ಇದರದ್ದು. ಇಷ್ಟು ವರ್ಷಗಳ ಸುದೀರ್ಘ ಪಯಣದಲ್ಲಿ ಅನೇಕ ಏಳು-ಬೀಳು, ಕಷ್ಟ-ನಷ್ಟಗಳನ್ನು ಕಂಡರೂ ಅದನ್ನೆಲ್ಲ ಮೆಟ್ಟಿ ಈಗ ಸುಸ್ಥಿರತೆ ಸಾಧಿಸಿದೆ. ಪ್ರತಿ ತಿಂಗಳೂ 2 ಲಕ್ಷ ರೂ.ಗೂ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸುತ್ತಿದೆ.
ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ…
ಇತ್ತೀಚೆಗಷ್ಟೆ ಆನೆಗೊಂದಿ “ಕ್ರಾಫ್ಟ್ ವಿಲೇಜ್’ ಎಂಬ ಗರಿಮೆಗೆ ಪಾತ್ರವಾಗಿದೆ. ಇದರಲ್ಲಿ ಈ ವರ್ಕ್ ಶಾಪ್‌ನದ್ದು ನಿರ್ಣಾಯಕ ಪಾತ್ರ. ವರ್ಕ್ ಶಾಪ್, ಬರುವ ಲಾಭಾಂಶವನ್ನು ತನ್ನ ಕೆಲಸಗಾರರ ಮನೋರಂಜನೆ, ಆರೋಗ್ಯ, ಮಕ್ಕಳ ಶಿಕ್ಷಣ ಸೇರಿದಂತೆ ಮೂಲಭೂತ ಅವಶ್ಯಕತೆ, ಸೌಲಭ್ಯಗಳ ಪೂರೈಕೆಗೆ ವಿನಿಯೋಗಿಸುತ್ತದೆ. ಇದೆಲ್ಲ ಹರಿದರ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ನಡೆಯುತ್ತದೆ. ಕಸದಿಂದ ರಸ ತಯಾರಿಸಬಹುದು ಎಂಬುದನ್ನು ನಿರೂಪಿಸಿದ್ದು ಮಾತ್ರವಲ್ಲ; ಈ ಉದ್ಯಮದ ಮೂಲಕವೇ ತಮ್ಮ ಬದುಕಿಗೆ ಒಂದು ದಾರಿಯನ್ನೂ ಹುಡುಕಿಕೊಂಡ, ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಾ ಇರುವ ಕಿಷ್ಕಿಂದಾ ಟ್ರಸ್ಟ್ ನ ನಾರಿಯರ ಕೆಲಸಕ್ಕೆ ಜೈ ಅನ್ನೋಣ. ಅವರ ಕೆಲಸ ನಾಲ್ಕು ಮಂದಿಗೆ ಸ್ಪೂರ್ತಿ ಕೊಡಲಿ ಎಂದು ಹಾರೈಸೋಣ.
ಯಾರು ಈ ಶ್ಯಾಮಾ ಪವಾರ್? :
ಮೂಲತಃ ಪೂನಾದವರಾದ ಶ್ಯಾಮಾ ಪವಾರ್, ಕಲಾವಿದೆ ಹಾಗೂ ವಿನ್ಯಾಸಗಾರ್ತಿ. ಪ್ರವಾಸ ಮಾಡುವುದು ಇವರ ಹವ್ಯಾಸ. ಹೀಗೆ ಪ್ರವಾಸ ಮಾಡುತ್ತಾ ಹಂಪಿಗೆ ಬಂದಿದ್ದು 1991ರಲ್ಲಿ. ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತರು. ಇಲ್ಲೇ ಖಾಯಂ ಆಗಿ ನೆಲೆಸಲು ನಿರ್ಧರಿಸಿ 1994ರಲ್ಲಿ ಆನೆಗೊಂದಿಯನ್ನು ಆಯ್ಕೆ ಮಾಡಿಕೊಂಡು, ಈ ಭಾಗದ ರೈತಾಪಿ- ಕಾರ್ಮಿಕ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಒದಗಿಸಲು ಪಣ ತೊಟ್ಟರು. ಅದಕ್ಕಾಗಿ “ಕಿಷ್ಕಿಂದ ಟ್ರಸ್ಟ್’ ಹುಟ್ಟು ಹಾಕಿ, ಅದರಡಿಯಲ್ಲಿ ಇಲ್ಲಿಯ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಅನವರತ ದುಡಿಯುತ್ತಿದ್ದಾರೆ.
ಇದೊಂದು ಆರ್ಟ್ ಗ್ಯಾಲರಿ! ;
ಆನೆಗೊಂದಿಯಲ್ಲಿರುವ ಬನಾನಾ ಫೈಬರ್ ಶಾಪ್‌ನಲ್ಲಿ ನಾನಾ ನಮೂನೆಯ ಟೋಪಿ, ಬುಟ್ಟಿ, ಬ್ಯಾಗ್, ಕೈಚೀಲ, ಟೇಬಲ್ ಮ್ಯಾಟ್, ಚಾಪೆ, ಧಾನ್ಯಗಳನ್ನು ಸಂಗ್ರಹಿಸಿ ಇಡುವ ಬುಟ್ಟಿ, ದೀಪಾಲಂಕಾರದ ಬುಟ್ಟಿ ಸೇರಿದಂತೆ ವೈವಿಧ್ಯಮಯ ವಿನ್ಯಾಸ, ಗಾತ್ರ, ಬಣ್ಣದ ಅಲಂಕಾರಿಕ, ಮನೆ ಬಳಕೆಗೆ ಬೇಕಾಗುವ ಅಸಂಖ್ಯಾತ ವಸ್ತುಗಳಿವೆ. ನೋಡಿದ ತಕ್ಷಣಕ್ಕೆ ಈ ಶಾಪ್ ಒಂದು ಆರ್ಟ್ ಗ್ಯಾಲರಿ, ಮ್ಯೂಸಿಯಂನಂತೆ ಕಾಣುತ್ತದೆ!
-ಸ್ವರೂಪಾನಂದ ಕೊಟ್ಟೂರು