ಗಂಗಾವತಿ: ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಕೆಳಗಡೆ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳಲು ಸರಕಾರ ನಿರ್ಧರಿಸಿದ್ದು ಸೋಮವಾರ ಆನೆಗೊಂದಿ ಗ್ರಾ.ಪಂ.ಕಚೇರಿಯಲ್ಲಿ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಶ ಕಿಶೋರ್ ನೇತೃತ್ವದಲ್ಲಿ ರೈತರು ಮತ್ತು ಗ್ರಾಮಸ್ಥರ ಸಭೆ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಶ ಕಿಶೋರ್ ಮಾತನಾಡಿ, 2013 ಕೇಂದ್ರ ಸರಕಾರದ ಭೂಸ್ವಾಧೀನ ಕಾಯ್ದೆಯಡಿ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಕೆಳಗಡೆ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ರೈತರ 61 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಅಗತ್ಯ ಕಟ್ಟಡಗಳನ್ನು 120 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಬೇಕಿದ್ದು ರೈತರ ಭೂಮಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಲ್ಪಿಸಲಾಗುತ್ತದೆ. ಸರಕಾರದ ನಿಯಮಾವಳಿಗಳ ಪ್ರಕಾರ ಅಂದಾಜು 42 ಲಕ್ಷ ರೂ. ಒಂದು ಎಕರೆಗೆ ನಿಗದಿ ಮಾಡಬಹುದಾಗಿದ್ದು ಈ ಪರಿಹಾರ ಭೂಮಿ ಸರ್ವೇ ನಂಬರ್‌ಗಳನ್ನು ಅವಲಂಭಿಸಿರುತ್ತದೆ.ಸದ್ಯ ರೈತರ ಜತೆ ಪ್ರಥಮ ಸಭೆ ನಡೆಸಿ ಭೂಮಿ ಕೊಡುವಂತೆ ಕೋರಲಾಗಿದೆ. ರೈತರು 15 ದಿನಗಳ ಕಾಲಾವಕಾಶ ಕೇಳಿದ್ದು ಜು.15 ರಂದು ಪುನಹ ಎರಡನೇಯ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಾಗುತ್ತದೆ. ರೈತರು ಭೂಮಿ ಕೊಡಲು ಮೊದಲ ಹಂತದಲ್ಲಿ ಒಪ್ಪದಿದ್ದರೆ 2013 ರ ಕೇಂದ್ರ ಸರಕಾರದ ನಿಯಮದಂತೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲಾಗುತ್ತದೆ.ರೈತರ ಎಲ್ಲಾ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಲಾಗುತ್ತದೆ ಎಂದರು.
ರೈತ ಮುಖಂಡ ಸುದರ್ಶನವರ್ಮಾ ಮಾಡನಾಡಿ, ಭೂಮಿ ಕಳೆದುಕೊಳ್ಳಲು ರೈತರಿಗೆ ಇಷ್ಟವಿಲ್ಲ ಆದ್ದರಿಂದ ಜಿಲ್ಲಾಡಳಿತ ಕೂಡಲೇ ಮುಖ್ಯಮಂತ್ರಿಯವರ ಬಳಿಗೆ ನಿರಾಶ್ರಿತರಾಗುವ ರೈತರನ್ನು ಕರೆದುಕೊಂಡು ಹೋಗಿ ಮಾತುಕತೆ ನಡೆಸಬೇಕು. ಅಭಿವೃದ್ಧಿ ಕಾರ್ಯಕ್ಕೆ ಪ್ರಸ್ತಾವನೆ ಕಳಿಸಿರುವ 61 ಎಕರೆ ಭೂಮಿಯ ಬದಲು ಬಲಭಾಗದ ಭೂಮಿ ಮತ್ತು ಸರಕಾರಿ ಭೂಮಿಯನ್ನು ಮೂಲಸೌಕರ್ಯ ಕಲ್ಪಿಸಲು ಬಳಕೆ ಮಾಡಿಕೊಳ್ಳಬೇಕು ಇದು ಸಾಧ್ಯವಾಗದಿದ್ದರೆ ವೈಜ್ಞಾನಿಕವಾಗಿ ಸದ್ಯ ಆನೆಗೊಂದಿ ಭಾಗದಲ್ಲಿ ಭೂಮಿಗೆ ಹೆಚ್ಚಿನ ಬೇಡಿಕೆ ಇದ್ದು ಅದರಂತೆ ಸರಕಾರ ಭೂಮಿಗೆ ಪರಿಹಾರ ನೀಡಬೇಕು.
ಇದನ್ನೂ ಓದಿ : ನನ್ನ ಕೇಸಲ್ಲೂ ಸುಳ್ಳು ಹೇಳಿದ್ದ ಶ್ರೀಕುಮಾರ್: ನಂಬಿ ನಾರಾಯಣನ್
ಸಭೆಯಲ್ಲಿ ರಾಜವಂಶಸ್ಥರಾದ ಲಲಿತಾರಾಣಿ, ಶ್ರೀಕೃಷ್ಣದೇವರಾಯ, ಹರಿಹರದೇವರಾಯಲು, ಎಡಿಸಿ ಎಂ.ಪಿ.ಮಾರುತಿ, ಸಹಾಯಕ ಆಯುಕ್ತ ಬಸವಣ್ಣೆಪ್ಪ, ತಹಸೀಲ್ದಾರ್ ಯು.ನಾಗರಾಜ, ರೈತರಾದ ರಾಮಕೃಷ್ಣಶೆಟ್ಟಿ, ಸುದರ್ಶನವರ್ಮಾ, ಶ್ರೀನಾಥ, ಪ್ರಶಾಂತ, ಮರಿಸ್ವಾಮಿ, ಕುಮಾರ, ಶಿವಕುಮಾರ, ತಿರುಕಪ್ಪ, ನಿಂಗಪ್ಪ, ಮಲ್ಲಪ್ಪ, ರಫಿ, ಕೆ.ವೆಂಕಟೇಶ, ಚಂದ್ರಶೇಖರರೆಡ್ಡಿ ಸೇರಿ ಅನೇಕರಿದ್ದರು.